ADVERTISEMENT

ಕುಮಾರಸ್ವಾಮಿ ರೋಡ್‌ ಶೋ, ಮತಯಾಚನೆ

ಚಾಮರಾಜ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಕೆ.ಎಸ್‌.ರಂಗಪ್ಪ ಪರ ಬಿರುಸಿನ ಪ್ರಚಾರ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 12:57 IST
Last Updated 28 ಏಪ್ರಿಲ್ 2018, 12:57 IST
ಚಾಮರಾಜ ಕ್ಷೇತ್ರದಲ್ಲಿ ರೋಡ್‌ ಶೋ ವೇಳೆ ಎಚ್‌.ಡಿ.ಕುಮಾರಸ್ವಾಮಿ ಅವರು ಅಭಿಮಾನಿಗಳಿಗೆ ಕೈಮುಗಿದರು. ಕೆ.ಎಸ್‌.ರಂಗಪ್ಪ, ಸಾ.ರಾ.ಮಹೇಶ್‌, ಎಂ.ಜೆ.ರವಿಕುಮಾರ್‌ ಇದ್ದಾರೆ
ಚಾಮರಾಜ ಕ್ಷೇತ್ರದಲ್ಲಿ ರೋಡ್‌ ಶೋ ವೇಳೆ ಎಚ್‌.ಡಿ.ಕುಮಾರಸ್ವಾಮಿ ಅವರು ಅಭಿಮಾನಿಗಳಿಗೆ ಕೈಮುಗಿದರು. ಕೆ.ಎಸ್‌.ರಂಗಪ್ಪ, ಸಾ.ರಾ.ಮಹೇಶ್‌, ಎಂ.ಜೆ.ರವಿಕುಮಾರ್‌ ಇದ್ದಾರೆ   

ಮೈಸೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಚಾಮರಾಜ ಕ್ಷೇತ್ರದಲ್ಲಿ ಕೆಲವೆಡೆ ರೋಡ್‌ ಶೋ ನಡೆಸಿ ಪಕ್ಷದ ಅಭ್ಯರ್ಥಿ ಕೆ.ಎಸ್‌.ರಂಗಪ್ಪ ಪರ ಮತಯಾಚಿಸಿದರು.

ಕೆ.ಜಿ.ಕೊಪ್ಪಲಿನ ಚಾಮುಂಡಿದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿದರು. ಪ್ರಚಾರ ಬಸ್‌ ಏರಿದ ಕುಮಾರಸ್ವಾಮಿ ಸ್ಥಳದಲ್ಲಿ ಸೇರಿದ್ದ ನೂರಾರು ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದರು.

‘ನಾನು ಈ ಹಿಂದೆ 20 ತಿಂಗಳು ಆಡಳಿತ ನಡೆಸಿದ್ದ ಅವಧಿಯಲ್ಲಿ ಮೈಸೂರು ನಗರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದೇನೆ. ಕಾಂಗ್ರೆಸ್‌ ಸರ್ಕಾರ ಐದು ವರ್ಷಗಳಲ್ಲಿ ಏನನ್ನೂ ನೀಡಿಲ್ಲ’ ಎಂದು ಟೀಕಿಸಿದರು.

ADVERTISEMENT

ಬಡಮಕ್ಕಳಿಗೆ ಉಚಿತ ಶಿಕ್ಷಣ ಕೊಡಲು ಸರ್ಕಾರಕ್ಕೆ ಆಗಿಲ್ಲ. ಸರ್ಕಾರಿ ಶಾಲೆಗಳ ಸ್ಥಿತಿ ಉತ್ತಮವಾಗಿಲ್ಲ. ಇದರಿಂದ ಹೆತ್ತವರು ತಮ್ಮ ಮಕ್ಕಳನ್ನು ದುಬಾರಿ ಶುಲ್ಕ ತೆತ್ತು ಕಾನ್ವೆಂಟ್‌ಗಳಿಗೆ ಕಳುಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿರುದ್ಯೋಗ ಸಮಸ್ಯೆ ದಿನೇದಿನೇ ಹೆಚ್ಚುತ್ತಿದೆ ಎಂದರು.

