ADVERTISEMENT

ಯುವಕನ ಮೇಲೆ ಹಲ್ಲೆ ಪ್ರಕರಣ: ಪುಡಿರೌಡಿ ಕಾಲಿಗೆ ಪೊಲೀಸರಿಂದ ಗುಂಡೇಟು

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2025, 11:44 IST
Last Updated 26 ಫೆಬ್ರುವರಿ 2025, 11:44 IST
   

ಮಂಡ್ಯ: ನಗರದ ಸ್ಮಶಾನವೊಂದರಲ್ಲಿ ಕೆಲ ದಿನಗಳ ಹಿಂದೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪ್ರಕರಣದ ಪ್ರಮುಖ ಆರೋಪಿ ಸುಭಾಷ್‌ ಎಸ್‌. ಅಲಿಯಾಸ್‌ ಸುಬ್ಬಿ (18) ಎಂಬಾತನ ಬಲಗಾಲಿಗೆ ಪೊಲೀಸರು ಗುಂಡೇಟು ಹೊಡೆದಿರುವ ಘಟನೆ ಬುಧವಾರ ತಾಲ್ಲೂಕಿನ ಬಿ.ಹೊಸೂರು ಬಳಿ ನಡೆದಿದೆ. 

ಆರೋಪಿ ಸುಭಾಷ್‌ ಮಂಡ್ಯ ನಗರದ ಸಾದತ್‌ ನಗರದ ನಿವಾಸಿಯಾಗಿದ್ದು, ಈತನ ವಿರುದ್ಧ ಮಂಡ್ಯ ಪೂರ್ವ, ಮಂಡ್ಯ ಪಶ್ಚಿಮ, ಮಂಡ್ಯ ಸೆಂಟ್ರಲ್‌ ಹಾಗೂ ಹಲಗೂರು ಪೊಲೀಸ್‌ ಠಾಣೆಗಳಲ್ಲಿ ಬೆದರಿಕೆ, ಹಲ್ಲೆ ಮತ್ತು ಕೊಲೆ ಯತ್ನ ಸೇರಿದಂತೆ ಒಟ್ಟು 5 ಪ್ರಕರಣಗಳು ದಾಖಲಾಗಿದ್ದವು.

ಟಿ.ನರಸೀಪುರದ ಯಶವಂತ ಎಂಬ ಯುವಕನನ್ನು ಬೈಕಿನಲ್ಲಿ ಸ್ಮಶಾನವೊಂದಕ್ಕೆ ಕರೆದೊಯ್ದು, ಸುಭಾಷ್‌ ಮತ್ತು ಆತನ ಗ್ಯಾಂಗ್ ಮಚ್ಚಿನಿಂದ ಹಲ್ಲೆ ನಡೆಸುವುದನ್ನು ಲೈವ್‌ ವಿಡಿಯೊ ಮಾಡಿದ್ದರು. ಆರೋಪಿಗಳ ಬಂಧನಕ್ಕೆ ಮಂಡ್ಯ ಪೂರ್ವ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಶೇಷಾದ್ರಿ ಕುಮಾರ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. 

ADVERTISEMENT

‘ಖಚಿತ ಮಾಹಿತಿ ಮೇರೆಗೆ ಬುಧವಾರ ಬೆಳಿಗ್ಗೆ 6.30ರ ಸಮಯದಲ್ಲಿ ಆರೋಪಿ ಸುಭಾಷ್‌ನನ್ನು ಬಂಧಿಸಲು ಪೊಲೀಸರು ಹೋದಾಗ, ಆರೋಪಿ ಕಲ್ಲಿನಿಂದ ಹಲ್ಲೆಗೆ ಮುಂದಾದ. ಶರಣಾಗತನಾಗಲು ಹೇಳಿದರೂ ಒಪ್ಪದೆ ತೀವ್ರ ಪ್ರತಿರೋಧ ಒಡ್ಡಿದ. ಈ ಸಮಯದಲ್ಲಿ ಆತ್ಮರಕ್ಷಣೆಗಾಗಿ ಸಬ್‌ಇನ್‌ಸ್ಪೆಕ್ಟರ್‌ ಶೇಷಾದ್ರಿ ಅವರು ಪಿಸ್ತೂಲಿನಿಂದ ಸುಭಾಷ್‌ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ನಂತರ ಆತನನ್ನು ಮಂಡ್ಯ ‘ಮಿಮ್ಸ್‌’ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ’ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ. 

