ADVERTISEMENT

ಕಾವಾಡಿಗಳ ಕೂಗು ಅರಣ್ಯರೋದನ!

ಪ್ರಜಾವಾಣಿ ವಿಶೇಷ
Published 9 ಅಕ್ಟೋಬರ್ 2011, 4:15 IST
Last Updated 9 ಅಕ್ಟೋಬರ್ 2011, 4:15 IST
ಕಾವಾಡಿಗಳ ಕೂಗು ಅರಣ್ಯರೋದನ!
ಕಾವಾಡಿಗಳ ಕೂಗು ಅರಣ್ಯರೋದನ!   

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾದ ಕೇಂದ್ರ ಬಿಂದು ಬಲರಾಮನ ಮೇಲೆ ಅಂಬಾರಿ ಹೊರಿಸಿ ಮೆರವಣಿಗೆ ನೇತೃತ್ವ ವಹಿಸಿದ್ದ ಕಾವಾಡಿಗ ತಿಮ್ಮ ಮೊದಲ ಹೆಜ್ಜೆಯಲ್ಲಿ ಯಶಸ್ಸು ಕಂಡಿದ್ದಾನೆ. ಎಲ್ಲವು ಅಂದುಕೊಂಡಂತೆ ನಡೆದಿದ್ದರಿಂದ ತಿಮ್ಮ ನಿರಾಳನಾಗಿದ್ದಾನೆ.

ದಸರಾದಲ್ಲಿ 14 ಬಾರಿ ಅಂಬಾರಿ ಹೊತ್ತ ಹೆಗ್ಗಳಿಕೆಗೆ ಪಾತ್ರವಾಗಿರುವ ಬಲರಾಮನನ್ನು ಈ ಮೊದಲು ಸಣ್ಣಪ್ಪ ನೋಡಿಕೊಳ್ಳುತ್ತಿದ್ದ. ಸಣ್ಣಪ್ಪನ ಕೈ ಕೆಳಗೆ ತಿಮ್ಮ ಕಾವಾಡಿಗನಾಗಿ ದುಡಿಯುತ್ತಿದ್ದ. ಸಣ್ಣಪ್ಪ ನಿವೃತ್ತಿಯಾದ ಬಳಿಕ ಬಲರಾಮನನ್ನು ನೋಡಿಕೊಳ್ಳುವ ಜವಾಬ್ದಾರಿ ತಿಮ್ಮನ ಹೆಗಲಿಗೆ ಬಿತ್ತು.

ಬಲರಾಮನೊಂದಿಗೆ ಹಿಂದಿನಿಂದಲೂ ಒಡನಾಟ ಹೊಂದಿದ್ದ ತಿಮ್ಮನಿಗೆ ಮೊದಲ ಬಾರಿಗೆ ಬಲರಾಮನ ಸಾರಥಿಯಾಗುವ ಅವಕಾಶ ಸಿಕ್ಕಿತು. ಮೆರವಣಿಗೆಯಲ್ಲಿ ಬಲರಾಮ ಹೊಂದಿಕೊಳ್ಳುತ್ತಾನೊ ಎಂಬ ಆತಂಕ ತಿಮ್ಮನಲ್ಲಿ ಮನೆ ಮಾಡಿತ್ತು. ದಸರಾದಲ್ಲಿ ಯಾವುದೇ ತೊಂದರೆ ಎದುರಾಗದೆ ಎಲ್ಲವೂ ಸುಸೂತ್ರವಾಗಿ ನಡೆಯಲಿ ಎಂದು ತಿಮ್ಮ ಮನೆ ದೇವರನ್ನು ಪ್ರಾರ್ಥಿಸಿದ್ದ. ತಿಮ್ಮನ ಬಯಕೆಯಂತೆ ಎಲ್ಲವು ಸುಸೂತ್ರವಾಗಿ ನಡೆದಿದೆ.

ವಿಜಯದಶಮಿ ಯಂದು ತರಾತುರಿಯಲ್ಲಿ ಹಗ್ಗ ಕಟ್ಟಿದ್ದರಿಂದ ಅಂಬಾರಿ ಎಡಕ್ಕೆ ವಾಲಿತ್ತು. ಮೆರವಣಿಗೆ ಮಧ್ಯದಲ್ಲಿ ಮೂರ‌್ನಾಲ್ಕು ಬಾರಿ ಹಗ್ಗವನ್ನು ಎಳೆದು ಸರಿಯಾಗಿ ಕಟ್ಟಲಾಯಿತು. ಬನ್ನಿಮಂಟಪಕ್ಕೆ ಗಜಪಡೆ ಮುಟ್ಟಿಸುವಲ್ಲಿ ಕಾವಾಡಿಗಳು, ಮಾವುತರು ಯಶಸ್ವಿಯಾದರು.

