ADVERTISEMENT

ಇನ್‌ಫೋಸಿಸ್‌ಗೆ ಪ್ರತ್ಯೇಕ ವಿನಾಯಿತಿ ನೀಡಿಲ್ಲ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 5:55 IST
Last Updated 7 ಫೆಬ್ರುವರಿ 2012, 5:55 IST

ಮೈಸೂರು: ನಗರದಲ್ಲಿ ಇನ್‌ಫೋಸಿಸ್ ಕ್ಯಾಂಪಸ್ ನಿರ್ಮಾಣಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವತಿಯಿಂದ 337.47 ಎಕರೆ ಜಮೀನನ್ನು ನೀಡಲಾಗಿದೆ ಎಂದು ಉನ್ನತ ಶಿಕ್ಷಣ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಡಾ.ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.

ವಿಧಾನಪರಿಷತ್‌ನಲ್ಲಿ ಶಾಸಕ ಸಂದೇಶ್ ನಾಗರಾಜ್ ಅವರು ಇನ್‌ಫೋಸಿಸ್ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ.

ಮೈಸೂರಿನಲ್ಲಿ ಇನ್‌ಫೋಸಿಸ್ ಘಟಕವು 2001ರಿಂದ ಆರಂಭಗೊಂಡಿದ್ದು, ರಾಜ್ಯ ಸರ್ಕಾರದ ಅನುಮೋದನೆಯ ಮೇರೆಗೆ ಜಮೀನನ್ನು ನೀಡಲಾಗಿದೆ. ಕೇಂದ್ರ ಸರ್ಕಾರದ ಎಸ್‌ಟಿಪಿಐ ಹಾಗೂ ಎಸ್‌ಇಝಡ್ ಯೋಜನೆ ಅಡಿ ಸಂಸ್ಥೆ ಸ್ಥಾಪನೆಯಾಗಿದ್ದು, ರಾಜ್ಯ ಸರ್ಕಾರ ಪ್ರತ್ಯೇಕ ವಿನಾಯತಿ ನೀಡಿಲ್ಲ. ಕೆಐಎಡಿಬಿಯು 217 ಎಕರೆಯನ್ನು ರಿಯಾಯತಿ ದರದಲ್ಲಿ ನೀಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

 ಇನ್‌ಫೋಸಿಸ್ ಕ್ಯಾಂಪಸ್‌ನಲ್ಲಿ ತಂತ್ರಾಂಶ ಅಭಿವೃದ್ಧಿ, ತರಬೇತಿ ಹಾಗೂ ಮುಂದಾಳತ್ವದ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಕನ್ನಡಿಗರು ಸೇರಿದಂತೆ ಒಟ್ಟು 5650 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿಂದ ಒಟ್ಟು ರೂ.6866 ಕೋಟಿ ಮೌಲ್ಯದ ರಫ್ತು ವಹಿವಾಟು ನಡೆಯುತ್ತಿದೆ.

ಸಂಸ್ಥೆ ನಿರ್ಮಾಣದ ಸಂದರ್ಭದಲ್ಲಿ ರೂ.120 ಕೋಟಿ ಮಾರಾಟ ತೆರಿಗೆ ಪಾವತಿಸಿದೆ. ಪಂಚಾಯಿತಿಗೆ ರೂ.53,96,514 ಆಸ್ತಿ ತೆರಿಗೆ ನೀಡುತ್ತದೆ. ವಿದ್ಯುತ್ ಅಳವಡಿಕೆ ಮತ್ತು ತಪಾಸಣೆಗಾಗಿ ಪ್ರತಿ ವರ್ಷ ರೂ.22 ಲಕ್ಷ ಸಂದಾಯ ಮಾಡುತ್ತಿದೆ. ಅಗ್ನಿಶಾಮಕ ದಳದ ಮಂಜೂರಾತಿಗಾಗಿ ರೂ.50 ಲಕ್ಷ ಶುಲ್ಕ ಪಾವತಿಸಿದೆ ಎಂದು ಸಚಿವರು ವಿವರಣೆ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.