ADVERTISEMENT

ಎಲ್ಲ ಕ್ಷೇತ್ರಗಳಲ್ಲೂ ಬಹುತ್ವದ ಪಾಲುದಾರಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2011, 6:15 IST
Last Updated 29 ಆಗಸ್ಟ್ 2011, 6:15 IST
ಎಲ್ಲ ಕ್ಷೇತ್ರಗಳಲ್ಲೂ ಬಹುತ್ವದ ಪಾಲುದಾರಿಕೆ ಅಗತ್ಯ
ಎಲ್ಲ ಕ್ಷೇತ್ರಗಳಲ್ಲೂ ಬಹುತ್ವದ ಪಾಲುದಾರಿಕೆ ಅಗತ್ಯ   

ಮೈಸೂರು: `ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಬಹುತ್ವದ ಪಾಲುದಾರಿಕೆ ಇರಬೇಕು. ಆಗ ಮಾತ್ರ ರಾಜಕೀಯ ನಾಯಕತ್ವ ಹುಟ್ಟಲು ಸಾಧ್ಯ~ ಎಂದು ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅಭಿಪ್ರಾಯಪಟ್ಟರು.

ನಗರದ ಕಲಾಮಂದಿರದ ಮನೆಯಂಗಳದಲ್ಲಿ ಭೂಮಿ ಬಳಗ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ `ಕರ್ನಾಟಕ ರಾಜಕಾರಣ: ಬಹುತ್ವದ ಪಾಲುದಾರಿಕೆ~ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

`ಹಿಂದುಳಿದ ವರ್ಗ, ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಬಹುತ್ವದ ಪಾಲುದಾರಿಕೆಯಲ್ಲಿ ಪ್ರಾತಿನಿಧ್ಯ ದೊರೆತಿಲ್ಲ. ರಾಜಕೀಯ ನಾಯಕರಿಗೆ ಅವಕಾಶ ಸಿಕ್ಕಾಗ ಹೇಗೆ ಕೆಲಸ ಮಾಡಿದರು ಎಂಬುದು ಮುಖ್ಯವಾಗುತ್ತದೆ. ಹೋರಾಟದ ಮೂಲಕ ಬಂದ ನಾಯಕರಿಗೆ ಕನಿಷ್ಠ ಬದ್ಧತೆ ಇರಬೇಕು. ಅದು ಇಲ್ಲದೆ ಹೋದರೆ ರಾಜಕೀಯದಲ್ಲಿ ಬಹುತ್ವದ ಪಾಲುದಾರಿಗೆ ಸಿಕ್ಕರೂ ಪ್ರಯೋಜನವಿಲ್ಲ~ ಎಂದರು.

`ಜಾತಿ ವ್ಯವಸ್ಥೆ ಎನ್ನುವುದು ಎಲ್ಲೆಡೆಯೂ ಇದೆ. ಮಾಧ್ಯಮದಲ್ಲೂ ಹಾಸು ಹೊಕ್ಕಾಗಿದೆ. ಜಾತಿಯ ಹಿಂದೆ ಒಂದು ಸಂಸ್ಕೃತಿ ಇದೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ದಲಿತರ ಮೇಲೆ ದೌರ್ಜನ್ಯ ನಡೆದಾಗ ದಲಿತ ವ್ಯಕ್ತಿ ವರದಿ ಮಾಡುವುದಕ್ಕೂ, ಬೇರೆ ಜಾತಿಯ ವರದಿಗಾರ ವರದಿ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ದಲಿತ ವ್ಯಕ್ತಿ ಮಾಡಿರುವ ವರದಿ ನೈಜವಾಗಿದ್ದು, ಅದರ ಹಿಂದೆ ಏನಾಗಿತ್ತು? ಎಂಬುದರ ವಿಸ್ತೃತ ವರದಿ ಇರುತ್ತದೆ~ ಎಂದರು.

