ADVERTISEMENT

ಅಂಬೇಡ್ಕರ್ ಸಬಲೀಕರಣದ ಸಾಧನ

​ಪ್ರಜಾವಾಣಿ ವಾರ್ತೆ
Published 5 ಮೇ 2012, 6:50 IST
Last Updated 5 ಮೇ 2012, 6:50 IST

ಮೈಸೂರು: ಜಾತಿಕೇಂದ್ರಿತ ಮತ್ತು ನಿರ್ದೇಶಿತ ಭಾರತವನ್ನು ಒಡೆಯುವುದಕ್ಕೆ ಅಂಬೇಡ್ಕರ್ ಚಿಂತನೆ ಗಳೇ ನಾಂದಿ ಎಂದು ಸಾಹಿತಿ ಪ್ರೊ. ನಟರಾಜ್  ಹುಳಿಯಾರ್ ನುಡಿದರು.ಮೈಸೂರು ವಿಶ್ವವಿದ್ಯಾನಿಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಜಗತ್ತಿನಲ್ಲಿ ತೀವ್ರವಾಗಿ ಬೆಳೆಯುತ್ತಿರುವ ವಾದ ಅಂಬೇಡ್ಕರ್ ವಾದ. ಹೆಚ್ಚು ಸವಾಲುಗಳು ಎದುರಾಗಿರುವುದು ಈ ವಾದಕ್ಕೇ. ಅಂಬೇಡ್ಕರ್ ಚಿಂತನೆಗಳು ಭಾರತವನ್ನು ಸಂಕೋಲೆ ಗಳಿಂದ ಬಿಡುಗಡೆಗೊಳಿಸಿತು. ದಲಿತರು, ಮಹಿಳೆ ಯರು, ಹಿಂದುಳಿದವರ ಬಿಡುಗಡೆ ಆರಂಭವಾಗಿ 50 ವರ್ಷವಾಗಿದೆ. ಇವರೊಬ್ಬ ಸಬಲೀಕರಣದ ಅಸ್ತ್ರ. ಇವರನ್ನು ಒಂದು ಜಾತಿಗೆ ಸೀಮಿತಗೊಳಿಸದೇ ಸಮಗ್ರ ಸಮುದಾಯದವರು ಸ್ವೀಕರಿಸಬೇಕು ಎಂದರು.

ಭಾರತದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗಳೇ ಹೆಚ್ಚು ಇವೆ. ಹಾಗೆಯೇ ಹೆಚ್ಚು ಅವಮಾನ ಎಸಗಿರುವುದು ಇವರ ಪ್ರತಿಮೆಗಳಿಗೆ. ಪವಾಡಗಳಿಲ್ಲದ, ವೈಚಾರಿಕವಾಗಿ ಪ್ರಶ್ನಿಸಲು ಆಸ್ಪದವಿರುವ, ಎಲ್ಲರನ್ನೂ ಒಳಗೊಳ್ಳುವ ಬೌದ್ಧ ಧರ್ಮವನ್ನು ಅವರು ಸ್ವೀಕರಿಸಿದರು. ಬೌದ್ಧ ಧರ್ಮ ವಿಮೋಚನೆಯ ಮಾರ್ಗವಾಗಿತ್ತು. ಐದು ಸಾವಿರ ವರ್ಷಗಳವರೆಗೆ ಜಡವಾಗಿದ್ದ ಸಂಕೋಲೆಗಳಿಗೆ ಅಂತ್ಯ ಹಾಡಿದ ಮಹಾಮಾನವತಾವಾದಿ ಅವರು ಎಂದು ತಿಳಿಸಿದರು.

ಮತೀಯವಾದ ಮತ್ತು ಖಾಸಗೀಕರಣಗಳು ಜಾತಿನಿಯಂತ್ರಣದ ಹೊಸ ರೂಪಗಳಾಗಿದ್ದು, ಇವುಗಳಿಂದ ಪ್ರಜಾತಂತ್ರ ವ್ಯವಸ್ಥೆಗೆ ಅಪಾಯ ಕಾದಿದೆ. ಪ್ರಜಾಪ್ರಭುತ್ವವು ಕಾರ್ಪೋರೇಟ್ ಜಗತ್ತಿನ ತೆಕ್ಕೆಯಲ್ಲಿದೆ. ದೇಶದ 2ಜಿ, ಸತ್ಯಂ ಇತ್ಯಾದಿ ದೊಡ್ಡ ಹಗರಣಗಳು ಆರಂಭವಾದದ್ದು ಬಹುರಾಷ್ಟ್ರೀಯ ಕಂಪೆನಿಗಳಿಂದಲೇ. ಕಾರ್ಪೋರೇಟ್ ಜಗತ್ತಿನ ವಿಕೃತಿಗಳನ್ನು ಎದುರಿಸಲು ಹೊಸ ಚಳವಳಿಗಳನ್ನು ರೂಪಿಸಬೇಕಾದ ಅಗತ್ಯ ಇದೆ ಎಂದರು.

ಪ್ರಾಧ್ಯಾಪಕ ಬಿ.ಪಿ.ಮಹೇಶ್‌ಚಂದ್ರ ಗುರು ಮಾತನಾಡಿ, ರೈತ ಚಳವಳಿ ಹುಟ್ಟು ಹಾಕಿದವರು, ದೇಶಕ್ಕೆ ಶ್ರೇಷ್ಠ ಕಾರ್ಮಿಕ ಮಸೂದೆ ರಚಿಸಿದವರು, ಮಹಿಳೆಯರ ಸಮಾನತೆಗೆ ಮಂತ್ರಿ ಪದವಿಯನ್ನೇ ತ್ಯಜಿಸಿದವರು ಅಂಬೇಡ್ಕರ್. ಬುದ್ಧ ಮತ್ತು ಅಂಬೇಡ್ಕರ್ ಇವರಿಬ್ಬರೂ ಜಗತ್ತಿನ ಶಕ್ತಿಗಳು. ಜೀವನ ಮೌಲ್ಯ, ಸಂಸ್ಕೃತಿ, ಪರಂಪರೆ, ಶ್ರೀಮಂತಗೊಳಿಸಿದವ ಬುದ್ಧ. ಬೌದ್ಧ ಧರ್ಮ ಸಮಾನತೆಯ ರಾಜ ಮಾರ್ಗ ಎಂದರು.  

ಮಾರುಕಟ್ಟೆ ಶಕ್ತಿಗಳು ಇಂದು ಪ್ರಪಂಚವನ್ನು ಆಳುತ್ತಿವೆ. ವಿಶ್ವದ ಹಿರಿಯಣ್ಣ ಅಮೆರಿಕ ಇತರ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರ ಪೂರೈಸಿ ಯುದ್ಧಕ್ಕೆ ಪ್ರೋತ್ಸಾಹಿಸುತ್ತಿದೆ. ಒಸಾಮಾಗಿಂತ ಒಬಾಮಾ ಅಪಾಯಕಾರಿ ಎಂದು ಹೇಳಿದರು.
ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ನಿರ್ದೇಶಕ ಪ್ರೊ.ಕೆ.ವಿ.ಅಯ್ಯಣ್ಣ, ಕೊಳ್ಳೇಗಾಲದ ಜೇತವನದ ಮನೋರಖ್ಖಿತ ಬಂತೇಜಿ, ಡಾ. ಅಮುದಾವಲ್ಲಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.