ಲೂಟಿ ಮಾಡಿದ ಹಣದಿಂದ ಅಕ್ಕಿ: ರಾಜ್ಯ ಸರ್ಕಾರ ಪುಕ್ಕಟೆಯಾಗಿ ನೀಡುತ್ತಿರುವ ಅಕ್ಕಿಯನ್ನು ಸಿದ್ದರಾಮನಹುಂಡಿಯಿಂದ ತರುತ್ತಿಲ್ಲ. ನಿಮ್ಮ ತೆರಿಗೆ ಹಣವನ್ನು ಲೂಟಿ ಮಾಡಿ ಅಕ್ಕಿ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

‘ಸರ್ಕಾರ ಒಂದು ಕಡೆ ಪುಕ್ಕಟೆ ಅಕ್ಕಿ ನೀಡುತ್ತಿದ್ದರೆ, ಮತ್ತೊಂದು ಕಡೆ ಮದ್ಯ ಮಾರಾಟದಿಂದ ನಿಮ್ಮ ಜೇಬಿಗೆ ಕತ್ತರಿ ಹಾಕುತ್ತಿದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಸಾರಾಯಿ ಮಾರಾಟ ನಿಷೇಧಿಸಿದ್ದೆ’ ಎಂದು ಸ್ಮರಿಸಿದರು.

‘ನೀವು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಆಡಳಿತ ನಡೆಸಲು ಅವಕಾಶ ನೀಡಿದ್ದೀರಿ. ನಿಮ್ಮ ಮನೆಯ ಸದಸ್ಯನೆಂದು ಭಾವಿಸಿ ಈ ಬಾರಿ ನನಗೆ ಅವಕಾಶ ಕೊಡಿ’ ಎಂದು ಕೈಮುಗಿದುಕೊಂಡು ಮನವಿ ಮಾಡಿದರು.

ಕುಮಾರಸ್ವಾಮಿ ಅವರು ಭಾಷಣ ಮುಗಿಸಿ ಹೊರಡಲು ಮುಂದಾದಾಗ ಮಹಿಳೆಯೊಬ್ಬರು ಏನನ್ನೋ ಹೇಳಲು ಮುಂದಾದರು. ’ಆ ಕಡೆಯಿಂದ ಬಾರಮ್ಮಾ’ ಎಂದು ಅವರನ್ನು ಕರೆದರು. ಪ್ರಚಾರ ಬಸ್‌ನಿಂದ ಹೊರಬಂದು ಮಹಿಳೆಯ ಮನವಿ ಆಲಿಸಿದರು.

ಯುವಕರು ಹಲವು ಬೈಕುಗಳಲ್ಲಿ ರೋಡ್‌ ಶೋಗೆ ಸಾಥ್‌ ನೀಡಿದರು. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಕಡೆಗಳಲ್ಲಿ ಬಸ್ಸಿನಿಂದ ಕೆಳಗಿಳಿದು ಬಂದು ಮಾತನಾಡಿಸಿದರು.

ನ್ಯೂಕಾಂತರಾಜೇ ಅರಸ್‌ ರಸ್ತೆಯಲ್ಲಿ ಸಾಗಿದ ರೋಡ್‌ ಶೋ ಕಲಾಮಂದಿರ ಬಳಿಯಿಂದ ಹುಣಸೂರು ರಸ್ತೆಯಲ್ಲಿ ಮುಂದುವರಿಯಿತು. ಆ ಬಳಿಕ ಶಿವರಾಂಪೇಟೆ, ಕೆ.ಟಿ.ಸ್ಟ್ರೀಟ್‌, ಸಾಡೇ ರಸ್ತೆ, ಅಕ್ಬರ್‌ ರಸ್ತೆ, ತಿಲಕ್‌ನಗರ, ಪಡುವಾರಹಳ್ಳಿವರೆಗೆ ಮುಂದುವರಿಯಿತು.

ರಂಗಪ್ಪ, ಶಾಸಕ ಸಾ.ರಾ.ಮಹೇಶ್‌, ಪಾಲಿಕೆ ಸದಸ್ಯ ಎಂ.ಜೆ.ರವಿಕುಮಾರ್‌, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಕೆ.ಟಿ.ಚೆಲುವೇಗೌಡ ಮತ್ತು ಇತರ ಮುಖಂಡರು ಪಾಲ್ಗೊಂಡಿದ್ದರು.

‘ರಾಹುಲ್‌ ಪ್ರವಾಸ ಪರಿಣಾಮ ಬೀರದು’

ರಾಹುಲ್ ಗಾಧಿ ಅವರ ಪ್ರವಾಸ ರಾಜ್ಯದ ಮತದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ‘ಅವರಿಗೆ ಇಲ್ಲಿನ ಸತ್ಯ ಗೊತ್ತಿಲ್ಲ. ಪಕ್ಷದ ನಾಯಕರು ಬರೆದುಕೊಟ್ಟ ಭಾಷಣ ಓದಿ ಹೋಗುತ್ತಾರೆ’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.