ADVERTISEMENT

‘ಅಪ್ಪ, ಅಮ್ಮ ಗೊತ್ತಿರದ ಜಾತ್ಯತೀತವಾದಿ ನಾನಲ್ಲ’

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 4:47 IST
Last Updated 4 ಡಿಸೆಂಬರ್ 2017, 4:47 IST
ಕಲ್ಯಾಣ ಲಕ್ಷ್ಮೀವೆಂಕಟರಮಣಸ್ವಾಮಿ ದೇಗುಲದ ಆವರಣದಲ್ಲಿ ಭಾನುವಾರ ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಕೇಂದ್ರ ಕೌಶಲ ಅಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗ್ಡೆ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಮುಖಂಡ ಎಚ್.ವಿ.ರಾಜೀವ್, ದೇಗುಲದ ಸಂಸ್ಥಾಪಕ ಎಚ್.ಜಿ.ಗಿರಿಧರ್, ದಕ್ಷಿಣ ಪ್ರಾಂತ ಸಂಘಚಾಲಕ ಮಾ.ವೆಂಕಟರಾಮ್, ಶಂಕರ್ ಬಿದರಿ, ನಗರ ಘಟಕದ ಅಧ್ಯಕ್ಷ ಡಾ.ಮಂಜುನಾಥ್, ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್ ಇದ್ದಾರೆ
ಕಲ್ಯಾಣ ಲಕ್ಷ್ಮೀವೆಂಕಟರಮಣಸ್ವಾಮಿ ದೇಗುಲದ ಆವರಣದಲ್ಲಿ ಭಾನುವಾರ ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಕೇಂದ್ರ ಕೌಶಲ ಅಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗ್ಡೆ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಮುಖಂಡ ಎಚ್.ವಿ.ರಾಜೀವ್, ದೇಗುಲದ ಸಂಸ್ಥಾಪಕ ಎಚ್.ಜಿ.ಗಿರಿಧರ್, ದಕ್ಷಿಣ ಪ್ರಾಂತ ಸಂಘಚಾಲಕ ಮಾ.ವೆಂಕಟರಾಮ್, ಶಂಕರ್ ಬಿದರಿ, ನಗರ ಘಟಕದ ಅಧ್ಯಕ್ಷ ಡಾ.ಮಂಜುನಾಥ್, ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್ ಇದ್ದಾರೆ   

ಮೈಸೂರು: ‘ಅಪ್ಪ, ಅಮ್ಮ ಗೊತ್ತಿರದ ಜಾತ್ಯತೀತವಾದಿ ನಾನಲ್ಲ’ ಎಂದು ಕೇಂದ್ರ ಕೌಶಲ ಅಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ ಹೆಗಡೆ ತಿಳಿಸಿದರು. ನಗರದ ಕಲ್ಯಾಣಗಿರಿಯ ಲಕ್ಷ್ಮೀವೆಂಕಟರಮಣ ಸ್ವಾಮಿ ದೇಗುಲದಲ್ಲಿ ಭಾನುವಾರ ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಾತ್ಯತೀತವಾದಿಗಳು ಯಾರ ಮಕ್ಕಳು ಎಂದು ಅರ್ಥವಾಗದು. ನೀವು ಒಬ್ಬ ಕ್ರಿಶ್ಚಿಯನ್ ಎನ್ನಿ, ಮುಸಲ್ಮಾನ ಎನ್ನಿ, ಹಿಂದೂ ಎನ್ನಿ. ನಾನು ಗೌರವಿಸುತ್ತೇನೆ. ಏಕೆಂದರೆ ನಿಮಗೆ ನಿಮ್ಮ ಅಪ್ಪ, ಅಮ್ಮ ಯಾರು ಎಂದು ಗೊತ್ತಿದೆ. ಆದರೆ, ಜಾತ್ಯತೀತವಾದಿಗಳು ಎಂದರೆ ಏನು? ಇವರ ಅಪ್ಪ, ಅಮ್ಮ ಯಾರು ಎಂಬುದೇ ಅರ್ಥವಾಗುವುದಿಲ್ಲ’ ಎಂದು ಹೇಳಿದರು.

