ADVERTISEMENT

ಅರಿಸಿನ ಖರೀದಿ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 25 ಮೇ 2012, 8:55 IST
Last Updated 25 ಮೇ 2012, 8:55 IST

ಸರಗೂರು: ಮೈಸೂರು ಜಿಲ್ಲಾ ಆಡಳಿತ ಮತ್ತು ಎಚ್.ಡಿ.ಕೋಟೆ ಟಿಎಪಿಸಿಎಂಎಸ್ ವತಿಯಿಂದ ಅರಿಸಿನ ಖರೀದಿ ಕೇಂದ್ರವನ್ನು ಸರಗೂರು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಾಂಗಣದಲ್ಲಿ ಗುರುವಾರ ಪ್ರಾರಂಭಿಸಲಾಯಿತು.

ಗುಣಮಟ್ಟದ ಪಾಲಿಶ್ ಮಾಡಿದ ಅರಿಸಿನವನ್ನು ಬೆಂಬಲ ಬೆಲೆಯಡಿ ರೈತರಿಂದ ನೇರವಾಗಿ ಖರೀದಿಸಲು ಕೇಂದ್ರ ತೆರೆಯಲಾಗಿದೆ. ತಾಲ್ಲೂಕಿನ ಅರಿಸಿನ ಬೆಳೆಗಾರರು ಇಲ್ಲಿಗೆ ಬಂದು ಮಾರಾಟ ಮಾಡಬಹುದು ಎಂದು ಎಚ್.ಡಿ.ಕೋಟೆ ಟಿಎಪಿಸಿಎಂಎಸ್ ಅಧ್ಯಕ್ಷ ಮೊತ್ತಬಸವರಾಜು ತಿಳಿಸಿದ್ದಾರೆ.

ಎಫ್‌ಎಕ್ಯೂ ಗುಣಮಟ್ಟದ ಅರಿಶಿಸಿನ ಬೆಳೆಗೆ ಸರ್ಕಾರ ಪ್ರತಿ ಕ್ವಿಂಟಲ್‌ಗೆ ರೂ. 4092 ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ. ರಾಜ್ಯ ಸರ್ಕಾರದ ವತಿಯಿಂದ ರೂ. 908 ಪ್ರೋತ್ಸಾಹ ಧನ ಸೇರಿ ಒಟ್ಟಾರೆ ರೂ. 5 ಸಾವಿರಕ್ಕೆ ಒಂದು ಕ್ವಿಂಟಲ್ ಪಡೆಯಲಾಗುವುದು.

  ಅರಿಸಿನ ತರುವ ರೈತರು 2011-12ನೇ ಸಾಲಿನ ಕಂಪ್ಯೂಟರ್ ಪಹಣಿ 2011ನೇ ಸಾಲಿನ ಮುಂಗಾರು ಋತುವಿನಲ್ಲಿ ಅರಿಸಿನ ಎಷ್ಟು ಬೆಳೆದಿದ್ದಾರೆ ಎಂಬ ಬಗ್ಗೆ ಹಾಗೂ ರೈತರ ಮಾದರಿ ಸಹಿಯನ್ನು ಭಾವಚಿತ್ರ ಸಮೇತ ಗ್ರಾಮ ಲೆಕ್ಕಾಧಿಕಾರಿಗಳು ದೃಢೀಕರಿಸಿರುವ ಮತ್ತು ಒಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಒಳಗೊಂಡ ದಾಖಲಾತಿಗಳನ್ನು ತಂದು ನೋಂದಾಯಿಸಿಕೊಳ್ಳಬೇಕು.
 
ಅರಿಸಿನ ಗುಣಮಟ್ಟವನ್ನು ಪರಿಶೀಲಿಸಲು ತೋಟಗಾರಿಕೆ ಇಲಾಖೆಯಿಂದ ನೇಮಿಸಲ್ಪಟ್ಟ ಗುಣಮಟ್ಟದ ಪರೀಕ್ಷಕರು ಸಹಮತ ನೀಡಿದರೆ ಮಾತ್ರ ಖರೀದಿಸಲಾಗುತ್ತದೆ. ಹಣವನ್ನು ಒಂದುವಾರದ ಒಳಗೆ ಅಕೌಂಟ್‌ಗಳಿಗೆ ಪಾವತಿಸಲಾಗುವುದು ಎಂದು ಅವರು ತಿಳಿಸಿದರು.

ಎಪಿಎಂಸಿ ಉಪಾದ್ಯಕ್ಷ ಪಿ.ಮಹದೇವ್, ಎಚ್.ಕೆ.ರಾಜು, ಎಪಿಎಂಸಿ ಕಾರ್ಯದರ್ಶಿ ಮಹಾಲಿಂಗು, ತೋಟಗಾರಿಕೆ ಇಲಾಖೆ ರವಿ, ಎಂ.ಕೆ.ಹರಿದಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.