ADVERTISEMENT

ಮಂಡ್ಯ: ತವರಿಗೆ ತೆರಳಿದ ಕೂಲಿಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 4 ಮೇ 2020, 9:46 IST
Last Updated 4 ಮೇ 2020, 9:46 IST
ಯಾದಗಿರಿ, ಬಳ್ಳಾರಿ ಜಿಲ್ಲೆಗಳ ಕೂಲಿ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹೋದರು
ಯಾದಗಿರಿ, ಬಳ್ಳಾರಿ ಜಿಲ್ಲೆಗಳ ಕೂಲಿ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹೋದರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ಗ್ರಾಮಕ್ಕೆ ರಸ್ತೆ ನಿರ್ಮಾಣ ಕೆಲಸಕ್ಕೆಂದು ಬಂದು ಲಾಕ್‌ಡೌನ್‌ನಿಂದಾಗಿ ಅರಕೆರೆಯಲ್ಲಿಯೇ ಆಶ್ರಯ ಪಡೆದಿದ್ದ ಯಾದಗಿರಿ, ಬಳ್ಳಾರಿ ಜಿಲ್ಲೆಗಳ ಕೂಲಿಕಾರ್ಮಿಕರು ಹಾಗೂ ಮೈಸೂರು ಜಿಲ್ಲೆ ಹುಣಸೂರಿನ ಬಟ್ಟೆ ವ್ಯಾಪಾರಿಗಳು ಮತ್ತು ಉತ್ತರ ಕನ್ನಡ ಜಿಲ್ಲೆಯ ಒಬ್ಬ ವಿದ್ಯಾರ್ಥಿಯನ್ನು ತಾಲ್ಲೂಕು ಆಡಳಿತ ಶನಿವಾರ ರಾತ್ರಿ ಅವರವರ ಊರುಗಳಿಗೆ ಕಳುಹಿಸಿಕೊಟ್ಟಿತು.

ಜಿಲ್ಲಾಡಳಿತ ವತಿಯಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಯಾದಗಿರಿ ಜಿಲ್ಲೆಯ 20, ಬಳ್ಳಾರಿ ಜಿಲ್ಲೆಯ 10 ಕೂಲಿಕಾರ್ಮಿಕರು ಮತ್ತು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ 23 ಬಟ್ಟೆ ವ್ಯಾಪಾರಿಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಡಿಪ್ಲೊಮಾ ವಿದ್ಯಾರ್ಥಿಯನ್ನು ಪ್ರತ್ಯೇಕ ಬಸ್‌ಗಳಲ್ಲಿ ಕಳುಹಿಸಿ ಕೊಡಲಾಯಿತು.

ತಹಶೀಲ್ದಾರ್ ಎಂ.ವಿ. ರೂಪಾ, ಬಿಸಿಎಂ ವಿಸ್ತರಣಾಧಿಕಾರಿ ಎಂ.ಟಿ. ಶ್ರೀನಿವಾಸ್‌, ಅರಕೆರೆ ಠಾಣೆ ಎಸ್‌ಐ ಅರ್ಚನಾ ಸ್ಥಳದಲ್ಲಿದ್ದು, ಊಟ ನೀಡಿ ಕಳುಹಿಸಿಕೊಟ್ಟರು.

ADVERTISEMENT

‘ಅರಕೆರೆಯಿಂದ ಹೊರಟ ಹೊರ ಜಿಲ್ಲೆಗಳ ಕೂಲಿ ಕಾರ್ಮಿಕರು, ಬಟ್ಟೆ ವ್ಯಾಪಾರಿಗಳು ಮತ್ತು ವಿದ್ಯಾರ್ಥಿ ಸ್ವಗ್ರಾಮಗಳಿಗೆ ತಲುಪಿದ್ದಾರೆ. ದೂರವಾಣಿ ಮೂಲಕ ಎಲ್ಲರನ್ನೂ ಸಂಪರ್ಕಿಸಿ ಖಚಿತಪಡಿಸಿಕೊಳ್ಳಲಾಗಿದೆ’ ಎಂದು ಬಿಸಿಎಂ ವಿಸ್ತರಣಾಧಿಕಾರಿ ಎಂ.ಟಿ. ಶ್ರೀನಿವಾಸ್‌
ತಿಳಿಸಿದರು.

‘ಯಾದಗಿರಿಯ ರೇಣುಕಮ್ಮ ಅವರಿಗೆ ವಾರದ ಹಿಂದಷ್ಟೇ ಅರಕೆರೆಯಲ್ಲಿ ಹೆರಿಗೆಯಾಗಿದ್ದು, ರೇಣುಕಮ್ಮ ಮತ್ತು ಅವರ ಅತ್ತೆ ಮಂಡ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದಾರೆ. ಆಂಧ್ರಪ್ರದೇಶ ಮೂಲದ 9 ಕೂಲಿಕಾರ್ಮಿಕರು ಇನ್ನೂ ಅರಕೆರೆಯ ಅಂಗನವಾಡಿಯಲ್ಲಿಯೇ ಉಳಿದ್ದಾರೆ‌’ ಎಂದು ಅವರು ಹೇಳಿದರು.

‘ಮಾ.29ರಿಂದ ಅರಕೆರೆ ಬಿಸಿಎಂ ಹಾಸ್ಟೆಲ್‌ನಲ್ಲಿ 54 ಜನರಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ರೆಡ್‌ಕ್ರಾಸ್‌, ಲಯನ್ಸ್‌ ಕ್ಲಬ್‌, ಪ್ರತಿಭಾಂಜಲಿ ಸಂಸ್ಥೆ, ಕೃಷಿಕ್‌ ಲಯನ್ಸ್‌ ಫೌಂಡೇಷನ್‌, ರೋಟರಿ ಇತರೆ ಸಂಘ ಸಂಸ್ಥೆಗಳು ಕೂಡ ಕೂಲಿಕಾರ್ಮಿಕರು, ವ್ಯಾಪಾರಿಗಳಿಗೆ ನೆರವು ನೀಡಿದ್ದರು. ಎಲ್ಲರಿಗೂ ಕೋವಿಡ್‌ ಪರೀಕ್ಷೆ ನಡೆಸಿದ್ದು, ಎಲ್ಲರ ವರದಿ ನೆಗೆಟೀವ್‌ ಬಂದಿದೆ’ ಎಂದು ಶ್ರೀನಿವಾಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.