ದರೋಡೆಗೆ ಯತ್ನ: 7 ಆರೋಪಿಗಳ ಬಂಧನ

ಮಂಡ್ಯ ನಗರದ ಕಲ್ಲಹಳ್ಳಿಯ ಹಳೆಯ ಎಂ.ಪಿ.ರಸ್ತೆಯಲ್ಲಿ ಕಾರು ಮತ್ತು ಸ್ಕೂಟರ್‌ಗಳಲ್ಲಿ ಬಂದ ದುಷ್ಕರ್ಮಿಗಳ ಗುಂಪು ಫೆ.25ರಂದು ಸಂಜೆ 7.30ರ ವೇಳೆಯಲ್ಲಿ ಸಾರ್ವಜನಿಕರು ಮತ್ತು ವಾಹನ ಸವಾರರಿಂದ ದರೋಡೆ, ಸುಲಿಗೆ ಮಾಡಿ ನಗನಾಣ್ಯ ದೋಚಲು ಯತ್ನಿಸುತ್ತಿದ್ದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಅಜಯ್‌ ಅಲಿಯಾಸ್‌ ಬೆಣ್ಣೆ, ಮೊಹಮ್ಮದ್‌ ಸಮೀರ್‌, ಶಿವಾನಂದ (ಗೊಳ್ಳೆ ಶಿವ), ಹೇಮಂತಕುಮಾರ್‌ ಎ.ಆರ್‌., ಉಲ್ಲಾಸ್‌ಗೌಡ (ಚಿಟ್ಟೆ), ಸ್ವರೂಪ ಎಂ.ಎಸ್‌., ಪುನೀತ್‌ ಕೆ.ಎನ್‌. ಬಂಧಿತ ಆರೋಪಿಗಳು. 

ಸಾರ್ವಜನಿಕರಿಂದ ಹಣ ದೋಚಲು ಹೊಂಚು ಹಾಕುತ್ತಿರುವ ಬಗ್ಗೆ ದೂರು ಬಂದ ತಕ್ಷಣ ಮಂಡ್ಯ ಪಶ್ಚಿಮ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ನವೀನ್‌ ಸುಪೇಕರ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬಾರ್‌ನಲ್ಲಿ ಹಲ್ಲೆ: 8 ಆರೋಪಿಗಳ ಬಂಧನ

ಮಳವಳ್ಳಿ ತಾಲ್ಲೂಕಿನ ಹುಸ್ಕೂರು ಗೇಟ್‌ ಸಮೀಪದ ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಪಕ್ಕದ ಟೇಬಲ್‌ನವರ ಜೊತೆ ಜಗಳವಾಡಿಕೊಂಡು ಚಾಕುವಿನಿಂದ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮದ್ದೂರು ತಾಲ್ಲೂಕಿನ ಬೊಪ್ಪಸಮುದ್ರದ ವೆಂಕಟೇಶ ಎಚ್‌.ಎಸ್‌, ಹುನುಗನಹಳ್ಳಿ ಗ್ರಾಮದ ಹರ್ಷ ಎಚ್‌.ಎಸ್‌., ಮಂಡ್ಯ ನಗರದ ಸುಭಾಷ್‌ ಅಲಿಯಾಸ್‌ ಸುಬ್ಬಿ, ಮಠದ ಹೊನ್ನಾಯಕನಹಳ್ಳಿಯ ಶಿವಕುಮಾರ್‌, ಸಾಗರ್‌, ಸುಹಾಸ್‌ ಬಂಧಿತ ಆರೋಪಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.