ADVERTISEMENT

ಕೋಟಿ ವೃಕ್ಷ ಆಂದೋಲನಕ್ಕೆ ಕೈಜೋಡಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 6:44 IST
Last Updated 6 ಜೂನ್ 2017, 6:44 IST
ಹುಣಸೂರು ನಗರಸಭೆ ಮತ್ತು ಭಗೀರಥ ಸಂಸ್ಥೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ನಿವಾಸಿಗರಿಗೆ  ಕಸದ ಬುಟ್ಟಿಯನ್ನು ನಗರಸಭೆ ಅಧ್ಯಕ್ಷ ಲಕ್ಷ್ಮಣ್‌ ವಿತರಿಸಿದರು
ಹುಣಸೂರು ನಗರಸಭೆ ಮತ್ತು ಭಗೀರಥ ಸಂಸ್ಥೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ನಿವಾಸಿಗರಿಗೆ ಕಸದ ಬುಟ್ಟಿಯನ್ನು ನಗರಸಭೆ ಅಧ್ಯಕ್ಷ ಲಕ್ಷ್ಮಣ್‌ ವಿತರಿಸಿದರು   

ಎಚ್.ಡಿ.ಕೋಟೆ: ಪ್ರತಿಯೊಬ್ಬ ವಿದ್ಯಾರ್ಥಿಯೂ ಪರಿಸರ ಕಾಳಜಿಯಿಂದ ಗಿಡಗಳನ್ನು ಬೆಳೆಸಿ ಪೋಷಿಸಿದರೆ ಅತ್ಯುತ್ತಮ ಪರಿಸರ ನಿರ್ಮಾಣವಾಗಲಿದೆ ಎಂದು ಸಾಮಾಜಿಕ ಅರಣ್ಯವಲಯದ ವಲಯಾಧಿಕಾರಿ ಎಸ್‌.ಡಿ.ಮಧು ಹೇಳಿದರು.

ತಾಲ್ಲೂಕಿನ ಹ್ಯಾಂಡ್‌ಪೋಸ್ಟ್‌ ಸರ್ಕಾರಿ ಪ್ರೌಢಶಾಲೆಯಲ್ಲಿ ಅರಣ್ಯ ಇಲಾಖೆ   ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಶಾಲೆಗಳಿಗೂ ಅರಣ್ಯ ಇಲಾಖೆಯಿಂದ ಸಸಿಗಳನ್ನು ನೀಡಲಾಗುತ್ತಿದ್ದು,  ಶಾಲೆಯನ್ನು ಮಾದರಿ ವನಶಾಲೆಯನ್ನಾಗಿ ಮಾಡಲು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿಸಬೇಕು. ಪ್ರತಿ ಮಕ್ಕಳು ಕನಿಷ್ಠ ಒಂದು ಮರವನ್ನಾದರು ಬೆಳೆಸಿ ಕೋಟಿ ವೃಕ್ಷ ಆಂದೋಲನಕ್ಕೆ ಕೈಜೋಡಿಸಬೇಕು ಎಂದರು.

ADVERTISEMENT

ಪರಿಸರ ಸಂರಕ್ಷಣೆ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಜನರಲ್ಲಿ ಪರಿಸರ ಸಂರಕ್ಷಣೆ ಕುರಿತು  ಊರಿನ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.

ಮುಖ್ಯಶಿಕ್ಷಕಿ ಫಿಲೋಮಿನಾ, ಶಿಕ್ಷಕವೃಂದ,  ಅರಣ್ಯ ಇಲಾಖೆಯ ಡಿಆರ್ಎಪ್ಓ ಮಂಜುನಾಥ್ ಸಿಬ್ಬಂದಿ ರಾಜೇಶ್ ಇದ್ದರು.

ಪರಿಸರ ರಕ್ಷಣೆ ಎಲ್ಲರ ಕರ್ತವ್ಯ
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಪರಿಸರ ರಕ್ಷಿಸದಿದ್ದರೆ ಸಾಮಾಜಿಕ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಾಲ್ಲೂಕು ಪ್ರದಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಸರ್ಪರಾಜ್ ಹುಸೇನ್ ಕಿತ್ತೂರು ಅಭಿಪ್ರಾಯಪಟ್ಟರು.

