ADVERTISEMENT

ಕಾಡಾನೆ ದಾಳಿ: ಜೋಳ, ಬತ್ತದ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 9:35 IST
Last Updated 17 ಅಕ್ಟೋಬರ್ 2012, 9:35 IST

ಹುಣಸೂರು: ತಾಲ್ಲೂಕಿನ ಬಿಲ್ಲೇನಹೊಸಹಳ್ಳಿ ಗ್ರಾಮದ ಗದ್ದೆಗಳಿಗೆ ಸೋಮವಾರ ರಾತ್ರಿ ದಾಳಿ ಇಟ್ಟ ಕಾಡಾನೆಗಳು ಅಪಾರ ಪ್ರಮಾಣದ ಮುಸುಕಿನ ಜೋಳದ ಬೆಳೆ ತಿಂದು, ತುಳಿದು ನಾಶ ಮಾಡಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.

ನೇರಳಕುಪ್ಪೆ ಗ್ರಾಮ ಪಂಚಾಯಿತಿಗೆ ಸೇರಿದ ಬಿಲ್ಲೇನಹಳ್ಳಿಯ ಜಾನ್ಸನ್ ಅವರು ಬೆಳೆದ 2 ಎಕರೆ ಮುಸುಕಿನ ಜೋಳ, ಉಡುವೆಪುರ ಗ್ರಾಮದ ಜಯಕುಮಾರ್ ಮತ್ತು ಸೋಮಶೇಖರ್ ಎಂಬುವವರಿಗೆ ಸೇರಿದ ಬತ್ತದ ಗದ್ದೆಗಳನ್ನು ಕಾಡಾನೆಗಳು ನಾಶ ಮಾಡಿವೆ.

ಆಕ್ರೋಶ: ಮಂಗಳವಾರ ಬೆಳಿಗ್ಗೆ ಗದ್ದೆಗಳಿಗೆ ಭೇಟಿ ನೀಡಿದ ವಲಯ ಅರಣ್ಯಾಧಿಕಾರಿ ದೇವರಾಜ್ ಮತ್ತು ಸಿಬ್ಬಂದಿಯನ್ನು ತಡೆದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಆನೆ ಹಾವಳಿ ತಡೆಯಲಿ ಅರಣ್ಯ ಇಲಾಖೆ 10 ಜನ ವೀಕ್ಷಕರನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡಿದೆ. ಆದರೂ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕಾಟಾಚಾರಕ್ಕೆ ನೇಮಕ ಮಾಡಿಕೊಂಡಂತಾಗಿದೆ ಎಂದು ರೈತರು ದೂರಿದರು.

`ಕಾಡಿನಂಚಿನಲ್ಲಿ ಕಂದಕ ತೋಡುವ ಯೋಜನೆ ಸಮರೋಪಾದಿಯಲ್ಲಿ ನಡೆಯಬೇಕಿದೆ. ಅರಣ್ಯದಂಚಿನ ರೈತರು ಕಾಡಾನೆ ಹಾವಳಿಯಿಂದ ತತ್ತರಿಸಿಹೋಗಿದ್ದಾರೆ. ಕಂದಕ ತೋಡುವ ಯೋಜನೆಗೆ ಅನುದಾನ ಬಿಡುಗಡೆಗಾಗಿ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಇದರಿಂದ ಯೋಜನೆ ಹುಸಿಯಾಗಿದೆ~ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಗಣಪತಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.