`ಸಮಾಜ ಸ್ವಸ್ಥ ಸ್ಥಿತಿಯಲ್ಲಿ ಇರಬೇಕಾದರೆ ಜನಜಾಗೃತಿಯ ಕುಲುಮೆಯಲ್ಲಿ ಬೆಂಕಿ ಆರದಂತೆ ನೋಡಿಕೊಳ್ಳಬೇಕು. ರಾಜ್ಯದಲ್ಲಿ ಚುನಾವಣಾ ವ್ಯವಸ್ಥೆ ಬದಲಾಗಬೇಕು. ಬಹುತ್ವದ ನಾಯಕ ಚಳವಳಿಯ ಹಿನ್ನೆಲೆಯಿಂದ ಬರಬೇಕು~ ಎಂದು ತಿಳಿಸಿದರು.

ಚಿಂತಕ ಬಂಜಗೆರೆ ಜಯಪ್ರಕಾಶ್ ಮಾತನಾಡಿ, `ಪ್ರಜಾಪ್ರಭುತ್ವ ಪ್ರಯಾಸದ ಸ್ಥಿತಿಯಲ್ಲಿದೆ. ಸಮಾಜಿಕ ಸಮಾನತೆ ಇಲ್ಲದ ಸಂದರ್ಭದಲ್ಲಿ ರಾಜಕೀಯ ಸಮಾನತೆ ನಿಜಕ್ಕೂ ಕಷ್ಟಸಾಧ್ಯ. ಸ್ವಾತಂತ್ರ್ಯ ನಂತರದ ಮೂರು ದಶಕಗಳ ಅವಧಿಯಲ್ಲಿ ಅನಕ್ಷರಸ್ಥರೇ ಹೆಚ್ಚಾಗಿ ಮತ ಚಲಾಯಿಸಿದರು. ನಂತರದ ಒಂದು ದಶಕದಲ್ಲಿ ಸಾಕಷ್ಟು ಬದಲಾವಣೆಗಳು ಆದವು. ಆದಾಗ್ಯೂ, ಇಂದಿಗೂ ರಾಜಕೀಯವಾಗಿ ಸಮಾನತೆ ಸಾಧ್ಯವಾಗಿಲ್ಲ~ ಎಂದು ಹೇಳಿದರು.

`ಹಿಂದುಳಿದ ವರ್ಗದವರು, ದಲಿತರು, ಮುಸ್ಲಿಂರು ರಾಜಕೀಯ ಶಕ್ತಿಯಾಗಿ ಗುರುತಿಸಿಕೊಂಡಿಲ್ಲ. 110ಕ್ಕೂ ಹೆಚ್ಚು ಮಂದಿ ಸಂಸದರು ದಲಿತ  ಸಮುದಾಯಕ್ಕೆ ಸೇರಿದವರಾಗಿದ್ದರೂ ದಲಿತರ ಹಿತಾಸಕ್ತಿ ಬಗ್ಗೆ ದನಿ ಎತ್ತಿಲ್ಲ. ಇದರಿಂದಾಗಿ ರಾಜಕೀಯದಲ್ಲಿ ದಲಿತರಿಗೆ ನಿರ್ಣಾಯಕ ಪಾತ್ರ ವಹಿಸಲು ಇಂದಿಗೂ ಸಾಧ್ಯವಾಗಿಲ್ಲ. ಶಿಕ್ಷಣ ಇಂದು ವ್ಯಾಪಾರೀಕರಣವಾಗಿದ್ದು, ಜಾತಿ ಆಧಾರಿತ ಕಾಲೇಜುಗಳು ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಲಭಿಸುವವರೆಗೆ ಬಹುತ್ವ ಪಾಲುದಾರಿಕೆ ಸಾಧ್ಯವಿಲ್ಲ~ ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತ ಮಂಜುನಾಥ್ ಅದ್ದೆ ಮಾತನಾಡಿದರು. ಭೂಮಿ ಬಳಗ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.