ADVERTISEMENT

ಉದ್ಯೋಗ ನೀಡದ ಐಟಿಸಿ ವಿರುದ್ಧ ಧರಣಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2012, 6:05 IST
Last Updated 12 ಜೂನ್ 2012, 6:05 IST

ನಂಜನಗೂಡು: ಭೂಮಿ ಖರೀದಿ ಮಾಡುವ ವೇಳೆ ಉದ್ಯೋಗ ನೀಡುವ ಭರವಸೆ ನೀಡಿ, ಕರಾರಿನಂತೆ ನಡೆಯದ ಇಲ್ಲಿಯ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿನ ಇಂಡಿಯನ್ ಟೊಬ್ಯಾಕೊ ಕಂಪೆನಿ (ಐಟಿಸಿ ) ಮುಂದೆ ಭೂಮಿ ಕಳೆದುಕೊಂಡ ರೈತರು ಸೋಮವಾರ ಧರಣಿ ನಡೆಸಿದರು.

ಐಟಿಸಿ ಕಾರ್ಖಾನೆ ಸ್ಥಾಪಿಸಲು ನೂರಾರು ಎಕರೆ ಜಮೀನನ್ನು ಈ ಭಾಗದ ರೈತರು ಕೆಲ ವರ್ಷಗಳ ಹಿಂದೆ ಮಾರಿದ್ದರು. ಮಾರಾಟ ಸಂದರ್ಭದಲ್ಲಿ ಭೂಮಿ ಕಳೆದುಕೊಂಡವರ ಕುಟುಂಬಕ್ಕೆ ಉದ್ಯೋಗ ನೀಡುವ ಕರಾರನ್ನು ಕಂಪೆನಿಯವರು ಮಾಡಿದ್ದರು. ಆದರೆ, ಕಂಪೆನಿ ಶುರುವಾಗಿ 4 ತಿಂಗಳು ಕಳೆದಿದ್ದರೂ ಒಪ್ಪಂದದಂತೆ ರೈತರ ಮಕ್ಕಳಿಗೆ ಈವರೆಗೆ ಉದ್ಯೋಗ ನೀಡಿಲ್ಲ.

ವಿಚಾರಿಸಿದರೆ ಡಿಪ್ಲೊಮಾ ಪಾಸಾದವರಿಗೆ ಮಾತ್ರ ಉದ್ಯೋಗ ಕೊಡುತ್ತೇವೆ ಎನ್ನುತ್ತಾರೆ. ಡಿಪ್ಲೊಮಾ ಮಾಡಿದವರು ಎಲ್ಲಿ ಬೇಕಾದರೂ ಕೆಲಸ ಪಡೆಯಬಲ್ಲರು. ಜಮೀನು ಖರೀದಿಸುವಾಗ ಕಂಪೆನಿ ರೈತರ ಬಳಿ ಅಂಗಲಾಚಿ ಬೇಡಿತ್ತು.
 
ನಾವು ಉದ್ಯೋಗ ಸಿಗುತ್ತೆ ಎಂಬ ಆಸೆಯಿಂದ ಜಮೀನಿಗೆ ಹೆಚ್ಚು ಬೆಲೆ ಕೇಳದೆ ಮಾರಿದ್ದೇವೆ. ಈಗ ವೃತ್ತಿಪರ ಶಿಕ್ಷಣ ಪಡೆದವರಿಗೆ ಮಾತ್ರ ಕೆಲಸ ಕೊಡುವುದಾಗಿ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಕಂಪೆನಿ ಆಡಳಿತ ವರ್ಗದ ಸುಬೀಷ್ ಧರಣಿ ಸ್ಥಳಕ್ಕೆ ಬಂದು ಮಾತನಾಡಿ, ಕೆಲಸ ನೀಡುವ ಬಗ್ಗೆ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇದು ಷೇರುದಾರರ ಕಂಪೆನಿಯಾಗಿದೆ. ಆಡಳಿತ ಮಂಡಳಿಯ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿ, ಆದಷ್ಟು ಬೇಗ ನ್ಯಾಯ ಸಿಗದೆ ಹೋದರೇ, ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದರು.

ಯುವ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಂಗಾರಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಾಲೇಗೌಡ, ಹಸಿರು ಸೇನೆ ಕಾರ್ಯದರ್ಶಿ ಟಿ.ಎನ್.ವಿದ್ಯಾಸಾಗರ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೊಕ್ಕಹಳ್ಳಿ ನಂಜುಂಡಸ್ವಾಮಿ, ಗೋವಿಂದಸ್ವಾಮಿ, ಪುಟ್ಟಸ್ವಾಮಿ, ಮಹದೇವು, ಶಶಿಕುಮಾರ್ ಹಾಗೂ ಜಮೀನು ಕಳೆದುಕೊಂಡ ಶಿವರಾಮ್, ಕೆ.ರವಿ ಮೊದಲಾದವರು ಧರಣಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.