ADVERTISEMENT

ಕಾಫಿ ಕೊಯ್ಲಿಗೆ ಅಡ್ಡಿಯಾದ ಮಳೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 5:08 IST
Last Updated 2 ಡಿಸೆಂಬರ್ 2017, 5:08 IST

ಮೈಸೂರು: ‘ಒಖಿ’ ಚಂಡಮಾರುತದ ಪರಿಣಾಮ ಕಾವೇರಿ ಕಣಿವೆಯ ಐದು ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಭತ್ತ ಮತ್ತು ಕಾಫಿ ಕೊಯ್ಲಿಗೆ ಅಡ್ಡಿಯಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ, ಪೊನ್ನಂಪೇಟೆ, ಗೋಣಿಕೊಪ್ಪಲು, ಬಾಳುಗೋಡು, ಶ್ರೀಮಂಗಲ ವ್ಯಾಪ್ತಿಯಲ್ಲಿ ಒಂದು ಗಂಟೆ ಗುಡುಗು ಸಹಿತ ಜೋರು ಮಳೆ ಸುರಿದಿದೆ.

ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಕುಶಾಲನಗರ, ಮಡಿಕೇರಿಯಲ್ಲೂ ಸಾಧಾರಣ ಮಳೆಯಾಗಿದೆ. ವೇಗವಾಗಿ ಬೀಸುತ್ತಿರುವ ಗಾಳಿಯಿಂದ ವಿಪರೀತ ಚಳಿಯ ಅನುಭವವಾಗುತ್ತಿದೆ.

ಮಂಡ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಶುಕ್ರವಾರ ನಸುಕಿನಿಂದ ಆರಂಭವಾದ ಜಿಟಿಜಿಟಿ ಮಳೆ ಸಂಜೆಯವರೆಗೆ ಬಿಟ್ಟು ಬಿಟ್ಟು ಸುರಿಯಿತು. ಮೈನಡುಗುವ ಚಳಿಗೆ ಜನರು ತತ್ತರಿಸಿದ್ದಾರೆ. ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವಂತಹ ವಾತಾವರಣ ನಿರ್ಮಾಣವಾಗಿದೆ.

ADVERTISEMENT

ತಮಿಳುನಾಡು ಹಾಗೂ ಕೇರಳಕ್ಕೆ ಹೊಂದಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಹನೂರು, ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತ ವರುಣನ ಅಬ್ಬರ ಜೋರಾಗಿತ್ತು. ಪಿ.ಜಿ.ಪಾಳ್ಯ ಮತ್ತು ಪೊನ್ನಾಚಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಹಾಸನದಲ್ಲಿ ತುಂತುರು ಮಳೆಯಾಗಿದ್ದು, ಮೋಡ ಕವಿದ ವಾತಾವರಣವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.