ಮೈಸೂರು: ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಪರಿಶಿಷ್ಟ ಪಂಗಡ ಇಲಾಖೆ ವತಿಯಿಂದ ಜೇನುಕುರುಬ ಮತ್ತು ಕೊರಗ ಜನಾಂಗದವರಿಗೆ ವಿತರಿಸುತ್ತಿದ್ದ ಪೌಷ್ಟಿಕ ಆಹಾರವನ್ನು ಈ ವರ್ಷದಿಂದ ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಕಾಡುಕುರುಬ, ಸೋಲಿಗ, ಯರವ, ಸಿದ್ದಿಗಳು ಮತ್ತು ಮಲೆಕುಡಿಯ ಜನಾಂಗದವರಿಗೂ ವಿಸ್ತರಿಸಲಾಗಿದೆ.
2012ನೇ ಸಾಲಿನಲ್ಲಿ ಆರಂಭವಾದ ಈ ಯೋಜನೆಯಲ್ಲಿ ಕೇವಲ ಜೇನುಕುರುಬ ಮತ್ತು ಕೊರಗ ಜನಾಂಗದವರಿಗೆ ಮಾತ್ರ ಪೌಷ್ಟಿಕ ಆಹಾರ ವಿತರಿಸಲಾಗುತ್ತಿತ್ತು. ಇದರಿಂದ ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಇತರ ಜನಾಂಗದವರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಕೆಂಪೇಗೌಡ ಅವರು 2012-13ನೇ ಸಾಲಿಗೆ ಇತರ ಜನಾಂಗದವರಿಗೂ ಪೌಷ್ಟಿಕ ಆಹಾರ ವಿತರಿಸುವಂತೆ ಯೋಜನೆಯನ್ನು ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಯೋಜನೆಗೆ ತಗಲುವ ವೆಚ್ಚವನ್ನು ಪರಿಶಿಷ್ಟ ಪಂಗಡಗಳ ಉಪಯೋಜನೆಗಳ ಲೆಕ್ಕ ಶೀರ್ಷಿಕೆಯಡಿ ನೀಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ 12 ಕೋಟಿ ರೂಪಾಯಿ ಅನುದಾನ ಮೀಸಲಾಗಿ ಇಡಲಾಗಿದೆ.
ಇದರಿಂದ ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಜೇನುಕುರುಬ, ಕಾಡುಬಕುರುಬ, ಸೋಲಿಗ, ಯರವ, ಸಿದ್ದಿಗಳು ಮತ್ತು ಮಲೆಕುಡಿಯರು ಇನ್ನು ಮುಂದೆ ಪೌಷ್ಟಿಕ ಆಹಾರ ಪಡೆಯಲಿದ್ದಾರೆ. ವರ್ಷದ ಆರು ತಿಂಗಳು (ಮಳೆಗಾಲದಲ್ಲಿ) ಒಂದು ಕುಟುಂಬಕ್ಕೆ 15 ಕೆ.ಜಿ ರಾಗಿ, 1 ಕೆ.ಜಿ ಕಡ್ಲೆ ಕಾಳು, 2 ಕೆ.ಜಿ ಹುರುಳಿ, 1 ಕೆ.ಜಿ ಹೆಸರು, 30 ಮೊಟ್ಟೆ, 2 ಕೆ.ಜಿ ಬೆಲ್ಲ ಹಾಗೂ 1 ಲೀಟರ್ ಅಡುಗೆ ಎಣ್ಣೆಯನ್ನು ಪ್ರತಿ ತಿಂಗಳು ವಿತರಿಸಲಾಗುತ್ತದೆ. ಮೈಸೂರು ಜಿಲ್ಲೆಯಲ್ಲಿ 9,100 ಕುಟುಂಬಗಳು ಇರಬಹುದು ಎಂದು ಅಂದಾಜಿಸಲಾಗಿದ್ದು, ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿದೆ.
ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತಿ ಕುಟುಂಬಕ್ಕೂ ಪಡಿತರ ಚೀಟಿ ಮಾದರಿಯಲ್ಲಿ ಗುರುತಿನ ಪತ್ರ ವಿತರಿಸಿ ಅದರಲ್ಲಿ ಫಲಾನುಭವಿಗಳ ಸಹಿ ಪಡೆಯಲು ನಿರ್ಧರಿಸಲಾಗಿದೆ. ಇದರಿಂದ ಯಾರಿಗೂ ಅನ್ಯಾಯವಾಗದಂತೆ ಪೌಷ್ಟಿಕ ಆಹಾರ ವಿತರಿಸಲು ಸಾಧ್ಯ ಎಂಬುದು ಇಲಾಖೆಯ ನಂಬಿಕೆ.
ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಎಂ.ನಾಗರಾಜು, `ಐದು ವರ್ಷಗಳ ಯೋಜನೆ ಇದಾಗಿದ್ದು, ಕಳೆದ ವರ್ಷದಿಂದ ಗುಡ್ಡಗಾಡು ಪ್ರದೇಶದಲ್ಲಿರುವ ಪರಿಶಿಷ್ಟ ಪಂಗಡ ಜನಾಂಗದವರಿಗೆ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ. 2012ರಲ್ಲಿ ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು ಹಾಗೂ ಮೈಸೂರು ತಾಲ್ಲೂಕುಗಳ ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ 7,283 ಜೇನುಕುರುಬರಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗಿತ್ತು. ಈ ವರ್ಷ ಎಲ್ಲ ಜನಾಂಗದವರಿಗೂ ಪೌಷ್ಟಿಕ ಆಹಾರ ವಿತರಿಸಲಾಗುವುದು~ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.