ತಾಲ್ಲೂಕು ನ್ಯಾಯಾಲಯದ ಆವರಣದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸೋಮವಾರ ಕಾನೂನು ಸೇವಾ ಸಮಿತಿ, ಸರ್ಕಾರಿ ಅಭಿಯೋಜಕರು ಹಾಗೂ ವಕೀಲರ ಸಂಘ ಆಯೋಜಿಸಿದ್ದ ಕಾನೂನು ಅರಿವು, ನೆರವು ಕಾರ್ಯ ಕ್ರಮವನ್ನು ಗಿಡಗಳಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜಾಗತಿಕ ಮಟ್ಟದಲ್ಲಿ ಏರುತ್ತಿರುವ ತಾಪಮಾನ, ಅದಕ್ಕೆ ಕಾರಣವಾದ ಅಂಶಗಳು, ಅದರಿಂದಾಗುವ ದುಷ್ಪರಿಣಾಮಗಳನ್ನು ಅರಿತು ಪ್ರತಿಯೊಬ್ಬರೂ ಸಸ್ಯ ಸಂರಕ್ಷಣೆ ಮಾಡಿ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಬೇಕಿದೆ ಈ ನಿಟ್ಟಿನಲ್ಲಿ ನಾವೆಲ್ಲರು ಪರಿಸರದ ಮೇಲೆ ಉಂಟಾಗುವ ಮಾಲಿನ್ಯಗಳನ್ನು ತಡೆಗಟ್ಟೋಣ ಎಂದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಎಸ್.ಸಂಗಮೇಶ್ ಮಾತನಾಡಿದರು. ತಾಲ್ಲೂಕು ವಕೀಲರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿ, ಸರ್ಕಾರಿ ಅಭಿಯೋಜಕ ಎ.ಮಧು, ವಕೀಲರಾದ ನಾರಾಯಣ್ ಗೌಡ, ಸದಾಶಿವಪ್ಪ, ದಿನೇಶ್, ಬಾಲಚಂದ್ರ  ಇದ್ದರು.

ಪ್ರತ್ಯೇಕ ಇಲಾಖೆ  ಸ್ಥಾಪಿಸಿ
ಹುಣಸೂರು: ರಾಜ್ಯದ ನದಿಗಳು ಕಲುಷಿತಗೊಳ್ಳುತ್ತಿರು ವುದನ್ನು ತಡೆಯಲು ಸರ್ಕಾರ ಪ್ರತ್ಯೇಕ ಇಲಾಖೆ ಸ್ಥಾಪಿಸಬೇಕು ಎಂದು ಸೇವ್‌ ಅವರ್ ಅರ್ಥ್ ಸಂಘಟನೆಯ ಅಧ್ಯಕ್ಷ ಸಂಜಯ್ ಹೇಳಿದರು.

ಹುಣಸೂರು ನಗರದಲ್ಲಿ ಸೇವ್‌ ಅವರ್ ಅರ್ಥ ಸಂಸ್ಥೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹುಣಸೂರು ತಾಲ್ಲೂಕಿನ ಜೀವ ನದಿ ಲಕ್ಷ್ಮಣತೀರ್ಥ ಸೇರಿದಂತೆ  ಜಿಲ್ಲೆಯ ಕಪಿಲಾ, ಕಾವೇರಿ ನದಿಗಳು ಕಲುಷಿತಗೊಳ್ಳುತ್ತಿವೆ. ಅವುಗಳ ಸಂರಕ್ಷಣೆಗೆ  ಪ್ರತಿಯೊಬ್ಬ ನಾಗರಿಕರೂ ಕಾಳಜಿ ವಹಿಸಬೇಕಿದ್ದು, ನದಿ ಉಳಿವಿಗಾಗಿ ಹೋರಾಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಬೇಕಾಗಿದೆ ಎಂದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನದಿ ಮಾಲಿನ್ಯ ಮಾಪನ ಮಾಡುವ ಅಧಿಕಾರವಿದ್ದರೂ ನದಿ ಗಳನ್ನು ಮಾಲಿನ್ಯ ಮುಕ್ತಗೊಳಿಸುವಲ್ಲಿ ಈ ಇಲಾಖೆ ಕೈ ಚೆಲ್ಲಿದೆ.  ಲಕ್ಷ್ಮಣತೀರ್ಥ ನದಿ ಸಂಪೂರ್ಣ ಮಲಿನಗೊಂಡಿದ್ದು, ಈ ಬಗ್ಗೆ ಸಾರ್ವಜನಿಕರು  ಹೂಡಿದ ದಾವೆಗೆ ಇಲ್ಲಿನ ನ್ಯಾಯಾಲಯ ನಗರಸಭೆ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರೂ ನಗರಸಭೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದರು.

ವಿಶ್ವ ಪರಿಸರ ದಿನಾಚರಣೆಗಳು ಸಸಿ ನೆಡುವುದಕ್ಕೆ ಮಾತ್ರ ಸೀಮಿತಗೊಂಡಲ್ಲಿ ಭವಿಷ್ಯದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.

ನಗರಸಭಾ ಸದಸ್ಯ ವೆಂಕಟೇಶ್‌ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಮತ್ತು ಸೇವ್‌ ಅವರ್‌ ಅರ್ಥ ಸಂಸ್ಥೆಯ ಸದಸ್ಯರು ಭಾಗವಹಿಸಿದ್ದರು.

ತ್ಯಾಜ್ಯ ವಿಂಗಡಣೆ; ಸಂಸ್ಕರಣೆ ಸುಲಭ
ನಗರದಲ್ಲಿ ನಿತ್ಯವೂ ಉತ್ಪತ್ತಿಯಾಗುವ ಗೃಹ ತ್ಯಾಜ್ಯವನ್ನು ಹಸಿ ಮತ್ತು ಒಣ ತ್ಯಾಜ್ಯವನ್ನಾಗಿ ಪ್ರತ್ಯೇಕಿಸುವುದರಿಂದ ತ್ಯಾಜ್ಯ ನಿರ್ವಹಣೆ ಸುಲಭವಾಗಲಿದೆ ಎಂದು ನಗರಸಭಾ ಅಧ್ಯಕ್ಷ ಕೆ. ಲಕ್ಷ್ಮಣ್ ಹೇಳಿದರು.

