ADVERTISEMENT

ಕೊಬ್ಬರಿ ಎಣ್ಣೆಯಲ್ಲಿ ಪತ್ತೆಯಾಗುತ್ತೆ ಆರೋಪಿ ಕಾಲಚ್ಚು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 4:42 IST
Last Updated 22 ಡಿಸೆಂಬರ್ 2017, 4:42 IST
ಮೈಸೂರಿನ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು ಆವರಣದಲ್ಲಿ ಗುರುವಾರದಿಂದ ಆರಂಭವಾದ ವಿಧಿವಿಜ್ಞಾನ ವಸ್ತುಪ್ರದರ್ಶನದಲ್ಲಿ ಅಸ್ಥಿಪಂಜರವನ್ನು ಕುತೂಹಲದಿಂದ ವೀಕ್ಷಿಸಿದ ವಿದ್ಯಾರ್ಥಿಗಳು
ಮೈಸೂರಿನ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜು ಆವರಣದಲ್ಲಿ ಗುರುವಾರದಿಂದ ಆರಂಭವಾದ ವಿಧಿವಿಜ್ಞಾನ ವಸ್ತುಪ್ರದರ್ಶನದಲ್ಲಿ ಅಸ್ಥಿಪಂಜರವನ್ನು ಕುತೂಹಲದಿಂದ ವೀಕ್ಷಿಸಿದ ವಿದ್ಯಾರ್ಥಿಗಳು   

ಮೈಸೂರು: ನೀರಿನಲ್ಲಿ ಹೆಜ್ಜೆಗುರುತು ಸಿಗುವುದಿಲ್ಲ ಎಂಬ ಪ್ರತೀತಿ ಇದೆ. ಆದರೆ, ದ್ರವರೂಪದ ಕೊಬ್ಬರಿ ಎಣ್ಣೆಯನ್ನು ಬಳಸಿಕೊಂಡು ಆರೋಪಿಯ ಕಾಲಚ್ಚು ಪಡೆಯುವ ಪೊಲೀಸರ ಕೌಶಲ ಎಂಥವರನ್ನೂ ಬೆರಗುಗೊಳಿಸುತ್ತದೆ.

ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಆವರಣದಲ್ಲಿ ಗುರುವಾರದಿಂದ ಆರಂಭವಾದ ವಿಧಿವಿಜ್ಞಾನ ವಸ್ತುಪ್ರದರ್ಶನ ಈ ನೈಪುಣ್ಯ ತಿಳಿಸುತ್ತಿದೆ. ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದನ್ನು ಕೌತುಕದಿಂದ ವೀಕ್ಷಿಸುತ್ತಿದ್ದಾರೆ.

ಕೊಲೆ, ಕಳವು, ದರೋಡೆ, ಅತ್ಯಾಚಾರ ಸೇರಿ ವಿವಿಧ ಅಪರಾಧಗಳ ತನಿಖೆ ನಡೆಸುವ ಪೊಲೀಸರು, ಕೃತ್ಯ ನಡೆದ ಸ್ಥಳದಲ್ಲಿ ಆರೋಪಿ ಬಿಟ್ಟು ಹೋಗಿರುವ ಸಾಕ್ಷ್ಯಗಳನ್ನು ಸಂಗ್ರಹಿಸಲು ಆದ್ಯತೆ ನೀಡುತ್ತಾರೆ. ಆಯುಧ, ಬೆರಳಚ್ಚು, ಕೂದಲು ಸಂಗ್ರಹ ಹಾಗೂ ವಸ್ತುಗಳಿಗೆ ತಡಕಾಡುತ್ತಾರೆ. ಹಾಗೆಯೇ ಕಾಲಚ್ಚು ಪಡೆಯುವ ವಿಧಾನವನ್ನೂ ಬಳಸುತ್ತಾರೆ.

