ADVERTISEMENT

ಕೆಲಸದಲ್ಲಿ ಪಾರದರ್ಶಕತೆ ಅವಶ್ಯ: ಸಿಎಂ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 9:50 IST
Last Updated 16 ಸೆಪ್ಟೆಂಬರ್ 2011, 9:50 IST
ಕೆಲಸದಲ್ಲಿ ಪಾರದರ್ಶಕತೆ ಅವಶ್ಯ: ಸಿಎಂ
ಕೆಲಸದಲ್ಲಿ ಪಾರದರ್ಶಕತೆ ಅವಶ್ಯ: ಸಿಎಂ   

ಮೈಸೂರು: `ರಾಜಕಾರಣಿಗಳು ಮತ್ತು ಎಂಜಿನಿಯರ್‌ಗಳಿಗೆ ನಿಕಟ ಸಂಪರ್ಕ ವಿರುತ್ತದೆ. ಆದರೆ ಈ ಸಂಬಂಧವು ಅಪಾರ್ಥಕ್ಕೆ ಎಡೆ ಮಾಡಿಕೊಡ ಬಾರದು. ಪಾರದರ್ಶಕವಾಗಿ ಕೆಲಸ ನಿರ್ವಹಿಸಬೇಕು~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.

ಸರ್.ಎಂ. ವಿಶ್ವೇಶ್ವರಯ್ಯನವರ 151ನೇ ಜನ್ಮದಿನೋತ್ಸವ ಮತ್ತು ಎಂಜಿನಿಯರ್‌ಗಳ ದಿನಾಚರಣೆ ಅಂಗವಾಗಿ ಗುರುವಾರ ಕರ್ನಾಟಕ ಎಂಜಿನಿಯರುಗಳ ಸಂಘ, ಕರ್ನಾಟಕ ಎಂಜಿನಿಯರಿಂಗ್ ಸೇವಾ ಸಂಘ ಹಾಗೂ ಸರ್ಕಾರದ ಕಾಮಗಾರಿಗಳ ಗುಣ ನಿಯಂತ್ರಣ ಕಾರ್ಯಪಡೆ ಆಶ್ರಯದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

`ದೇಶದ ಅಭಿವೃದ್ಧಿಯಲ್ಲಿ ಎಂಜಿನಿಯರ್‌ಗಳ ಕಾಣಿಕೆಯು ಬಹು ದೊಡ್ಡದು. ಸರ್. ಎಂ. ವಿಶ್ವೇಶ್ವರಯ್ಯನವರಂತೆ ಸಮಯ ಪಾಲನೆ, ಪ್ರಾಮಾಣಿಕತೆ ಮತ್ತು ಶಿಸ್ತಿನಿಂದ ಕೆಲಸ ಮಾಡುವುದನ್ನು ಎಂಜಿನಿಯರ್‌ಗಳು ರೂಢಿಸಿಕೊಳ್ಳ ಬೇಕು. ನಾವು ಸರಿಯಾಗಿದ್ದರೆ ಯಾರೂ ನಮ್ಮತ್ತ ಬೆರಳು ತೋರಿಸಲು ಸಾಧ್ಯವಿಲ್ಲ~ ಎಂದು ಸಲಹೆ ನೀಡಿದರು.

`ನ್ಯೂಯಾರ್ಕ್‌ನಲ್ಲಿ ಈಚೆಗೆ ನಡೆದ ತಂತ್ರಜ್ಞರ ಸಭೆಯ ವಿವರಗಳು ವಿಸ್ಮಯ ಹುಟ್ಟಿಸುವಂತಿವೆ. ಜಗತ್ತಿನಲ್ಲಿ 1900 ವರ್ಷಗಳಲ್ಲಿ ನಡೆದಷ್ಟೇ ಅವಿಷ್ಕಾರಗಳು  ಮುಂದಿನ 90 ವರ್ಷಗಳಲ್ಲಿ ನಡೆದಿವೆ. 1990ರ ನಂತರದ 19 ವರ್ಷಗಳಲ್ಲಿ 90 ವರ್ಷಗಳಲ್ಲಿ ನಡೆದಷ್ಟು ಪ್ರಗತಿ ಆಗಿದೆ. 2050ರ ಹೊತ್ತಿಗೆ ಒಂದೇ ದಿನದಲ್ಲಿ ಅದಷ್ಟು ಅವಿಷ್ಕಾರಗಳು ನಡೆಯುವ ಸಂಭವವಿದೆ. ಅಭಿವೃದ್ಧಿಯ ವೇಗ ಇದು. ಇದರ ಗೌರವದ ಸಿಂಹಪಾಲು ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಸಲ್ಲುತ್ತದೆ~ ಎಂದು ಹೇಳಿದರು.

