ಮೈಸೂರು: ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಕ್ರಮ ಕೈಗೊಳ್ಳಲು ಸರ್ಕಾರ ಒಂದು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.ನಗರದಲ್ಲಿ ಶನಿವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಈ ಬಗ್ಗೆ ತ್ವರಿತವಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಗತ್ಯವಿರುವೆಡೆ ಜಿಲ್ಲಾಧಿಕಾರಿ ಜೊತೆ ಮಾತನಾಡಿ ಮಂಜೂರಾತಿ ಪಡೆದು ಕೊಳವೆ ಬಾವಿಗಳನ್ನು ತೆಗೆಯಬೇಕು. ಬೇಸಿಗೆಯಲ್ಲಿ ಜನ ತತ್ತರಿಸದಂತೆ ಎಲ್ಲ ರೀತಿಯ ಕ್ರಮಕ್ಕೆ ಮುಂದಾಗಬೇಕು’ ಎಂದು ಸೂಚಿಸಿದರು.
ಬೇಸಿಗೆಯ ಸಮಸ್ಯೆ ನೀಗಲು ಯೋಜಿತ ಕಾರ್ಯ ರೂಪಿಸಿ ಆ ಕುರಿತು ತಮ್ಮ ನೇತೃತ್ವದಲ್ಲಿಯೇ ಸಭೆ ನಡೆಸಿ ಚರ್ಚಿಸಬೇಕಿದೆ. ಆ ಸಭೆಯನ್ನು ಮುಂದಿನ ವಾರವೇ ಏರ್ಪಡಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಚಾಮುಂಡಿಬೆಟ್ಟದಲ್ಲಿ ಕಳೆದ ಎರಡು ದಿನಗಳಿಂದ ಕುಡಿಯುವ ನೀರು ಸಮರ್ಪಕವಾಗಿ ಸರಬರಾಜು ಆಗಿಲ್ಲ. ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ನೀಗುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಕುಡಿವ ನೀರು, ವಿದ್ಯುತ್ ಸಮಸ್ಯೆ, ಅನೈರ್ಮಲ್ಯದಿಂದ ಸಾಂಕ್ರಾಮಿಕ ರೋಗಗಳು ಉಂಟಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಈ ಬಗ್ಗೆ ಆರೋಗ್ಯಾಧಿಕಾರಿ, ಸೆಸ್ಕ್ ಜಾಗೃತೆ ವಹಿಸಬೇಕು ಎಂದು ಸೂಚಿಸಿದರು.ಮೈಸೂರು ನಗರದಲ್ಲಿ ಎಕ್ಸೆಲ್ ಪ್ಲಾಂಟ್‌ನ್ನು 2010ರ ಏಪ್ರಿಲ್‌ನೊಳಗೆ ಪೂರ್ಣಗೊಳಿಸಬೇಕಿದ್ದು ಈವರೆಗೆ ಸಮರ್ಪಕವಾಗಿ ಕ್ರಮ ಕೈಗೊಳ್ಳದ ಸಂಬಂಧಿಸಿದ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸುವಂತೆ ಆದೇಶ ನೀಡಿದರು.
ವರ್ಷಗಟ್ಟಲೆ ಕೆಲಸವಾಗಿಲ್ಲ ಎಂದರೆ ಜನಸಾಮಾನ್ಯರ ಪಾಡೇನು? ಈ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಸಲ್ಲದು. ಖಾಸಗಿ ಬಡಾವಣೆಗಳನ್ನು ಕಳೆದ ಸಭೆಯಲ್ಲಿಯೇ ನಗರಪಾಲಿಕೆಗೆ ಹಸ್ತಾಂತರಿಸುವಂತೆ ಮುಡಾಗೆ ಸೂಚಿಸಲಾಗಿತ್ತು. ಏಪ್ರಿಲ್ ಅಂತ್ಯದೊಳಗೆ ಅಗತ್ಯ ಕ್ರಮ ಕೈಗೊಂಡು ವರದಿ ಮಾಡುವಂತೆ ಮುಡಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
24 ಗಂಟೆ ನೀರು ಪೂರೈಸುವ ಜಸ್ಕೋ ಕಾಮಗಾರಿಯಲ್ಲಿ ಆಗುತ್ತಿರುವ ವಿಳಂಬ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ಮುಂದಿನ ವಾರ ಏರ್ಪಡಿಸಲು ಸೂಚಿಸಿದ ಅವರು, ಹೊಸ ಪೈಪ್‌ಲೈನ್ ಅಳವಡಿಸಲು ತೆಗೆಯಲಾದ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿಲ್ಲ ಎಂಬ ದೂರುಗಳು ಬಂದಿವೆ. ರಸ್ತೆಗಳನ್ನು ಮೊದಲಿನಂತೆ ದುರಸ್ತಿ ಮಾಡುವ ಜವಾಬ್ದಾರಿ ರಸ್ತೆ ಅಗೆದವರದ್ದೇ ಆಗಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಪ್ರಮಾಣ ಪತ್ರ ನೀಡಬೇಕು ಎಂದು ಸೂಚಿಸಿದರು.
