ADVERTISEMENT

ಆಂಬುಲೆನ್ಸ್‌ನಲ್ಲಿ ಬಂದು ಮತದಾನ

ಕೆಲ ಸಣ್ಣಪುಟ್ಟ ಘಟನೆ ಹೊರತುಪಡಿಸಿ ಶಾಂತಿಯುತ ಮತದಾನ

​ಪ್ರಜಾವಾಣಿ ವಾರ್ತೆ
Published 13 ಮೇ 2018, 7:12 IST
Last Updated 13 ಮೇ 2018, 7:12 IST
ಆಂಬುಲೆನ್ಸ್‌ನಲ್ಲಿ ಹೊಸಹಳ್ಳಿ ಗ್ರಾಮದ ಮತಗಟ್ಟೆಗೆ ಬಂದು ಮತಚಲಾಯಿಸಿದ ಪಕ್ಷೇತರ ಅಭ್ಯರ್ಥಿ ಹೊಸಹಳ್ಳಿ ವೆಂಕಟೇಶ್
ಆಂಬುಲೆನ್ಸ್‌ನಲ್ಲಿ ಹೊಸಹಳ್ಳಿ ಗ್ರಾಮದ ಮತಗಟ್ಟೆಗೆ ಬಂದು ಮತಚಲಾಯಿಸಿದ ಪಕ್ಷೇತರ ಅಭ್ಯರ್ಥಿ ಹೊಸಹಳ್ಳಿ ವೆಂಕಟೇಶ್   

ಕೆ.ಆರ್.ನಗರ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಣ್ಣಪುಟ್ಟ ಗಲಾಟೆ ಹೊರತುಪಡಿಸಿ ಉಳಿದಂತೆ ಶಾಂತಿಯುತವಾಗಿ ಮತದಾನ ನಡೆಯಿತು. ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಬೆಳಿಗ್ಗೆ ಬಿರುಸಿನಿಂದ ಆರಂಭವಾದ ಮತದಾನ ಮಧ್ಯಾಹ್ನದ ಹೊತ್ತಿಗೆ ಸ್ವಲ್ಪ ಇಳಿಕೆ ಕಂಡರೂ ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಮತ್ತೆ ಬಿರುಸಿನಿಂದ ಕೂಡಿತ್ತು.

ತೀವ್ರ ಹಲ್ಲೆಗೆ ಒಳಗಾಗಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಕ್ಷೇತರ ಅಭ್ಯರ್ಥಿ ಹೊಸಹಳ್ಳಿ ವೆಂಕಟೇಶ್ ಅವರು ಆಸ್ಪತ್ರೆಯಿಂದ ಆಂಬುಲೆನ್ಸ್‌ನಲ್ಲಿ ನೇರವಾಗಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮಕ್ಕೆ ತೆರಳಿ ಮತದಾನ ಮಾಡಿದರು. ಅಲ್ಲದೇ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಮತಗಟ್ಟೆಗೆ ಮತದಾನದ ವಿವರಣೆ ಪಡೆದರು.

ADVERTISEMENT

ಜೆಡಿಎಸ್ ಅಭ್ಯರ್ಥಿ ಸಾ.ರಾ.ಮಹೇಶ್ ಸಾಲಿಗ್ರಾಮದಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಡಿ.ರವಿಶಂಕರ್ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಮತದಾನ ಮಾಡಿದರು. ಇಲ್ಲಿನ ಪುರಸಭೆ ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿನ ಮತಯಂತ್ರಗಳಲ್ಲಿ ದೋಷ ಕಂಡು ಬಂದಿದ್ದರಿಂದ ಬದಲಾವಣೆ ಮಾಡಲಾಯಿತು. ಇದರಿಂದ ಅರ್ಧ ಗಂಟೆ ವಿಳಂಬವಾಗಿ ಬೆಳಿಗ್ಗೆ 7:30ಕ್ಕೆ ಮತದಾನ ಪ್ರಾರಂಭವಾಯಿತು.

ಇಲ್ಲಿನ ಮುಸ್ಲಿಂ ಬ್ಲಾಕ್ ಮತ್ತು ತಾಲ್ಲೂಕಿನ ಅರಕೆರೆಕೊಪ್ಪಲು ಮತಗಟ್ಟೆಗಳಲ್ಲಿ ಸಖಿ ಪಿಂಕ್ ಮತಗಟ್ಟೆಯಾಗಿ ಮಾರ್ಪಡಿಸಲಾಗಿತ್ತು. ಇಡೀ ಕಟ್ಟಡ ಕೂಡ ಪಿಂಕ್ ಬಣ್ಣ ಬಳಿಯಲಾಗಿದ್ದು, ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿ ಮಹಿಳೆಯರೇ ಆಗಿದ್ದರು ಅಲ್ಲದೇ ಪಿಂಕ್ ಸೀರೆ ಧರಿಸಿದ್ದರು. ಮಹಿಳಾ ಮತದಾರರಿಗೆ ಗುಲಾಬಿ ಹೂವು ನೀಡಿ ಸ್ವಾಗತಿಸಿ, ಮತದಾನದ ನಂತರ ಅರಿಸಿನ ಕುಂಕುಮ, ಬಳೆ ನೀಡಿ ಬೀಳ್ಕೊಡುತ್ತಿರುವುದು ವಿಶೇಷವಾಗಿತ್ತು.

