ADVERTISEMENT

ನವೆಂಬರ್‌ಗೆ ಮಹಿಳಾ ವಿವಿ ಕಟ್ಟಡ ಸಿದ್ಧ

ಹೊರಾವರಣ ಕೇಂದ್ರದ ಆವರಣಕ್ಕೆ ಕುಲಪತಿ, ಕುಲಸಚಿವರ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 14:01 IST
Last Updated 4 ಆಗಸ್ಟ್ 2020, 14:01 IST
ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ.ಓಂಕಾಕ ಕಾಕಡೆ, ಕುಲಸಚಿವೆ ಪ್ರೊ.ಸುನಂದಮ್ಮ ಮಂಡ್ಯ ಹೊರಾವರಣ ಕೇಂದ್ರದ ಕಾಮಗಾರಿ ಪರಿಶೀಲಿಸಿದರು
ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ.ಓಂಕಾಕ ಕಾಕಡೆ, ಕುಲಸಚಿವೆ ಪ್ರೊ.ಸುನಂದಮ್ಮ ಮಂಡ್ಯ ಹೊರಾವರಣ ಕೇಂದ್ರದ ಕಾಮಗಾರಿ ಪರಿಶೀಲಿಸಿದರು   

ಮಂಡ್ಯ: ತಾಲ್ಲೂಕಿನ ಬಿ.ಹೊಸೂರು ಗ್ರಾಮದಲ್ಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ಹೊರಾವಣ ಕೇಂದ್ರ ಹಾಗೂ ಸಂಶೋಧನಾ ಕೇಂದ್ರದ ನೂತನ ಕಟ್ಟಡ ಕಾಮಗಾರಿ ನವೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದ್ದು ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಬಳಕೆಗೆ ಮುಕ್ತವಾಗಲಿದೆ.

ವಿವಿ ಕುಲಪತಿ ಪ್ರೊ.ಓಂಕಾರ ಕಾಕಡೆ, ಕುಲಸಚಿವೆ ಪ್ರೊ.ಸುನಂದಮ್ಮ ಮಂಗಳವಾರ ಕೇಂದ್ರಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು. ನಿರ್ಮಾಣ ಜವಾಬ್ದಾರಿ ವಹಿಸಿಕೊಂಡಿರುವ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಹಾಗ ಗುತ್ತಿಗೆದಾರರೊಂದಿಗೆ ಚರ್ಚೆ ನಡೆಸಿದರು. ಕಟ್ಟಡ ಕಾಮಗಾರಿಯ ಗುಣಮಟ್ಟದ ಬಗ್ಗೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಕಟ್ಟಡ ಕಾಮಗಾರಿ 2019ರಲ್ಲಿ ಆರಂಭಗೊಂಡಿತು. ₹ 5 ಕೋಟಿ ವೆಚ್ಚದಲ್ಇ ನಿರ್ಮಾಣಗೊಳ್ಳುತ್ತಿರುವ ಕಟ್ಟಡ ಮೂರು ಅಂತಸ್ತುಗಳನ್ನು ಹೊಂದಿದೆ. ತಳಮಹಡಿಯಲ್ಲಿ ಆಡಳಿತ ಕಚೇರಿ ಇರಲಿದ್ದು ಮೊದಲ ಮಹಡಿಯಲ್ಲಿ ತರಗತಿಗಳು, ಗ್ರಂಥಾಲಯ, ವಿಶ್ರಾಂತಿ ಕೊಠಡಿ, ಸಭಾಂಗಣ ನಿರ್ಮಾಣ ಮಾಡಲಾಗುತ್ತಿದೆ. 2ನೇ ಮಹಡಿಯಲ್ಲಿ ತರಗತಿಗಳು ಸೇರಿದಂತೆ ಕಂಪ್ಯೂಟರ್‌ ಲ್ಯಾಬ್‌ ನಿರ್ಮಿಸಲಾಗುತ್ತಿದೆ.

ADVERTISEMENT

ಕೇಂದ್ರದಲ್ಲಿ ಎಂ.ಕಾಂ ಸೇರಿ ಕನ್ನಡ, ಇಂಗ್ಲಿಷ್‌, ಮಹಿಳಾ ಅಧ್ಯಯನ ಹಾಗೂ ಗಣಿತ ಸ್ನಾತಕೋತ್ತರ ಪದವಿ ತರಗತಿಗಳು ನಡೆಯುತ್ತಿವೆ. ಕೊರೊನಾ ಸಂದರ್ಭದಲ್ಲಿ ಸದ್ಯ ಆನ್‌ಲೈನ್‌ನಲ್ಲಿ ಪಾಠಕ್ಕೆ ಆದ್ಯತೆ ನೀಡಲಾಗಿದೆ. 3ನೇ ಸೆಮಿಸ್ಟರ್‌ಗೆ ಆನ್‌ಲೈನ್‌ ಮೂಲಕ ದಾಖಲಾಗಿ ಮಾಡಿಕೊಳ್ಳಲಾಗುತ್ತಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಮೊದಲ ಸೆಮಿಸ್ಟರ್‌ ದಾಖಲಾತಿ ಆರಂಭವಾಗಲಿದೆ.

ಕೇಂದ್ರದ ಕಚೇರಿಗೆ ಭೇಟಿ ನೀಡಿದ ಕುಲಪತಿ, ವಿಶೇಷಾಧಿಕಾರಿ ಪ್ರೊ. ಎಚ್‌.ಎಂ.ಹೇಮಲತಾ, ಸಹಾಯಕ ಪ್ರಾಧ್ಯಾಪಕ ಡಾ.ಎಸ್‌.ಆರ್‌.ಗಣೇಶ್ ಎಸ್.ಆರ್ ಹಾಗೂ ಇತರ ಸಿಬ್ಬಂದಿಯ ಜೊತೆ ಶೈಕ್ಷಣಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ತೆಂಗಿನ ತೋಟ ರೂಪಿಸಿ: ಸುಂದರ ಪರಿಸರದಲ್ಲಿ ಅರಳುತ್ತಿರುವ ಹೊರಾವರಣ ಕೇಂದ್ರದಲ್ಲಿ ಸಾವಿರಕ್ಕೂ ಹೆಚ್ಚು ತೆಂಗಿನ ಸಸಿ ನೆಟ್ಟು ಬೆಳೆಸಬೇಕು ಎಂದು ಕುಲಪತಿ ಸಿಬ್ಬಂದಿಗೆ ಸೂಚನೆ ನೀಡಿದರು. ಆ ಉದ್ದೇಶಕ್ಕಾಗಿ ಆವರಣದಲ್ಲಿ ಒಂದು ತೆಂಗಿನ ಸಸಿ ನೆಟ್ಟು ನೀರೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.