ADVERTISEMENT

ಅಬಕಾರಿ : 3 ವರ್ಷದೊಳಗೆ 2271 ಹುದ್ದೆ ಭರ್ತಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 9:25 IST
Last Updated 3 ಫೆಬ್ರುವರಿ 2011, 9:25 IST

ಮೈಸೂರು: ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ 2271 ಗಾರ್ಡ್ ಮತ್ತು ಇನ್ಸ್‌ಪೆಕ್ಟರ್ ಹುದ್ದೆಗಳಿಗೆ  ಇನ್ನು ಮೂರು ವರ್ಷದೊಳಗೆ ನೇಮಕಾತಿಯನ್ನು ಪೂರ್ಣಗೊಳಿಸಲಾಗುವುದು ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಖಾಲಿ ಹುದ್ದೆಗಳ ಭರ್ತಿ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅನುಮತಿ ಕೋರಿದ್ದೇನೆ. ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದಲ್ಲಿ ಭರ್ತಿ ಮಾಡಲಾಗುವುದು ಎಂದು ಬುಧವಾರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಜನವರಿ 31ರ ವರೆಗೆ 6221ಕೋಟಿ ರೂಪಾಯಿ ರಾಜಸ್ವ ಶುಲ್ಕ ಸಂಗ್ರಹವಾಗಿದೆ. ಕಳೆದ ವರ್ಷ ಏಪ್ರಿಲ್‌ನಿಂದ ಜನವರಿ ವರೆಗೆ 5332 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಈಗ 889 ಕೋಟಿ  ರೂಪಾಯಿ ಅಂದರೆ ಶೇ.17ರಷ್ಟು ಆದಾಯ ಹೆಚ್ಚಾಗಿದ್ದು, 55.48 ಲಕ್ಷ ಮದ್ಯ ಮಾರಾಟ ಹೆಚ್ಚಾಗಿದೆ. ಇದ ರಿಂದ ಕಳೆದ ವರ್ಷ 7 ಸಾವಿರ ಕೋಟಿ ರೂಪಾಯಿ ಆದಾಯ ಬಂದಿತ್ತು. ಈ ವರ್ಷ 8200 ಕೋಟಿ  ಆದಾಯ ಸಂಗ್ರಹವಾಗಿದೆ ಎಂದರು.

ಕಳ್ಳಭಟ್ಟಿ, ನಕಲಿ ಮದ್ಯ ಹೊರ ರಾಜ್ಯಕ್ಕೆ ಸರಬರಾಜಾಗುವುದದನ್ನು ಪರಿಣಾಮಕಾರಿಯಾಗಿ ತಡೆಗಟ್ಟಿದ್ದು, ಆದಾಯ ಹೆಚ್ಚಳಕ್ಕೆ ಕಾರಣವಾಗಿದೆ. ಸಾಕಷ್ಟು ದಾಳಿಗಳನ್ನು ನಡೆಸಿ ಕಳ್ಳಭಟ್ಟಿ ಹತೋಟಿಗೆ ತಂದಿದ್ದೇವೆ. ರಾಜ್ಯದಲ್ಲಿ 1475 ಕಳ್ಳಭಟ್ಟಿ ಕೇಂದ್ರಗಳಿದ್ದವು. ಅವುಗಳಲ್ಲಿ ಶೇ.60ರಷ್ಟನ್ನು ನಿಯಂತ್ರಿಸಿದ್ದೇವೆ. ವಿವಿಧೆಡೆ 18 ಮಂದಿ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇವೆ ಎಂದರು.

ಕಳೆದ ಏಪ್ರಿಲ್‌ನಿಂದ ಜನವರಿ ತಿಂಗಳವರೆಗೆ ಕಳ್ಳಭಟ್ಟಿಗೆ ಸಂಬಂಧಿಸಿದಂತೆ 52554 ದಾಳಿ ನಡೆಸಿ 9178  ಪ್ರಕರಣ ದಾಖಲಿಸಿದ್ದೇವೆ. 3962 ಆರೋಪಿಗಳನ್ನು ಬಂಧಿಸಿದ್ದು, 652 ವಾಹನ ಜಪ್ತಿ ಮಾಡಲಾಗಿದೆ.  53904 ಬಾಕ್ಸ್ ಮದ್ಯ ಹಾಗೂ 570 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ವಾಹನವನ್ನು ಮುಟ್ಟುಗೋಲು ಹಾಕಿದ್ದರಿಂದ ಸರ್ಕಾರಕ್ಕೆ 53 ಕೋಟಿ ರೂಪಾಯಿ ಆದಾಯ ಬಂದಿದೆ. ಇಲಾಖೆಯಲ್ಲಿ ಸುಧಾರಣೆ ತರಲು ವ್ಯಾಪಕ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವಾಮಾಚಾರ ಗೌಡರ ಕುಲಕಸುಬು: ವಾಮಾಚಾರ ಮಾಡುವುದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಕುಟುಂಬದ ಕುಲಕಸುಬು ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಆರೋಪಿಸಿದರು. ಇಂತಹ ನೂರು ದೇವೇಗೌಡರು ಬಂದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಏನೂ  ಮಾಡಲು ಆಗುವುದಿಲ್ಲ. ಮಠಾಧೀಶರು ಹಾಗೂ ಜನರ ಬೆಂಬಲ ಇರುವವರೆಗೂ ಯಡಿಯೂರಪ್ಪ ಅವರಿಗೆ ಯಾವುದೇ ತೊಂದರೆ ಇಲ್ಲ ಎಂದರು. ತಮಗೆ ಜೀವ ಬೆದರಿಕೆ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೊಂಡಿರುವುದರಲ್ಲಿ  ತಪ್ಪೇನಿಲ್ಲ. ನಾಡಿನ ಜನತೆ ಎದುರು ವಾಸ್ತವಾಂಶ ಬಿಡಿಸಿಕೊಟ್ಟಿದ್ದಾರೆ ಎಂದ ಅವರು, ತಮಗೆ ಯಾವುದೇ ಜೀವ ರೀತಿ ಬೆದರಿಕೆ ಇಲ್ಲ. ಇಲಾಖೆಯಲ್ಲಿ ಸುಧಾರಣೆ ತರಲು ಅಭಿವೃದ್ಧಿ ಮಾಡಲು ಯಾವುದೇ ಲಾಬಿ ಹಾಗೂ ಒತ್ತಡಗಳಿಗೆ ಮಣಿಯುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.