ADVERTISEMENT

ಗಿರಿಜನರಿಗೆ ಕೃಷಿಭೂಮಿ ಹಂಚಿಕೆ: ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 9:15 IST
Last Updated 7 ಸೆಪ್ಟೆಂಬರ್ 2011, 9:15 IST

ಹುಣಸೂರು: ನಾಗಾಪುರ ಪುನರ್ವಸತಿ ಕೇಂದ್ರದ 280 ಗಿರಿಜನ ಕುಟುಂಬಗಳಿಗೆ ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿ ನೀಡುವ ಮಹತ್ತರ ಕಾರ್ಯಕ್ಕೆ ಮಂಗಳವಾರ ಶಾಸಕ ಎಚ್.ಪಿ.ಮಂಜುನಾಥ್ ಮತ್ತು ಅರಣ್ಯ ಇಲಾಖೆ  ಅಧಿಕಾರಿಗಳು ಚಾಲನೆ ನೀಡಿದರು.

ಬಹುದಿನದ ಬೇಡಿಕೆಗೆಯಾಗಿದ್ದ `ಜೀವನೋಪಾಯಕ್ಕೆ ಕೃಷಿ ಭೂಮಿ~ ಗಿರಿಜನರ ಚಳವಳಿ ಪ್ರತಿ ವರ್ಷ ದಸರಾ ಗಜಪಯಣದಲ್ಲಿ ಆರಂಭಗೊಂಡು  ಕಾರ್ಯಕ್ರಮದೊಂದಿಗೆ ಅಂತ್ಯವೂ ಆಗುತ್ತಿತ್ತು. ಇತ್ತೀಚೆಗೆ ಭಾರತೀಯ ಗಿರಿಜನ ಶಿಕ್ಷಣ ಸಂಸ್ಥೆ ನಡೆಸಿದ ಹಲವು ಹೋರಾಟದ ಫಲದಿಂದ ಗಿರಿಜನರ  ಪ್ರತಿ ಕುಟುಂಬಕ್ಕೆ ತಲಾ 5 ಎಕರೆ ಕೃಷಿ ಭೂಮಿ ನೀಡಲು ಸರ್ಕಾರ ಮುಂದಾಗಿದೆ.

ನಾಗಾಪುರ ಗಿರಿಜನ ಹಾಡಿಯ ಆಶ್ರಮ ಶಾಲೆಯಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಪುನರ್ವಸತಿ ಕೇಂದ್ರದ 6 ಘಟಕದ ಮುಖಂಡರು ಮತ್ತು ಭಾರತೀಯ ಗಿರಿಜನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಂ.ಬಿ.ಪ್ರಭು  ಸಮ್ಮುಖದಲ್ಲಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯನ್ನು ಕಂದಾಯ ಇಲಾಖೆಗೆ ಸರ್ವೆ ನಡೆಸಿ ಭೂ ಪರಿವರ್ತನೆಗೆ ಹಸ್ತಾಂತರಿಸುವ ಕಾರ್ಯಕ್ಕೆ  ಚಾಲನೆ ನೀಡುತ್ತಿರುವುದಾಗಿ ಘೋಷಿಸಿಸಲಾಯಿತು.

ಬಳಿಕ ಶಾಸಕ ಮಂಜುನಾಥ್ ಮಾತನಾಡಿ, ಗಿರಿಜನರಿಗೆ ಕೃಷಿ ಭೂಮಿ ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಕಂದಾಯ ಇಲಾಖೆಯಿಂದ ವಿಶೇಷ ಸರ್ವೆ ಅಧಿಕಾರಿಯನ್ನು ನಾಗಾಪುರಕ್ಕೆ ನೇಮಿಸುವಂತೆ ಮನವಿ ಮಾಡಿದ್ದು, ಬುಧವಾರದಿಂದ ಸರ್ವೆ ಅಧಿಕಾರಿ ಸ್ಥಳಕ್ಕೆ ಬರಲಿದ್ದಾರೆ ಎಂದರು.

1997ರಲ್ಲಿ ನಾಗರಹೊಳೆ ಅರಣ್ಯದಿಂದ ಸ್ಥಳಾಂತರಗೊಂಡ ಗಿರಿಜನರಿಗೆ ಕೃಷಿ ಭೂಮಿ ನೀಡುವಲ್ಲಿ ಅನೇಕ ಲಾಬಿಗಳು ನಡೆದು ಕಳೆದ 10  ವರ್ಷದಿಂದ ಈ ಜನರು ಇಲಾಖೆ ಎದುರು ಧರಣಿ ನಡೆಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಕೃಷಿ ಭೂಮಿ ನೀಡುವುದಲ್ಲದೆ, ಪುನರ್ವಸತಿ ಸಮಯದಲ್ಲಿ ರೂಪಿಸಿದ್ದ ಯೋಜನೆಯಂತೆ ಸಾಮೂಹಿಕ ಸೌದೆ ಸಂಗ್ರಹ ಮತ್ತು ಉತ್ಪಾದನೆಗೆ ಮತ್ತು ಸಾಮೂಹಿಕ ಹೈನುಗಾರಿಕೆಗೆ ಭೂಮಿ ಗುರುತಿಸುವ ಕೆಲಸವನ್ನು ತೆಗೆದುಕೊಳ್ಳಲಾಗಿದೆ ಎಂದರು.

ಹಕ್ಕುಪತ್ರ: ಅರಣ್ಯ ಇಲಾಖೆಯಿಂದ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಿದ ಬಳಿಕ ಸರ್ವೆ ಕಾರ್ಯ ಮುಗಿಸಿದ ನಂತರ ಒಂದು ತಿಂಗಳೊಳಗಾಗಿ ಪ್ರತಿ ಕುಟುಂಬದವರಿಗೆ ಭೂಮಿ ಲಭ್ಯತೆ ಅವಲಂಬಿಸಿ ತಲಾ 3 ರಿಂದ 5 ಎಕರೆ ಭೂಮಿಯ ಹಕ್ಕುಪತ್ರ ವಿತರಿಸಲಾಗುತ್ತದೆ.

ಈ  ವಿಚಾರದಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಬೇಕು. 5 ಎಕರೆ ಭೂಮಿಗೆ ಪಟ್ಟು ಹಿಡಿಯಬೇಡಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ನಾಗರಹೊಳೆ ಅಭಯಾರಣ್ಯದ ಡಿ.ಸಿ.ಎಫ್ ವಿಜಯರಂಜನ್‌ಸಿಂಗ್, ಉಪವಿಭಾಗಾಧಿ ಕಾರಿ ಲಿಂಗಮೂರ್ತಿ, ನಾಗಾಪುರ ಗಿರಿಜನ ಪುನರ್ವಸತಿ 6 ಘಟಕದ ಮುಖಂಡರಾದ ಪ್ರಕಾಶ್,ಮಣಿ, ತಿಮ್ಮ, ಚಂದ್ರು, ಹರೀಶ್ ಮತ್ತು ಸುಂದ್ರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.