ಸನ್ಯಾಸಿಪುರ ಗ್ರಾಮ ಕಾವೇರಿ ನದಿ ದಂಡೆಯಲ್ಲಿರುವುದರಿಂದ ಜನರಲ್ಲಿ ನೀರಿನ ಸಂರಕ್ಷಣೆ ಬಗ್ಗೆ, ನೀರಿನ ಮಾಲಿನ್ಯ ತಡೆಗಟ್ಟುವ ಬಗ್ಗೆ, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸಂದೇಶ ನೀಡಲು ಸನ್ಯಾಸಿಪುರದಲ್ಲಿ ಮಾದರಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಅದರಂತೆ ಶೇ 20ರಷ್ಟು ನೀರು ಪೋಲಾಗುತ್ತಿರುವ ಬಗ್ಗೆ ಮಾಹಿತಿ ನೀಡಲು ತಾಲ್ಲೂಕಿನ ಸಾಲಿಗ್ರಾಮದಲ್ಲಿ ಮಾದರಿ ಮತಗಟ್ಟೆ ಸ್ಥಾಪಿಸಲಾಗಿತ್ತು.

ಅರಣ್ಯೀಕರಣ ಮತ್ತು ಹಸಿರೀಕರಣ, ಪರಿಸರ ಸಂರಕ್ಷಣೆ ಸಂದೇಶ ನೀಡಲು ತಾಲ್ಲೂಕಿನ ನರಚನಹಳ್ಳಿಯಲ್ಲಿ ಮಾದರಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಈ ಎಲ್ಲ ಮಾದರಿ ಮತಗಟ್ಟೆಗಳಲ್ಲಿ ಫ್ಲೆಕ್ಸ್ ಹಾಕಿ ಜಾಗೃತಿ ಮೂಡಿಸಲಾಗುತ್ತಿತ್ತು. ಅಲ್ಲದೇ ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಮಾದರಿ ಮತಗಟ್ಟೆಗಳಲ್ಲಿನ ಮತದಾರರಿಗೆ ವಿವಿಧ ಜಾತಿಯ ಗಿಡಗಳನ್ನು ವಿತರಿಸಿ ಅಭಿನಂದಿಸುತ್ತಿರುವುದು, ಶುದ್ಧ ಕುಡಿಯುವ ನೀರು, ಪಾನಕ, ಮಜ್ಜಿಗೆ ವಿತರಿಸುತ್ತಿರುವುದು ವಿಶೇಷವಾಗಿತ್ತು.ಸ್ವೀಪ್ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಿ ಮೋಹನ್, ಪಿಡಿಒ ಶ್ರೀಧರ್ ಸೇರಿದಂತೆ ಹಲವರು ಇದರ ಉಸ್ತುವಾರಿ ಹೊತ್ತು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದರು.

ಮೊದಲ ಬಾರಿ ಮತದಾನ: ‘ರಾಜಕಾರಣಿಗಳಲ್ಲಿ ಮುಚ್ಚು ಮರೆ ಇರಬಾರದು. ಅವರು ನೇರವಾಗಿ ಇರಬೇಕು ಎನ್ನುವುದು ನನ್ನ ಉದ್ದೇಶ. ಆದರೆ ನಾನು ವೋಟು ಹಾಕಿದ ಅಭ್ಯರ್ಥಿ ಹೇಗೆ ಇದ್ದಾರೆ, ಅವರ ಉದ್ದೇಶಗಳು ಏನು ಎಂಬುದು ನನಗೆ ಗೊತ್ತಿಲ್ಲ. ಆದರೂ ನಾನು ಅವರಿಗೆ ವೋಟ್ ಮಾಡಿದ್ದೇನೆ. ಮೊದಲ ಬಾರಿ ಮತದಾನ ಮಾಡಿದ ಬಗ್ಗೆ ಖುಷಿ ಇದೆ ಎಂದರು ಬಿಎಸ್ಸಿ ವಿದ್ಯಾರ್ಥಿನಿ ವೈ.ಕೆ.ಸಂಜನಾ.

‘ಮೊದಲಬಾರಿ ಮತದಾನ ಮಾಡುತ್ತಿರುವುದರಿಂದ ನಾನು ಅಷ್ಟಾಗಿ ಏನನ್ನೂ ತಿಳಿದುಕೊಳ್ಳಲು ಹೋಗಿಲ್ಲ. ಭಾರತ ಪ್ರಜಾಪ್ರಭುತ್ವ ದೇಶವಾಗಿದೆ. ಪ್ರತಿಯೊಬ್ಬರು ತಮ್ಮ ಹಕ್ಕು ಚಲಾಯಿಸಬೇಕು. ಅದಕ್ಕಾಗಿ ನಾನು ಕೂಡ ಖುಷಿಯಿಂದ ನನ್ನ ಹಕ್ಕು ಚಲಾಯಿಸಿದ್ದೇನೆ’ ಎಂದರು ವಿದ್ಯಾರ್ಥಿನಿ ವೈ.ಕೆ.ಸಿಂಚನಾ.

‘ಭ್ರಷ್ಟಾಚಾರಮುಕ್ತ ರಾಷ್ಟ್ರ ಮಾಡಲು, ದೇಶಕಟ್ಟಲು ಯುವಕರ ಪಾತ್ರ ಪ್ರಮುಖವಾಗಿದೆ. ಅದರಂತೆ ದೇಶ ಕಟ್ಟಲು ಒಳ್ಳೆಯ ವ್ಯಕ್ತಿಗಳು ಗೆಲ್ಲಬೇಕು. ಅದಕ್ಕಾಗಿ ನಾನು ಕೂಡ ವೋಟ್ ಮಾಡುತ್ತಿದ್ದೇನೆ. ಮೊದಲ ಬಾರಿ ವೋಟ್ ಮಾಡುತ್ತಿರುವುದರಿಂದ ನನಗೂ ಸಾಕಷ್ಟು ಖುಷಿ ಇದೆ’ ಎಂದರು ಎಂಜಿನಿಯರಿಂಗ್ ವಿದ್ಯಾರ್ಥಿ ಗೌತಮ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.