ಸುಮಾರು 20 ವರ್ಷಗಳಿಂದ ತಿಮ್ಮ ಕಾವಾಡಿಗನಾಗಿ ದುಡಿದಿದ್ದಾನೆ. ದಸರಾ ಮಹೋತ್ಸವ ದಲ್ಲಿ ಅನೇಕ ವರ್ಷಗಳಿಂದ ಸಣ್ಣಪ್ಪನೊಂದಿಗೆ ಇದ್ದು ಬಲರಾಮನ ಜೊತೆ ಹೆಚ್ಚಿನ ಒಡನಾಟವನ್ನು ತಿಮ್ಮ ಹೊಂದಿದ್ದರಿಂದ ಹೆಗಲಿಗೆ ಬಂದ ಜವಾಬ್ದಾರಿಯನ್ನು ಸುಲಭವಾಗಿ ನಿರ್ವಹಿಸಿದ್ದಾನೆ. ತಿಮ್ಮ ಮಾವುತನ ಕೆಲಸ ಮಾಡುತ್ತಿದ್ದರೂ ಹುದ್ದೆ ಇರುವುದು ಮಾತ್ರ ಕಾವಾಡಿಗನಾಗಿ. ಕೆಲಸಕ್ಕೆ ತಕ್ಕ ಹುದ್ದೆ ಇಲ್ಲವೆಂಬ ಕೊರಗು ಈತನಲ್ಲಿದೆ.

`ಕೊಟ್ಟ ಜವಾಬ್ದಾರಿಯನ್ನು ಚಾಚು ತಪ್ಪದೆ ನಿರ್ವಹಿಸುತ್ತೇನೆ. ಬಲರಾಮನಿಗೆ ಸಾರಥಿಯಾಗಿ ಮೆರವಣಿಗೆಯನ್ನು ಮುನ್ನಡೆಸಿದ್ದೇನೆ. ಮಾವುತ ನಾಗಿ ಬಡ್ತಿ ಹೊಂದಬೇಕಾದರೂ ಕಾವಾಡಿ ಗನಾಗಿ ಮುಂದುವರೆಸಲಾಗುತ್ತಿದೆ. ಕೆಲಸಕ್ಕೆ ತಕ್ಕ ಹುದ್ದೆ, ಸಂಬಳ ದೊರೆಯುತ್ತಿಲ್ಲ~ ಎಂದು ತಿಮ್ಮ ನೊಂದು ನುಡಿಯುತ್ತಾನೆ.

ಇದೇ ಕೊರಗು ಅಭಿಮನ್ಯುವನ್ನು ಮುನ್ನಡೆ ಸಿದ ಕಾವಾಡಿಗ ವಸಂತನಲ್ಲಿಯೂ ಇದೆ. ಈತನು ಸಹ ಮಾವುತನಾಗಲು ಎಲ್ಲ ಅರ್ಹತೆಗಳಿದ್ದರೂ ಸಹ ಇದುವರೆಗೂ ಬಡ್ತಿ ದೊರಕಿಲ್ಲ. ತಿಮ್ಮ ಹಾಗೂ ವಸಂತ ಬಡ್ತಿ ಸಿಗದೆ ಕೊರಗುತ್ತಿದ್ದಾರೆ. ಸರ್ಕಾರ ಯಾವಾಗ ಬಡ್ತಿ ನೀಡುತ್ತದೆ ಎಂಬುದನ್ನೇ ಎದುರು ನೋಡುತ್ತಿದ್ದಾರೆ.

ಲಕ್ಷಾಂತರ ಜನರು ಸೇರುವ ದಸರಾ ಮೆರವ ಣಿಗೆಯಲ್ಲಿ ಗಜಪಡೆಯನ್ನು ಮುನ್ನಡೆಸುವುದು ಸುಲಭದ ಮಾತಲ್ಲ. ಅದಕ್ಕಾಗಿ ಮೊದಲೇ ಅರಮನೆಗೆ ಕುಟುಂಬ ಸಮೇತರಾಗಿ ಕಾವಾಡಿ ಗಳು, ಮಾವುತರು ಬೀಡುಬಿಟ್ಟು ಆನೆಗಳಿಗೆ ತಾಲೀಮು ನಡೆಸುತ್ತಾರೆ. ಆನೆಗಳೊಂದಿಗೆ ಹೆಚ್ಚಿನ ಒಡನಾಟ ಇಟ್ಟುಕೊಳ್ಳುತ್ತಾರೆ. ಮೆರವಣಿಗೆಯಲ್ಲಿ ಸ್ವಲ್ಪ ಹೆಚ್ಚು- ಕಮ್ಮಿಯಾ ದರೂ ದೊಡ್ಡ ಅನಾಹುತವೇ ಸಂಭವಿಸುತ್ತದೆ.

ಮೆರವಣಿಗೆಯಲ್ಲಿ ಕಾವಾಡಿಗಳು, ಮಾವುತರ ಪಾತ್ರ ಹೆಚ್ಚಿರುತ್ತದೆ. ಆದರೆ ಕೆಲಸಕ್ಕೆ ತಕ್ಕ ಹುದ್ದೆ ಇಲ್ಲವೆಂಬ ಕೊರಗು ಕಾವಾಡಿಗಳಿಂದ ದೂರವಾಗಿಲ್ಲ. ಕಾವಾಡಿಗಳ ಬಡ್ತಿಯ ಕೂಗು ಅರಣ್ಯ ರೋದನವಾಗಿದೆ. ಇನ್ನಾದರೂ ಸರ್ಕಾರ ಕಾವಾಡಿಗಳ ಕೊರಗನ್ನು ದೂರ ಮಾಡುವುದೇ ಕಾದು ನೋಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.