ADVERTISEMENT

ಕುಡಿಯುವ ನೀರು ಕಲುಷಿತ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 10:35 IST
Last Updated 10 ಫೆಬ್ರುವರಿ 2012, 10:35 IST

ತಿ.ನರಸೀಪುರ: ಪಟ್ಟಣ ಹಾಗೂ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಾವಣೆಗಳಿಗೆ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಗುರುವಾರ ತಹಶೀಲ್ದಾರರು ಜಾಕ್‌ವೆಲ್ ಪರಿಶೀಲಿಸಿದರು.

ನೀರಿನ ಮಾದರಿಯನ್ನು ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಲು ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಸೇರಿದಂತೆ ಹಲವು ಮುಖಂಡರು ಗುರುವಾರ ತಹಶೀಲ್ದಾರ್ ಜವರಿಗೆ ಮನವಿ ಮಾಡಿದ್ದರು. ಇದರಿಂದಾಗ ತಹಶೀಲ್ದಾರ ಟಿ. ಜವರೇಗೌಡ ನೀರು ಪೂರೈಕೆ ಸ್ಥಳಗಳನ್ನು ಪರಿಶೀಲಿಸಿದರು.

ಮೊದಲಿಗೆ ಕಪಿಲಾ ಸೇತುವೆ ಬಳಿ ಇರುವ ನದಿಯಿಂದ ಜಾಕ್ ವೆಲ್‌ಗೆ ಪೂರೈಕೆಯಾಗುವ ನೀರು ಕೊಳಚೆಯಂತಿತ್ತು. ಕಸ ಕಡ್ಡಿ ಪಾಚಿ ಸೇರಿದಂತೆ ಅನೈರ್ಮಲ್ಯ ನೀರಿನ ವಾತವರಣವಿತ್ತು. ಇದರ ಬಗ್ಗೆ ತಹಶೀಲ್ದಾರ್ ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಜೋಡಿ ರಸ್ತೆಯಲ್ಲಿರುವ ನೀರು ಶುದ್ದೀಕರಣಕ್ಕೆ ತೆರಳಿದಾಗ ಮುಖ್ಯಾಧಿಕಾರಿ ವಿ.ಟಿ.ವಿಲ್ಸನ್ ಹಾಗೂ ಜೂನಿಯರ್ ಇಂಜಿನಿಯರ್ ಪುರುಷೋತ್ತಮ್, ಇತ್ತೀಚೆಗೆ ಸ್ವಚ್ಛಗೊಳಿಸಿರುವುದಾಗಿ ಹೇಳಿದರು. ಇದು ರಾಜಕೀಯ ಪ್ರೇರಿತ ಎಂಬುದಾಗಿ ಹೇಳಿದರೂ ಹೊರತು ಸ್ವಚ್ಛಗೊಳಿಸಲು ಸರಿಯಾದ ಕ್ರಮ ಕೈಗೊಳ್ಳುವುದಾಗಿ ಉತ್ತರಿಸಲಿಲ್ಲ. ಕೇಂದ್ರದಲ್ಲಿ ಕೂಡ ಟ್ಯಾಂಕ್‌ಗಳಲ್ಲಿ ಪಾಚಿ ಕಂಡುಬಂತು.

ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಸಿದ್ದಲಿಂಗಮೂರ್ತಿ, ಬಿಎಸ್‌ಪಿ ಮುಖಂಡ ಕೆ.ಎನ್. ಪ್ರಭುಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮು.ರು. ನಾಗೇಂದ್ರಕುಮಾರ್ ಅಗರ ಪರಶಿವಮೂರ್ತಿ, ಗ್ರಾಮೀಣ ಪೌಂಡೇಷನ್‌ನ ಶಂಭುದೇವನಪುರ ಕುಮಾರ್, ಮಹಾದೇವಸ್ವಾಮಿ, ರೈತ ಸಂಘದ ಅಧ್ಯಕ್ಷ ಮಹಾದೇವ್, ಕಳ್ಳಿಪುರ ಮಹಾದೇವಸ್ವಾಮಿ, ತುಂಬಲ ಮಂಜುನಾಥ್, ಸಿದ್ದರಾಜು, ಚಿದರಹಳ್ಳಿ ನಾಗೇಂದ್ರಸ್ವಾಮಿ  ದೂರಿದರು.

ಮೂಲ ನೀರು ಪೂರೈಕೆ ಸ್ಥಳ, ನೀರು ಶುದ್ದೀಕರಣ ಕೇಂದ್ರ ಹಾಗೂ ಕೊಳಾಯಿಯಲ್ಲಿ ಪೂರೈಕೆಯಾಗುವ ನೀರನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಜಿಲ್ಲಾ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಮನವಿ ಮಾಡಿದರು.

ತಹಶೀಲ್ದಾರ್ ಜವರೇಗೌಡ ಮಾತನಾಡಿ, ಇಲ್ಲಿ ಮೂಲ ಸ್ಥಳದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಆದರೆ ಇದನ್ನು ಸಮರ್ಪಕವಾಗಿ ಶುದ್ಧೀಕರಿಸಿ ಸಾರ್ವಜನಿಕರಿಗೆ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು  ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.