ADVERTISEMENT

ಕಲ್ಲಹಳ್ಳಿಯಲ್ಲಿ ಸೌಕರ್ಯಕ್ಕೇ ಕಲ್ಲು!

ಆರ್.ರಂಗಸ್ವಾಮಿ
Published 10 ಜುಲೈ 2013, 8:52 IST
Last Updated 10 ಜುಲೈ 2013, 8:52 IST

ನಂಜನಗೂಡು: ಪಟ್ಟಣದಿಂದ 5 ಕಿ.ಮೀ. ದೂರದಲ್ಲಿರುವ, ಕೈಗಾರಿಕೆಗಳ ತವರು ಎನಿಸಿರುವ ಕಲ್ಲಹಳ್ಳಿ ಮೂಲ ಸೌಕರ್ಯದಿಂದ ವಂಚಿತವಾಗಿದೆ.

ಕಪಿಲಾ ನದಿ ಸಮೀಪದ ಕಲ್ಲಹಳ್ಳಿ ಗುಡ್ಡದ ವಿಶಾಲ ಬಯಲಿನಲ್ಲಿ ತಾಲ್ಲೂಕಿನ ಪ್ರಥಮ `ನಂಜನಗೂಡು ಕೈಗಾರಿಕಾ ಪ್ರದೇಶ' ತಲೆ ಎತ್ತಿ ಸುಮಾರು ಮೂರು ದಶಕಗಳು ಕಳೆದಿವೆ. ವಿಶ್ವ ಮಾರುಕಟ್ಟೆಯ ಪ್ರತಿಷ್ಠಿತ ನೆಸ್ಲೆ ಇಂಡಿಯಾ, ಜುಬಿಲೆಂಟ್ ಲೈಫ್ ಸೈನ್ಸ್‌ಸ್, ಆಸ್ಟ್ರೀಯಾ ದೇಶದ ಎಟಿ ಅಂಡ್ ಎಸ್, ಕೇರಳದ ಕೊಟ್ಟಕ್ಕಲ್ ಆರ್ಯವೈದ್ಯ ಶಾಲಾ ಕಾರ್ಖಾನೆ ಸೇರಿದಂತೆ 30ಕ್ಕೂ ಅಧಿಕ ಕೈಗಾರಿಕೆಗಳು ಈ ಪ್ರದೇಶದಲ್ಲಿ ಅಸ್ತಿತ್ವ ಪಡೆದಿವೆ. ಜುಬಿಲೆಂಟ್ ಕಾರ್ಖಾನೆ ಬೆನ್ನಿಗೆ ಅಂಟಿಕೊಂಡಂತೆ ಕಲ್ಲಹಳ್ಳಿ ಗ್ರಾಮವಿದೆ. ದೇಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಈ ಗ್ರಾಮ ಒಳಪಟ್ಟಿದೆ. ಇಲ್ಲಿನ ಕಾರ್ಖಾನೆಗಳಿಂದ ಉತ್ತಮ ವರಮಾನ ಕೂಡ ಬರುತ್ತಿದೆ. ಆದರೆ, ಕೈಗಾರಿಕಾ ಪ್ರದೇಶದ ಅಂಚಿನಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಈವರೆಗೂ ಡಾಂಬರೀಕರಣ ಭಾಗ್ಯ ಕಂಡಿಲ್ಲ. ಇದು ನಿಜಕ್ಕೂ ದುರದೃಷ್ಟ ಸಂಗತಿ ಎನ್ತುತ್ತಾರೆ ಕಲ್ಲಹಳ್ಳಿ ನಿವಾಸಿ ಕೃಷ್ಣ.

ಗ್ರಾಮದಲ್ಲಿ ಅರಸು, ಕುರುಬ, ನಾಯಕ, ಉಪ್ಪಾರ ಮತ್ತು ಪರಿಶಿಷ್ಟ ಜಾತಿ ಜನರು ಸೇರಿದಂತೆ ಸುಮಾರು 1,200ರಷ್ಟು ಜನಸಂಖ್ಯೆ ಇದೆ. ಗ್ರಾಮದ ಯಾವುದೇ ರಸ್ತೆ ಡಾಂಬರು ಕಂಡಿಲ್ಲ. ಗ್ರಾಮದ ಎಲ್ಲ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಚರಂಡಿಯ ನೀರು ಗ್ರಾಮದ ಅಂಚಿನ ನೀರಾವರಿ ನಾಲೆ ಸೇರುತ್ತಿದೆ. ಇದೇ ನೀರನ್ನು ಕುರಿ, ದನಕರುಗಳು ಕುಡಿಯುತ್ತಿದ್ದು, ರೋಗಗಳಿಗೆ ತುತ್ತಾಗುತ್ತಿವೆ. ಕಪಿಲಾ ನದಿ ಮತ್ತು ಗದ್ದೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ನಾಲಾ ಸೇತುವೆ ಕುಸಿದು ಬಿದ್ದಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಶುದ್ಧ ನೀರು: ಸಮುದಾಯ ಅಭಿವೃದ್ಧಿ ಯೋಜನೆ ಅಡಿ ಜುಬಿಲೆಂಟ್ ಕಾರ್ಖಾನೆ ವತಿಯಿಂದ ಕೆಲ ವರ್ಷಗಳ ಹಿಂದೆ ಗ್ರಾಮಕ್ಕೆ ಕಪಿಲಾ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡಲಾಯಿತು. ಆದರೆ ನೀರು ಅಶುದ್ಧವಾಗಿತ್ತು. ಅದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ ನಂತರ ಕಾರ್ಖಾನೆಯ ಆಡಳಿತ ವರ್ಗ ನೀರು ಶುದ್ಧೀಕರಣ ಮತ್ತು ವಿತರಣಾ ಘಟಕ ಸ್ಥಾಪಿಸಿ ನೀರು ಪೂರೈಸುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.