ADVERTISEMENT

ಕೃತ್ಯ ನಡೆದ ಸ್ಥಳದಲ್ಲಿ ಆರೋಪಿ ನಡೆದಾಡಿರುವ ಸ್ಥಳದ ಅಂದಾಜು ಮಾಡಿಕೊಳ್ಳುತ್ತಾರೆ. ಈ ಸ್ಥಳದಲ್ಲಿ ಕೊಬ್ಬರಿ ಎಣ್ಣೆ ಹಾಕಿ ಪರೀಕ್ಷಿಸುತ್ತಾರೆ. ಬಳಿಕ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಹಾಗೂ ಉಪ್ಪು ಹಾಕುತ್ತಾರೆ. ಅರ್ಧ ಗಂಟೆ ಬಿಟ್ಟ ಬಳಿಕ ಒಣಗಿದ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಲ್ಲಿ ಆರೋಪಿಗಳ ಕಾಲಚ್ಚು ಮೂಡಿರುತ್ತದೆ.

‘ನೆಲದ ಮೇಲೆ ಕಾಲಚ್ಚನ್ನು ಸುಲಭವಾಗಿ ಪಡೆಯಬಹುದು. ಆದರೆ, ಟೈಲ್ಸ್‌ ಅಳವಡಿಸಿದ ಮನೆಗಳಲ್ಲಿ ಈ ವಿಧಾನ ಪ್ರಯೋಜನಕ್ಕೆ ಬಾರದು. ಇದಕ್ಕೆ ವಿಶೇಷವಾಗಿ ಅಭಿವೃದ್ಧಿಪಡಿಸಿದ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಮಳೆ ಬೀಳುವುದಕ್ಕೂ ಮೊದಲೇ ಕಾಲಚ್ಚು ಪಡೆಯುವ ತುರ್ತು ಇರುವುದಿರಂದ ಪೊಲೀಸ್‌ ಅಧಿಕಾರಿಗಳಿಗೂ ತರಬೇತಿ ನೀಡಲಾಗುತ್ತಿದೆ. ಕೃತ್ಯ ನಡೆದ ಸ್ಥಳದಲ್ಲಿ ಓಡಾಡಿದ ವಾಹನದ ಟೈರಿನ ಅಚ್ಚನ್ನೂ ಸುಲಭವಾಗಿ ಪತ್ತೆ ಹಚ್ಚಬಹುದು’ ಎನ್ನುತ್ತಾರೆ ಕರ್ನಾಟಕ ಪೊಲೀಸ್ ಅಕಾಡೆಮಿ (ಕೆಪಿಎ) ಸಿಬ್ಬಂದಿ.

ಬಿಳಿ ವಸ್ತುವಿನ ಮೇಲೆ ಗ್ರಾಫೈಟ್‌ ಪುಡಿ ಸಿಂಪಡಿಸಿ ಮತ್ತು ಬಣ್ಣದ ವಸ್ತುವಿನ ಮೇಲೆ ಆ್ಯಂತ್ರಾಸಿನ್‌ ಪುಡಿ ಉದುರಿಸಿ ಬೆರಳಚ್ಚು ಸಂಗ್ರಹಿಸುವ ಪರಿಯನ್ನು ಮಹಾರಾಜ ಕಾಲೇಜು ವಿಧಿವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ತೋರಿಸಿದರು. ಲಂಚ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ದಾಳಿ ನಡೆಸಿ ದಾಖಲೆ ಸಮೇತ ಹಿಡಿವ ರೀತಿಯನ್ನು ತಿಳಿಸಿಕೊಟ್ಟರು.

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯ ವೀರ್ಯವನ್ನು ಪರೀಕ್ಷೆಗೆ ಒಳಪಡಿಸುವ ಪರಿ, ರಕ್ತದ ಮಾದರಿಯ ಜಾಡು ಹಿಡಿದು ತನಿಖೆ ನಡೆಸುವ ರೀತಿಯೂ ಗಮನ ಸೆಳೆಯುತ್ತವೆ. ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲದಯದ ಸಿಬ್ಬಂದಿ ಈ ಮಾದರಿಯನ್ನು ಪ್ರದರ್ಶಿಸಿದರು.