ಈ ದೇವಸ್ಥಾನದಲ್ಲಿ ಮಾತ್ರ ಭಗವಾಧ್ವಜ ಹಾರಾಡಿದರೆ ಸಾಲದು. ಮೈಸೂರಿನ ಇಂಚು ಇಂಚಿನಲ್ಲೂ ಭಗವಾಧ್ವಜ ಹಾರಾಡಬೇಕು. ಹಿಂದೂ ಧರ್ಮದ ಎಲ್ಲರೂ ಒಂದುಗೂಡಿದರೆ ಮಾತ್ರ ಇದು ಸಾಧ್ಯ ಎಂದರು.

ADVERTISEMENT

‘ಮಂದಿರ ಕಟ್ಟುವ ನೆಲದಲ್ಲಿ ಮಸೀದಿ ಕಟ್ಟಲು ಬಿಡಬಾರದು. ಹಿಂದೂ ಧರ್ಮದ ಅಡಿಯಲ್ಲಿ ಎಲ್ಲ ಜಾತಿ ಯವರೂ ಒಗ್ಗೂಡಬೇಕು. ಇಲ್ಲದಿದ್ದರೆ ನಾವು ದೇಶವನ್ನು ಕಳೆದುಕೊಳ್ಳುತ್ತೇವೆ’ ಎಂದು ಎಚ್ಚರಿಸಿದರು.

ಉಪಮೇಯರ್ ರತ್ನಾ ಲಕ್ಷ್ಮಣ, ದಕ್ಷಿಣ ಪ್ರಾಂತ ಸಂಘಚಾಲಕ ಮಾ.ವೆಂಕಟರಾಮ್, ದೇವಸ್ಥಾನದ ಸಂಸ್ಥಾಪಕ ಎಚ್.ಜಿ.ಗಿರಿಧರ್, ಬಿಜೆಪಿ ಮುಖಂಡ ಶಂಕರ ಬಿದರಿ, ನಗರ ಘಟಕದ ಅಧ್ಯಕ್ಷ ಡಾ.ಮಂಜುನಾಥ್, ಪಾಲಿಕೆ ಸದಸ್ಯರಾದ ಬಿ.ಪಿ.ಮಂಜುನಾಥ್, ಮಾ.ವಿ.ರಾಮಪ್ರಸಾದ್ ಹಾಜರಿದ್ದರು.

ಹಣತೆಗಳ ಚಿತ್ತಾರ: ಲಕ್ಷದೀಪೋತ್ಸವ ದಲ್ಲಿ ಪಾಲ್ಗೊಂಡ ಹಲವು ಭಕ್ತರು ದೀಪಗಳನ್ನು ಬೆಳಗಿ ಸಂಭ್ರಮಿಸಿದರು. ರಸ್ತೆಯಲ್ಲಿ ವಿವಿಧ ಆಕೃತಿಗಳಲ್ಲಿ ಹಣತೆ ಗಳನ್ನು ಹಚ್ಚಿಡಲಾಗಿತ್ತು. ರಸ್ತೆಯ ಇಕ್ಕೆಲ ಗಳಲ್ಲಿ ಮರದ ಬೊಂಬುಗಳನ್ನು ಕಟ್ಟಿ ಸಾಲುದೀಪಗಳನ್ನು ಬೆಳಗಲಾಯಿತು. ದೀಪಗಳ ಮುಂದೆ ಅನೇಕರು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.

ಕಪ್ಪುಬಾವುಟ ಪ್ರದರ್ಶನಕ್ಕೆ ಯತ್ನ
ಅನಂತಕುಮಾರ ಹೆಗಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಏಕವಚನ ಪ್ರಯೋಗಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಾದ ಹೇಮಂತ್, ರಾಜೇಶ್ ಹಾಗೂ ಸಂಪತ್‌ಕುಮಾರ್ ಅವರು ಘೋಷಣೆ ಕೂಗುತ್ತಾ ಕಪ್ಪುಬಾವುಟ ಪ್ರದರ್ಶನಕ್ಕೆ ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.