ADVERTISEMENT

ಆಪರೇಷನ್‌ ಜೆಡಿಎಸ್‌ ಮಾಡುತ್ತೇವೆ: ಸುರೇಶ್‌ಗೌಡ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2018, 18:46 IST
Last Updated 19 ಸೆಪ್ಟೆಂಬರ್ 2018, 18:46 IST
ಸುರೇಶ್‌ಗೌಡ
ಸುರೇಶ್‌ಗೌಡ   

ಮಂಡ್ಯ: ‘ಕೆಲ ಬಿಜೆಪಿ ಶಾಸಕರು ನನ್ನ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಅವರನ್ನು ನಮ್ಮ ಪಕ್ಷದತ್ತ ಹೇಗೆ ಸೆಳೆಯಬೇಕು ಎಂಬುದು ಚೆನ್ನಾಗಿ ಗೊತ್ತು. ನಮ್ಮ ಪಕ್ಷದ ವರಿಷ್ಠರು ಸೂಚನೆ ಕೊಟ್ಟರೆ ಆಪರೇಷನ್‌ ಜೆಡಿಎಸ್‌ ಮಾಡಿ ತೋರಿಸುತ್ತೇವೆ. ರಾಜ್ಯದಲ್ಲಿ ಬಿಜೆಪಿ ಇಲ್ಲದಂತೆ ಮಾಡುತ್ತೇವೆ’ ಎಂದು ನಾಗಮಂಗಲ ಶಾಸಕ ಸುರೇಶ್‌ಗೌಡ ಹೇಳಿದರು.

ಮದ್ದೂರು ತಾಲ್ಲೂಕು ಆಬಲವಾಡಿ ಗ್ರಾಮದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಬಿಜೆಪಿ ಸೇರುವಂತೆ ನನಗೂ ಕೆಲವು ಬ್ರೋಕರ್‌ಗಳು ಆಮಿಷ ತೋರಿಸಿದ್ದರು. ಆದರೆ, ನಾನು ಮಾರಾಟಕ್ಕಿಲ್ಲ ಎಂದು ಅವರಿಗೆ ಹೇಳಿದೆ. ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ ದಿನದಿಂದಲೂ ಬಿಜೆಪಿ ಮುಖಂಡರು ಜೆಡಿಎಸ್‌, ಕಾಂಗ್ರೆಸ್‌ ಶಾಸಕರಿಗೆ ಆಮಿಷ ತೋರುತ್ತಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್‌ ಹಾಗೂ ಕೆಲ ಸಚಿವರನ್ನು ಹೊರತುಪಡಿಸಿ ಎಲ್ಲರಿಗೂ ಆಮಿಷ ಒಡ್ಡಿದ್ದಾರೆ’ ಎಂದು ಹೇಳಿದರು.

ADVERTISEMENT

‘ಬ್ರೋಕರ್‌ಗಳು ಎಲ್ಲಾ ಪಕ್ಷದವರ ಜೊತೆ ಸ್ನೇಹದಿಂದ ಇರುತ್ತಾರೆ. ಸ್ನೇಹಿತರ ಸೋಗಿನಲ್ಲಿ ಬಿಜೆಪಿ ಸೇರುವಂತೆ ಒತ್ತಡ ತರುತ್ತಾರೆ. ಅದರಂತೆ ನನಗೂ ಆಹ್ವಾನ ಕೊಟ್ಟರು, ಆದರೆ ನಾನು ತಿರಸ್ಕರಿಸಿದೆ. ಆಪರೇಷನ್‌ ಮಾಡುವುದು ಕಷ್ಟವಲ್ಲ, ಆದರೆ ಮತ್ತೊಮ್ಮೆ ಗೆದ್ದು ಬರುವುದು ಕಷ್ಟ’ ಎಂದರು.

‘ಸರ್ಕಾರ ಅಸ್ಥಿರಗೊಳಿಸುವುದೇ ಬಿಜೆಪಿಯವರ ಹುಟ್ಟುಗುಣ’

ಚಿಕ್ಕಬಳ್ಳಾಪುರ: ‘ಜೆಡಿಎಸ್‌, ಕಾಂಗ್ರೆಸ್ ಮೈತ್ರಿ ಸರ್ಕಾರ ಚೆನ್ನಾಗಿ ನಡೆದಿದೆ. ಆದರೆ ಬಿಜೆಪಿಯವರು ಇಬ್ಬರ ನಡುವೆ ಸಂಬಂಧ ಕೆಡಿಸುವುದು, ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವುದು ಬಿಜೆಪಿಯವರ ಹುಟ್ಟುಗುಣ’ ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಆರೋಪಿಸಿದರು.

ತಾಲ್ಲೂಕಿನ ನಂದಿಬೆಟ್ಟದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಮ್ಮಿಶ್ರ ಸರ್ಕಾರಕ್ಕೆ ಯಾವುದಾದರೂ ರೀತಿಯಲ್ಲಿ ಕೆಟ್ಟ ಹೆಸರು ತಂದು ತಾವು ಅಧಿಕಾರ ಹಿಡಿಯಬೇಕು ಎಂದು ಬಿಜೆಪಿಯವರು ತಂತ್ರಗಾರಿಕೆ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ತಳಮಳವಾಗುತ್ತಿದೆ. ಬಿಜೆಪಿಯವರು ಅಧಿಕಾರ ಕಸಿದುಕೊಳ್ಳಲು ಬಡಿದಾಡುತ್ತಿದ್ದಾರೆ. ಆದರೆ ಅವರಿಗೆ ಅಧಿಕಾರ ಕಸಿದುಕೊಳ್ಳಲು ಆಗುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.