ಸಾಲಿಗ್ರಾಮ: ಆಲಿಕಲ್ಲು ಮಳೆ ಬಿದ್ದ ಪರಿಣಾಮ ಮಿರ್ಲೆ ಹೋಬಳಿಯ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ತಂಬಾಕು, ಬಾಳೆ ಹಾಗೂ ಮಾವಿನ ಫಸಲಿಗೆ ಹಾನಿಯಾಗಿದೆ.
ಭಾನುವಾರ ತಡರಾತ್ರಿ ಬಾಚ ಹಳ್ಳಿ, ಎಲೆಮುದ್ದನಹಳ್ಳಿ, ಎಲೆಮುದ್ದನಹಳ್ಳಿ ಕೊಪ್ಪಲು ಗ್ರಾಮಗಳಿಗೆ ಆಲಿಕಲ್ಲು ಬಿದ್ದ ಪರಿಣಾಮ ನೂರಾರು ಎಕರೆ ಜಮೀನಿನಲ್ಲಿ ಬೆಳೆದು ನಿಂತಿದ್ದ ತಂಬಾಕು ಬೆಳೆ ನೆಲ ಕಚ್ಚಿದೆ. ಒಂದು ಎಕರೆಯಲ್ಲಿ ತಂಬಾಕು ಬೆಳೆ ತೆಗೆಯಲು ರೈತರು ಸುಮಾರು 10ರಿಂದ 20 ಸಾವಿರಕ್ಕೂ ಅಧಿಕ ಹಣವನ್ನು ಖರ್ಚು ಮಾಡಲಾಗಿದೆ ಎಂದು ಬೆಳೆ ಕಳೆದು ಕೊಂಡ ರೈತರು ‘ಪ್ರಜಾವಾಣಿ’ಗೆ ತಿಳಿಸಿದರು.
ಅಲ್ಲದೆ 10 ಎಕರೆಗೂ ಅಧಿಕ ಜಮೀನಿನಲ್ಲಿ ಇದ್ದ ಬಾಳೆ ಹಾಗೂ ಮಾವಿನ ಫಸಲು ಕೂಡಾ ಆಲಿಕಲ್ಲು ಮಳೆಯಿಂದ ಹಾನಿಗೊಳಲಾಗಿದೆ. ಇದರಿಂದ ಈ ಗ್ರಾಮಗಳ ರೈತರು ಕಂಗಾಲಾಗಿದ್ದು ಮುಂದೆ ಏನು ಮಾಡುವುದು ಎಂದು ತಲೆಯ ಮೇಲೆ ಕೈಹೊತ್ತು ಕುಳಿತು ಕೊಳ್ಳುವ ಸ್ಥಿತಿ ಎದುರಾಗಿದೆ. ಮಾವಿನ ಫಸಲಿಗೆ ಆಲಿಕಲ್ಲು ಮಳೆ ಬೀಳುತ್ತಿದ್ದಂತೆ ಕಾಯಿಗಳು ಮರದಿಂದ ಕಳಚಿ ಬೀಳುವ ಜತೆಗೆ ಗೊನೆಯ ಮೇಲೆ ಕರಗಿ ಹೋಗುತ್ತವೆ ಎಂದು ಬೆಳೆ ಕಳೆದುಕೊಂಡ ರೈತರು ಕಣ್ಣೀರು ಹಾಕುತ್ತಿದ್ದಾರೆ.
ತಂಬಾಕು ನಂಬಿ ಜೀವನ ಮಾಡುತ್ತಿರುವ ನೂರಾರು ರೈತರ ಜಮೀನಿನಲ್ಲಿ ಇದ್ದ ತಂಬಾಕಿಗೆ ಆಲಿಕಲ್ಲು ಮಳೆಯಿಂದ ಬಿದ್ದ ಪರಿಣಾಮ ತಂಬಾಕಿನ ಸಸಿಗಳು ಕರಗುವ ಸ್ಥಿತಿಗೆ ಬಂದಿವೆ. ಜತೆಗೆ ತಂಬಾಕು ಬೇಸಾಯ ಮಾಡಲು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಮಾಡಿರುವ ರೈತರು ಮತ್ತೆ ನಾಟಿ ಮಾಡಲು ಹಣವನ್ನು ಎಲ್ಲಿಂದ ತರುವುದು ಎನ್ನುವ ಚಿಂತೆಯಲ್ಲಿದ್ದಾರೆ.
ಪ್ರಕೃತಿ ವಿಕೋಪದಿಂದ ಬೆಳೆ ಕಳೆದು ಕೊಳ್ಳುತ್ತಿರುವ ಬಡ ರೈತರಿಗೆ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕು ಎಂದು ಬೆಳೆ ಕಳೆದು ಕೊಂಡಿರುವ ರೈತರು ಮನವಿ ಮಾಡಿದ್ದಾರೆ. ಕಳೆದ ಹತ್ತು ದಿನಗಳಿಂದ ಪ್ರತಿ ದಿನ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂದೆ ನಮ್ಮ ಜಮೀನಿನಲ್ಲಿ ಇರುವ ಬೆಳೆಯ ಗತಿ ಏನು ಎಂದು ತಾಲ್ಲೂಕಿನ ರೈತರು ಆತಂಕ ಪಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.