ಮದ್ಯದಂಗಡಿ, ಬಾರಿನಲ್ಲಿ ನಡೆಯುವ ಕೊಲೆ, ಆತ್ಮಹತ್ಯೆ ಶರಣಾದ ರೀತಿ, ಖೋಟಾನೋಟು ಪತ್ತೆ ಹಚ್ಚುವ ವಿಧಾನ, ವಿಷ ಸೇವಿಸಿದ ವ್ಯಕ್ತಿಯನ್ನು ಬದುಕಿಸಲು ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನು ತಿಳಿಸಲಾಗುತ್ತಿದೆ. ಆಹಾರ ಪದಾರ್ಥಗಳ ಕಲಬೆರಕೆಯ ಕುರಿತು ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ (ಸಿಎಫ್‌ಟಿಆರ್‌ಐ) ಸಂಸ್ಥೆ ಜಾಗೃತಿ ಮೂಡಿಸುತ್ತಿದೆ. ಎಕೆ 47, 303 ರೈಫಲ್‌, 9 ಎಂಎಂ ಪಿಸ್ತೂಲ್‌ ಸೇರಿ ಹಲವು ಆಯುಧಗಳನ್ನು ವೀಕ್ಷಿಸಲು ಅವಕಾಶವಿದೆ. ಶುಕ್ರವಾರ ಸಂಜೆ 5ರ ವರೆಗೆ ಪ್ರದರ್ಶನ ತೆರೆದಿರುತ್ತದೆ.

ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಪ್ರಾಂಶುಪಾಲ ಡಾ.ಎಚ್‌.ಬಸವನಗೌಡಪ್ಪ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿದರು. ಜೆಎಸ್‌ಎಸ್‌ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಿ.ಮಂಜುನಾಥ, ಕೆಪಿಎ ಸಹಾಯಕ ನಿರ್ದೇಶಕ ಎಸ್‌.ರಾಜು ಇದ್ದರು.

90 ಸೆಕೆಂಡಿನಲ್ಲಿ ಹೋಗುತ್ತೆ ಜೀವ

ನೀರು ಕಾಯಿಸಲು ಬಳಸುವ ಗ್ಯಾಸ್‌ ಗೀಜರುಗಳು ಮನುಷ್ಯನನ್ನು ಕೊಲ್ಲುತ್ತಿರುವ ರೀತಿಯನ್ನು ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ತೋರಿಸಿದರು. ಎಂಜಿನಿಯರಿಂಗ್‌ ವಿದ್ಯಾರ್ಥಿನಿಯೊಬ್ಬರು ಮೇಟಗಳ್ಳಿ ಠಾಣೆ ವ್ಯಾಪ್ತಿಯಲ್ಲಿ ಈಚೆಗೆ ಇದಕ್ಕೆ ಬಲಿಯಾದ ರೀತಿಯನ್ನು ವಿವರಿಸಿದರು.

ಗಾಳಿ ಲಭ್ಯವಾಗದ ಸಂದರ್ಭದಲ್ಲಿ ಗ್ಯಾಸ್‌ ಗೀಜರಿನಿಂದ ಹೊರಹೊಮ್ಮುವ ಕಾರ್ಬನ್‌ ಮೊನಾಕ್ಸೈಡ್‌ ಜೀವಕ್ಕೆ ಎರವಾಗುತ್ತದೆ. ಬಣ್ಣ, ವಾಸನೆ ಇಲ್ಲದ ಈ ಮೊನಾಕ್ಸೈಡ್‌ ರಕ್ತದ ಹಿಮೊಗ್ಲೋಬಿನ್‌ ಸೇರುತ್ತದೆ. ಸೇವಿಸಿದ 90 ಸೆಕೆಂಡಿನಲ್ಲಿ ಜೀವ ಹೋಗುತ್ತದೆ.

‘ಗಾಳಿಯಾಡುವ ಸ್ಥಳದಲ್ಲಿ ಗೀಜರ್‌ ಅಳವಡಿಸುವುದು ಸೂಕ್ತ. ಬಾತ್ ರೂಮಿನಿಂದ ಹೊರಗೆ ಇದ್ದರೆ ಅನುಕೂಲ. ಮೊದಲೇ ನೀರು ಕಾಯಿಸಿಕೊಂಡು ಗೀಜರ್‌ ಬಂದ್‌ ಮಾಡಿ ಸ್ನಾನ ಮಾಡುವುದನ್ನು ರೂಢಿಸಿಕೊಳ್ಳಬೇಕು’ ಎಂದು ಸಿಬ್ಬಂದಿ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.