ADVERTISEMENT

ಅದ್ದೂರಿ ಸೌಹಾರ್ದ ಜಾತ್ರೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 8:05 IST
Last Updated 21 ಫೆಬ್ರುವರಿ 2011, 8:05 IST

ಹುಣಸೂರು: ತಾಲ್ಲೂಕಿನ ಹಿಂದು ಮತ್ತು ಮುಸ್ಲಿಂ ಸೌಹಾರ್ದ ಬೆಸೆಯುವ ರತ್ನಾಪುರಿ ಗ್ರಾಮದಲ್ಲಿ  47ನೇ ವರ್ಷದ ಆಂಜನೇಯ ಸ್ವಾಮಿ ಮತ್ತು ಜಮಾಲಮ್ಮ ಬೀಬಿ ಉರುಸ್‌ಗೆ ಶನಿವಾರ ರಾತ್ರಿ ಅದ್ದೂರಿ ಚಾಲನೆ ನೀಡಲಾಯಿತು.ಪುಷ್ಪ ಪಲ್ಲಕ್ಕಿಯಲ್ಲಿ ಪಂಚಲೋಹದ ಆಂಜನೇಯ ಉತ್ಸವ ಮೂರ್ತಿಯನ್ನು ಆಂಜನೇಯ ಸ್ವಾಮಿ ದೇವ– ಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಆಂಜನೇಯ ಸ್ವಾಮಿ ಮತ್ತು  ಜಮಾಲಮ್ಮ ಬೀಬಿ ಉರುಸ್ ಸಮಿತಿಯ ಪ್ರಮುಖರು ಭಾಗವಹಿಸಿದ್ದರು. ಮೂರು ದಿನಗಳ ಕಾಲ ಅದ್ದೂ ರಿಯಾಗಿ ನಡೆಯಲಿರುವ ಈ ಜಾತ್ರೆಗೆ ದೂರದೂರನಿಂದ ಎರಡೂ ಕೋಮಿನ ಸಂಬಂಧಿಕರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಪ್ರತಿ ವರ್ಷ ಶನಿವಾರ ಮತ್ತು ಭಾನುವಾರ ನಡೆಯುವ ಈ ಸೌಹಾರ್ದ ಜಾತ್ರೆ ಶನಿವಾರದಂದು ಮುಂಜಾನೆಯಿಂದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹೋಮ ಹವನದೊಂದಿಗೆ ಆರಂಭಗೊಂಡು ಜಮಾಲಮ್ಮ ಬೀಬಿ ದರ್ಗಾ ದಲ್ಲಿ ಗಂಧದ  ಧೂಪಹಾಕಿ ವಿಶೇಷ ಪ್ರಾರ್ಥನೆಯೊಂದಿಗೆ ಗೋರಿಗೆ ಹಸಿರು ಬಟ್ಟೆ ಹೊದಿಸುವ ಮೂಲಕ ಜಾತ್ರೆ ಅಂತ್ಯಗೊಳ್ಳುತ್ತದೆ.

ಶನಿವಾರ ರಾತ್ರಿ ನಡೆದ ಹನುಮಂತೋತ್ಸವದಲ್ಲಿ   ಕೇರಳದ ಸಾಂಪ್ರದಾಯಕ ‘ಚಂಡೆ’ ವಾದ್ಯ ಈ  ಬಾರಿಯ ವಿಶೇಷ ಆಕರ್ಷಣೆಯಾಗಿತ್ತು. ಮೆರವಣಿಗೆಯಲ್ಲಿ ಉತ್ತಮ ಜೋಡೆತ್ತುಗಳು ಸೇರಿದಂತೆ ಮಕ್ಕಳನ್ನು  ರಂಜಿ ಸುವ ಕೀಲು ಕುದುರೆ ನೃತ್ಯದ ಕಲಾವಿದರು ಭಾಗವಹಿಸಿದ್ದರು.

ಬಾಣ ಬಿರುಸು: ಬಾಣ ಬಿರುಸು ಜಾತ್ರೆಗೆ ಬಂದಿದ್ದ ಜನರನ್ನು ಆಕರ್ಷಿಸಿ ಆಕಾಶದಲ್ಲಿ ಮದ್ದು ಸಿಡಿದು   ನಕ್ಷತ್ರಗಳಂತೆ ಕಂಗೊಳಿಸಿ ಮಾಯವಾಗುತ್ತಿದ್ದವು.ಯುವಕರ ತಂಡ ತಮಟೆಯ ತಾಳಕ್ಕೆ ಹೆಜ್ಜೆ ಹಾಕಿ ಕುಣಿಯುತ್ತಿದ್ದರು. ಡೋಲಿನ ನಾದಕ್ಕೆ ವೀರಗಾಸೆ  ನೃತ್ಯಗಾರರು ಹೆಜ್ಜೆ ಹಾಕುತ್ತಿದ್ದರು. ಉತ್ಸವ ಶನಿವಾರ ರಾತ್ರಿ ಭಕ್ತಾದಿಗಳ ಮನಸೂರೆಗೊಂಡಿತ್ತು.

ಪ್ರತಿ ವರ್ಷ ಭಕ್ತಾದಿಗಳಿಗೆ ಒಂದು ದಿನ ಅನ್ನ  ಸಂತರ್ಪಣೆ ನಡೆಸಲಾಗುತ್ತಿತ್ತು. ಈ ಬಾರಿಯಿಂದ ಎರಡು ದಿನ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದೇವೆ ಎಂದು ಅಂಜನೇಯಸ್ವಾಮಿ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರಭು  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.