ಸಮರ್ಪಕವಾಗಿ ನಾಗರಿಕ ಸನ್ನದು ಪ್ರಕಟಿಸಬೇಕು. ಅದನ್ನು ಕಚೇರಿಯ ಪ್ರವೇಶದ ಬಳಿ ದೊಡ್ಡದಾಗಿ ಅಳವಡಿಸಬೇಕು. ಮುಂದಿನ ಸಭೆಗೆ ಹಾಜರಾಗುವಾಗ ಅನುಮೋದಿತ ದಿನಚರಿಯೊಂದಿಗೆ ನಾಗರಿಕ ಸನ್ನದಿನ ಪ್ರತಿ ತರಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.
ಪಾಲಿಕೆಯಲ್ಲಿ ಸಾರ್ವಜನಿಕ ದೂರುಗಳ ದಾಖಲೀಕರಣ ಸಮಸ್ಯೆಗಳಿಗೆ ಸೂಕ್ತ ಪರಿಹಾರ ವ್ಯವಸ್ಥೆ ಹಾಗೂ ದೂರು ನೀಡಿದ ಸಾರ್ವಜನಿಕರಿಗೆ ತೆಗೆದುಕೊಂಡ ಕ್ರಮದ ಬಗ್ಗೆ ಉತ್ತರಿಸುವ ಕ್ರಮ ಸಮರ್ಪಕವಾಗಿಲ್ಲ. ಸ್ವತಃ ತಮ್ಮ ಕಚೇರಿಯಿಂದಲೇ ಹಲವು ಬಾರಿ ದೂರು ನೀಡಿದರೂ ಪದೇ ಪದೇ ಅದೇ ವಿಷಯ ಕುರಿತು ದೂರು ನೀಡಬೇಕಾದ ಪರಿಸ್ಥಿತಿ ಇರುವಾಗ ಸಾರ್ವಜನಿಕರಿಗೆ ಇದರಿಂದ ಇನ್ನೆಷ್ಟರ ಮಟ್ಟಿಗೆ ಸೌಲಭ್ಯ ಸಿಗುತ್ತಿರಬಹುದು. ಇನ್ನುಮುಂದೆ ಸಭೆಗೆ ಬರುವಾಗ ಈ ಬಗ್ಗೆಯೂ ಅಗತ್ಯ ದಾಖಲೆಗಳನ್ನು ತರಬೇಕು. ವಲಯವಾರು ಕಾಮಗಾರಿಗಳು, ಅವುಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಕಾಮಗಾರಿಗಳ ಗುಣಪಟ್ಟ ಕುರಿತಂತೆಯೂ ವರದಿ ದಾಖಲಿಸಿ, ಗುಣಮಟ್ಟವಿಲ್ಲದ ಕಾಮಗಾರಿಗಳ ಗುತ್ತಿಗೆದಾರರ ವಿರುದ್ದ ಕ್ರಮ ಜಾರಿಗೊಳಿಸಬೇಕು ಎಂದು ತಿಳಿಸಿದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಅಗತ್ಯ ನಗರ ಬಸ್ ಸಂಚಾರ ಹಾಗೂ ಬಸ್ ತಂಗುದಾಣ ನಿರ್ಮಿಸಲು ಸೂಚಿಸಲಾಗಿತ್ತು. ಈ ನಿಟ್ಟಿನಲ್ಲಿ ಪಾಲಿಕೆಯ ಕ್ರಮವೂ ಅಗತ್ಯವಿದೆ. ಬಸ್ ತಂಗುದಾಣ ನಿರ್ಮಿಸುವಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದರೂ ಪೂರ್ಣ ಕ್ರಮ ಆಗಿಲ್ಲದಿರುವ ಬಗ್ಗೆ ವಿಷಾದಿಸಿದ ಸಚಿವರು ಹೆಬ್ಬಾಳದ ಆಶಾಕಿರಣ ಆಸ್ಪತ್ರೆಯವರೇ ರೋಗಿಗಳ ಅನುಕೂಲತೆಗಾಗಿ ಬಸ್ ತಂಗುಗಾಣ ನಿರ್ಮಿಸಲು ಮುಂದೆ ಬಂದಿದ್ದರೂ ಈವರೆಗೆ ಕ್ರಮಕೈಗೊಂಡಿಲ್ಲ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ: 2010-11ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ದೃಷ್ಟಿಯಿಂದ ಈಗಾಗಲೇ ಮೂರು ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಹೇಳಿದರು.
ಪೂರ್ವಭಾವಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾ. 20ರಿಂದ 27ರ ವರೆಗೆ ಆಯಾ ತಾಲ್ಲೂಕು ಹಾಗೂ ನಗರ ಪ್ರದೇಶದಲ್ಲಿ ತರಬೇತಿ ಕೇಂದ್ರಗಳನ್ನು ಆರಂಭಿಸಿ ನುರಿತ ಶಿಕ್ಷಕರಿಂದ ಬೋಧನೆ ಮಾಡಿಸಲಾಗುವುದು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.