ADVERTISEMENT

ಅಪರೂಪದ ಶ್ವಾನಗಳ ಸ್ಮಾರಕ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 7:09 IST
Last Updated 14 ಡಿಸೆಂಬರ್ 2012, 7:09 IST

ಮೈಸೂರು: ತಾಲ್ಲೂಕಿನ ವರುಣಾ ಹೋಬಳಿ ವಾಜಮಂಗಲ ಗ್ರಾಮದ ಸೋಮೇಶ್ವರ ದೇವಾಲಯದ ಹಿಂಭಾಗದ ಗೋಡೆಯ ಮೇಲೆ ಕ್ರಿ.ಶ.11 ನೇ ಶತಮಾನದ ಅಪರೂಪದ ಶ್ವಾನಗಳ ಸ್ಮಾರಕ ಶಾಸನ ಪತ್ತೆಯಾಗಿದೆ.

ಶಾಸನವು ಕನ್ನಡ ಲಿಪಿಯಲ್ಲಿ ಆರು ಸಾಲು ಹೊಂದಿದೆ. ಸೋಮಯ್ಯನ ಕಾಲದ ಎರಡು ವೀರಶ್ವಾನಗಳಾದ `ಕಾಳ' ಮತ್ತು `ಪಿರಿಗ' ಮದಿಸಿದ ಹಂದಿಯೊ ಡನೆ ಹೋರಾಡಿ ಸಾಯಿಸಿ, ಹೋರಾಟದಲ್ಲಿ ಶ್ವಾನಗಳು ಸಹ ಪ್ರಾಣ ತೆತ್ತಿರುವ ಬಗ್ಗೆ ಶಾಸನ ಮಾಹಿತಿ ನೀಡುತ್ತದೆ.

ಸ್ಮಾರಕ ಶಿಲ್ಪದಲ್ಲಿ ಬೇಟೆಯ ಎರಡು ವೀರನಾಯಿಗಳು ಹಂದಿಯ ಮುಂಭಾಗದಿಂದ ಜಿಗಿದು ಮೂತಿಯನ್ನು ಹಿಡಿದಿರುವುದು, ಮತ್ತೊಂದು ನಾಯಿ ಹಿಂದಿನಿಂದ ಹಾರಿ ಹಿಂಗಾಲುಗಳನ್ನು ತಳವೂರಿ ಹಂದಿಯ ಮೇಲೆ ಕಾಲಿಟ್ಟು ಕಿವಿಯನ್ನು ಹಿಡಿದಿದೆ. ಹಂದಿ ಎರಡು ನಾಯಿಗಳ ಮಧ್ಯೆ ಇದೆ. ಹಂದಿ, ನಾಯಿಗಳು ಪ್ರಾಣ ಕಳೆದುಕೊಂಡಿರುವ ಕುರಿತ ನೆನಪಿಗಾಗಿ ಸ್ಮಾರಕವನ್ನು ನಿರ್ಮಿಸಿ ಶಾಸನ ಕೆತ್ತಿಸಲಾಗಿದೆ. ಈ ತರಹದ ನಾಯಿಗಳ ಸ್ಮಾರಕ ಶಿಲ್ಪಗಳು ರಾಜ್ಯದಲ್ಲಿ ಅಪರೂಪದ್ದು ಎನ್ನಲಾಗಿದೆ.

ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಎನ್‌ಎಸ್‌ಎಸ್ ಅಧಿಕಾರಿ ಡಾ.ಎಸ್‌ಜಿ.ರಾಮದಾಸರೆಡ್ಡಿ ಅವರು ಸ್ವಯಂ ಸೇವಕರ ಸಹಕಾರದೊಂದಿಗೆ ಅಪರೂಪದ ಅಪ್ರಕಟಿತ ನಾಯಿಗಳ ಸ್ಮಾರಕ ಶಾಸನವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

`ಅಪರೂಪದ ಶಾಸನ ದೇವಸ್ಥಾನದ ಹಿಂಭಾಗದಲ್ಲಿ ಅನಾಥವಾಗಿ ಬಿದ್ದಿದೆ. ಶಿಲ್ಪ ಗ್ರಾನೈಟ್ ಕಲ್ಲಿನಲ್ಲಿದೆ. ಬಿಸಿಲಿನ ಬೇಗೆಗೆ ಅಕ್ಷರಗಳು, ಅಪರೂಪದ ಶಿಲ್ಪಗಳು ನಾಶವಾಗುವ ಮೊದಲು ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಿ ಸೂಕ್ತ ಸ್ಥಳದಲ್ಲಿ ಸಂರಕ್ಷಿಸಬೇಕು' ಎಂದು ರಾಮದಾಸರೆಡ್ಡಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.