`ವಿಶ್ವೇಶ್ವರಯ್ಯನವರು ಪ್ರಾಮಾ ಣಿಕರಾಗಿದ್ದರು. ಮೈಸೂರು ಸಂಸ್ಥಾನದ ದಿವಾನರಾಗಿ ಅಧಿಕಾರ ಸ್ವೀಕರಿಸುವ ಮುನ್ನ  ತಮ್ಮ  ಇಡೀ ಕುಟುಂಬದೊಂದಿಗೆ ಚರ್ಚೆ ನಡೆಸಿದರು. ತಮ್ಮ ಕರ್ತವ್ಯದಲ್ಲಿ ಯಾರೂ ಮಧ್ಯಸ್ಥಿಕೆ ವಹಿಸು ವುದಾಗಲಿ ಅಥವಾ ತಮ್ಮ ಸ್ಥಾನದ ಲಾಭವನ್ನು ಪಡೆಯುವುದಾಗಲಿ ಮಾಡಬಾರದು ಎಂದು ತಾಯಿಯನ್ನೂ ಒಳಗೊಂಡಂತೆ ಕುಟುಂಬದ ಎಲ್ಲ ಸದಸ್ಯರಿಗೂ ಕಟ್ಟುನಿಟ್ಟಾಗಿ ಸೂಚಿಸಿದ್ದರು.

ಅದರಂತೆಯೇ ನಡೆದುಕೊಂಡರು. ಇಂದು ಎಲ್ಲ ಅಧಿಕಾರಸ್ಥರಿಗೂ ಇದು ಅನುಕರಣೀಯ~ ಎಂದರು.
ಕಾರ್ಯಕ್ರಮ ಮುಖ್ಯ ಅತಿಥಿ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ, `ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಫಲವನ್ನೂ ಇಂದಿಗೂ ರಾಜ್ಯದ ಜನತೆ ಅನುಭವಿಸುತ್ತಿದ್ದಾರೆ. ತಮ್ಮ ವೈಯಕ್ತಿಕ ವಿಷಯಗಳನ್ನು ಎಲ್ಲಿಯೂ ಬರೆದಿಲ್ಲ ಮತ್ತು ಚರ್ಚಿಸಿಲ್ಲ. ಆದರೆ ತಮ್ಮ ಕೆಲಸಗಳ ಮೂಲಕ ಅವರು ನಮ್ಮಂದಿಗೆ ಸದಾ ಇದ್ದಾರೆ~ ಎಂದು ಹೇಳಿದರು.

`ನಮ್ಮ ಜನರ ಸೋಮಾರಿತನವೇ ದೇಶದ ಅಭಿವೃದ್ಧಿ ಕುಂಠಿತವಾಗಲು ಕಾರಣ. ಸಮಯಪ್ರಜ್ಞೆ, ಕಾರ್ಯ ತತ್ಪರತೆ ಮತ್ತು ಪ್ರಾಮಾಣಿಕತೆ ಗಳಿಂದಾಗಿ ವಿಶ್ವೇಶ್ವರಯ್ಯನವರು ತಂತ್ರಜ್ಞಾನ, ಆಡಳಿತ, ನೀರಾವರಿ, ಕೃಷಿ. ಶಿಕ್ಷಣ ಕ್ಷೇತ್ರಗಳಿಗೆ ಕೊಟ್ಟ ಕಾಣಿಕೆ ಅವಿಸ್ಮರಣೀಯವಾದದ್ದು. ಕನ್ನಂಬಾಡಿ ಅಣೆಕಟ್ಟೆಯನ್ನು ನಿರ್ಮಿಸಿ ಲಕ್ಷಾಂತರ ಜನರಿಗೆ ಅನ್ನ ಕೊಟ್ಟರು~ ಎಂದು ಹೇಳಿದರು.

ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, `ತತ್ವಗಳು, ಅಪಾರವಾದ ಜ್ಞಾನ ಮತ್ತು ಜನಪರ ಕಾಳಜಿ ಮೇಳೈಸಿದ್ದ  ವಿಶ್ವೇಶ್ವರಯ್ಯ ನವರಿಗೆ ಅಮರ ಸಾಧನೆಗಳನ್ನು ಮಾಡಲು ಸಾಧ್ಯವಾಯಿತು. ಅವರಿಗೆ ಅಭಿವೃದ್ಧಿಯ ಕನಸುಗಳಿದ್ದವು. ಜೊತೆಗೆ ಅವುಗಳನ್ನು ಸಾಕಾರಗೊಳಿಸುವ  ಧೃಡಮನಸ್ಸು ಮತ್ತು ಜ್ಞಾನಗಳೆರಡೂ ಅವರಿಗಿದ್ದವು~ ಎಂದರು.

`ಅವರು ನಿರ್ಮಿಸಿದ ಕಾರ್ಖಾನೆಗಳು, ಅಣೆಕಟ್ಟುಗಳು ಮತ್ತಿತರ ಸಾಧನೆಗಳನ್ನು ನೋಡಲು ಬಹಳ ಚೆಂದವಾಗಿ ಕಾಣುತ್ತವೆ. ಆದರೆ ಅವುಗಳನ್ನು  ಸಾಕಾರಗೊಳಿಸುವ ಹಂತದಲ್ಲಿ ಅವರೂ ಸಾಕಷ್ಟು ಟೀಕೆ, ಟಿಪ್ಟಣಿ ಮತ್ತಿತರ ತೊಂದರೆಗಳನ್ನು ಎದುರಿಸಿದ್ದರು. ಉತ್ತಮ ಕಾರ್ಯ ಮಾಡುವ ಇಚ್ಛಾಶಕ್ತಿ ಇದ್ದರೆ ಯಾರಿಗೂ ತಲೆಬಾಗುವ ಸಂಭವ ಬರುವುದಿಲ್ಲ. ಕನ್ನಂಬಾಡಿ ನಿರ್ಮಿಸದಿದ್ದರೆ ಮೈಸೂರು, ಬೆಂಗಳೂರಿನ ಪರಿಸ್ಥಿತಿ ಇವತ್ತು ಏನಾಗಿರುತ್ತಿತ್ತು~ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕರ್ನಾಟಕ ನೀರಾವರಿ ನಿಗಮದ ಎನ್. ಲಕ್ಷ್ಮಣ ರಾವ್ ಪೇಶ್ವೆ, ಲೋಕೊಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಾರ್ಯದರ್ಶಿ ಕೆ.ಬಿ. ದೇವರಾಜು, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಬಿ.ಜಿ. ಗುರುಪಾದಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಸಣ್ಣ ನೀರಾವರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಎಂ. ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್, ಮಾಜಿ ಸಚಿವ ಸಿ.ಎಚ್.ವಿಜಯಶಂಕರ, ಮುಡಾ ಅಧ್ಯಕ್ಷ ಎಲ್.ನಾಗೇಂದ್ರ, ಸರ್.ಎಂ.ವಿ. ವಂಶಸ್ಥ ಮೋಕ್ಷಗುಂಡಂ ಶೇಷಾದ್ರಿ,  ಕರ್ನಾಟಕ ಎಂಜಿನಿಯರ್ಸ್‌ ಸೇವಾ ಸಂಘದ  ಗೌರವ ಅಧ್ಯಕ್ಷ ಶಿವಾನಂದ ಹೂಗಾರ, ಎ.ಎಂ.ಶಿವಶಂಕರ, ಐ.ರವೀಂದ್ರನಾಥ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.