ADVERTISEMENT

ಉದ್ಯೋಗ ಸೃಷ್ಟಿ; ಮೋದಿ ತಡೆದು ಪ್ರಶ್ನಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 13:12 IST
Last Updated 26 ಏಪ್ರಿಲ್ 2018, 13:12 IST

ಮೈಸೂರು: ‘ಚುನಾವಣಾ ಪ್ರಚಾರಕ್ಕಾಗಿ ರಾಜ್ಯ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೊದಲ ದಿನವೇ ತಡೆದು ಉದ್ಯೋಗ ಸೃಷ್ಟಿಯ ಅಸಲಿ ಪ್ರಶ್ನೆಗಳಿಗೆ ಉತ್ತರಿಸುವಂತೆ ಒತ್ತಾಯಿಸಲಾಗುವುದು‌’ ಎಂದು ‘ಉದ್ಯೋಗಕ್ಕಾಗಿ ಯುವಜನರು’ ಆಂದೋಲನದ ರಾಜ್ಯ ಘಟಕದ ಸಂಚಾಲಕ ಸರೋವರ್ ತಿಳಿಸಿದರು.

ಮೇ 1ರಂದು ಚಾಮರಾಜ ನಗರದಲ್ಲಿ ನಡೆಯುವ ಸಮಾವೇಶದಲ್ಲಿ ಮೋದಿ ಭಾಗವಹಿಸಲಿದ್ದಾರೆ. ಅವರೊಂದಿಗೆ ಚರ್ಚಿಸಲು ಅವಕಾಶ ಕೋರುತ್ತಿದ್ದೇವೆ. ಆದರೆ, ಬಿಜೆಪಿ ಅವಕಾಶವನ್ನು ನಿರಾಕರಿಸುತ್ತಲೇ ಬಂದಿದೆ. ಹೀಗಾಗಿ ವಿಮಾನ ನಿಲ್ದಾಣದಿಂದ ಚಾಮರಾಜನಗರಕ್ಕೆ ತೆರಳುವ ದಾರಿಯಲ್ಲೇ ಅವರನ್ನು ತಡೆದು ಪ್ರಶ್ನೆಗಳಿಗೆ ಉತ್ತರಿಸುವಂತೆ ಆಗ್ರಹಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಕಚೇರಿಗೆ ಹೋಗಿ ಉದ್ಯೋಗ ಸೃಷ್ಟಿಯ ಕುರಿತು ಪ್ರಶ್ನಿಸಿದ್ದೇವೆ. ಇತರ ಪಕ್ಷಗಳಂತೆ ಬಿಜೆಪಿ ಸ್ಪಂದಿಸಿಲ್ಲ. ಅಲ್ಲದೆ, ಬಿಜೆಪಿ ಕಚೇರಿಯಲ್ಲಿ ನಮಗೆ ಕೆಲವು ಕಹಿ ಅನುಭವಗಳಾಗಿವೆ. ನಮ್ಮ ಮನವಿಯನ್ನೂ ಸ್ವೀಕರಿಸದೆ ಹಿಂದಕ್ಕೆ ಕಳುಹಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಇನ್ನು ಮುಂದೆ ಖಾಯಂ ಉದ್ಯೋಗವೇ ಇಲ್ಲದಂತೆ ಮಾಡುವ ಅಪಾಯಕಾರಿ ಕಾನೂನು ತಿದ್ದುಪಡಿಯನ್ನು ಕಳೆದ ಮಾರ್ಚ್‌ 16ರಂದು ಜಾರಿಗೆ ತಂದಿದ್ದಾರೆ. ಯಾವ ರಾಜಕೀಯ ಪಕ್ಷವೂ ಇದನ್ನು ಪ್ರಶ್ನಿಸದಿರುವುದು ಬೇಸರ ತಂದಿದೆ ಎಂದರು.

ರಾಜ್ಯ ಸಂಚಾಲಕ ಮುತ್ತುರಾಜ್ ಮಾತನಾಡಿ, ‘ಈ ಆಂದೋಲನ ಯಾವುದೇ ಒಂದು ಪಕ್ಷದ ವಿರುದ್ಧ ಅಲ್ಲ. ಕೇಂದ್ರ ಸರ್ಕಾರ ಹೆಚ್ಚಿನ ತೆರಿಗೆ ಪಡೆಯುತ್ತಿರುವುದರಿಂದ ಉದ್ಯೋಗ ಸೃಷ್ಟಿಯ ಹೆಚ್ಚಿನ ಹೊಣೆಗಾರಿಕೆ ಅದರ ಮೇಲಿದೆ. ದೇಶದ ಯುವಜನರ ಮುಖ್ಯವಾದ ಸಮಸ್ಯೆ ನಿರುದ್ಯೋಗ. ಆದರೆ, ಕೋಮುವಾದ, ರಾಜ–ರಾಣಿಯರ ಕಥೆಗಳು ಮುನ್ನೆಲೆಗೆ ಬಂದು ನೈಜ ಸಮಸ್ಯೆಗಳು ಬದಿಗೆ ಸರಿಯುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಆಂದೋಲನದ ಜಿಲ್ಲಾ ಘಟಕದ ಸಂಚಾಲಕ ಸೋಮಶೇಖರ್‌ ಚಲ್ಯ, ಬೆಂಬಲಿಗರಾದ ಪುಷ್ಪಾ, ಅಸಾದುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.