ನಗರದ ಕೆ.ಎಚ್‌.ಬಿ. ಕಾಲೊನಿಯಲ್ಲಿ ನಗರಸಭೆ ಮತ್ತು ಭಗೀರಥ ಸಂಸ್ಥೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಬಡಾವಣೆಯ 460 ಮನೆಗಳಿಗೆ ತ್ಯಾಜ್ಯ ಸಂಗ್ರಹದ ಬುಟ್ಟಿಗಳನ್ನು ವಿತರಿಸಿ ಮಾತನಾಡಿದರು.

ಭಗೀರಥ ಸಂಸ್ಥೆಯ ಅಧ್ಯಕ್ಷ ಪ್ರಕಾಶ್‌ ಕುಲಕರ್ಣಿ ಮಾತನಾಡಿ, ನಿಸರ್ಗದೊಂದಿಗೆ ಮನುಷ್ಯರ ಸಂಬಂಧ ಅವಿನಾಭಾವದಿಂದ ಕೂಡಿದೆ. ನೆಲ ಮತ್ತು ಜಲ ಎರಡನ್ನೂ ನಾವು ಸಂರಕ್ಷಿಸಿದಲ್ಲಿ ಮಾತ್ರ ಭವಿಷ್ಯದಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಪರಿಸರ ನೀಡಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಸತೀಶ್‌ಕುಮಾರ್‌, ಶರವಣ, ವೆಂಕಟೇಶ್‌, ಸುನೀತಾ ಜಯರಾಮೇಗೌಡ, ಕೃಷ್ಣರಾಜ ಗುಪ್ತ, ಭಗೀರಥ ಸಂಸ್ಥೆಯ ನಂಜುಂಡಸ್ವಾಮಿ, ಜಗದೀಶ್‌ ಮತ್ತು ನಗರಸಭಾ ಪೌರಾಯುಕ್ತ ಶಿವಪ್ಪನಾಯಕ ಉಪಸ್ಥಿತರಿದ್ದರು.

ತಂಬಾಕು ಬೇಸಾಯ; ಪರಿಸರ ನಾಶ
ಹುಣಸೂರು: ತಂಬಾಕು ಬೇಸಾಯ ದಿಂದಾಗಿ ಹುಣಸೂರು ಉಪವಿಭಾಗ ದಲ್ಲಿ ಪರಿಸರ ನಾಶ ಹೆಚ್ಚಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಎಸ್‌.ಬಿ. ಮೂರ್ತಿ ಅಭಿಪ್ರಾಯಪಟ್ಟರು.

ನಗರದ ರಂಗನಾಥ ಬಡಾವಣೆ ಸರ್ಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾನೂನು ಸೇವಾ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಂಬಾಕು ಈ ಭಾಗದ ವಾಣಿಜ್ಯ ಬೆಳೆಯಾಗಿದ್ದು, ಸರ್ಕಾರ ತಂಬಾಕಿಗೆ ಸೂಕ್ತ ಪರ್ಯಾಯ ಬೆಳೆ ಶಿಫಾರಸು ಮಾಡುವಲ್ಲಿ ವಿಫಲವಾದ ಕಾರಣ ರೈತರು ಅನಿವಾರ್ಯವಾಗಿ ತಂಬಾಕು ಬೇಸಾಯ ಅವಲಂಬಿಸಿದ್ದಾರೆ. ತಂಬಾಕು ಬೇಸಾಯದಿಂದ ಪ್ರತಿ ವರ್ಷ 50ರಿಂದ 60 ಲಕ್ಷ ಟನ್‌ ಉರುವಲು ಬಳಕೆಯಾಗುವ ಮೂಲಕ ಮರಗಳ ಹನನ ಏರುಗತಿಯಲ್ಲಿದೆ.

ರೈತರು ತಂಬಾಕು ಬೆಳೆಯುವುದರ ಜೊತೆಗೆ ಹೊಲದಲ್ಲಿ ಮರ ಬೆಳೆಸುವುದರಿಂದ ಪರಿಸರದ ಮೇಲಾಗುತ್ತಿರುವ ಒತ್ತಡವನ್ನು ನಿಯಂತ್ರಿಸಲು ಸಹಕಾರಿ ಆಗಲಿದೆ ಎಂದರು.

ನ್ಯಾಯಾಧೀಶ ಗಿರೀಶ್‌ ಚೆಟ್ನಿ , ಅರಣ್ಯ ಇಲಾಖೆ ಸಹಾಯಕ ಸಂರಕ್ಷಣಾಧಿಕಾರಿ ಸೋಮಪ್ಪ, ಆರ್‌ಎಫ್‌ಒ ಶಾಂತಕುಮಾರ್‌, ವಕೀಲ ಲಕ್ಷ್ಮಣ್‌, ಸಿ.ದಿನೇಶ್‌, ಮುರುಳಿಧರ್‌ ಮತ್ತು ಮಹೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.