ADVERTISEMENT

ಗಿರಿಜನರಿಗೆ ಸುಣ್ಣ,ಗುತ್ತಿಗೆದಾರರಿಗೆ ಬೆಣ್ಣೆ!

ಎಚ್.ಎಸ್.ಸಚ್ಚಿತ್
Published 12 ಜೂನ್ 2011, 10:10 IST
Last Updated 12 ಜೂನ್ 2011, 10:10 IST

ಹುಣಸೂರು: ಗಿರಿಜನ ಕುಟುಂಬವನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡುತ್ತಿದ್ದೇವೆ. ಗಿರಿಜನರ ಕಲ್ಯಾಣಕ್ಕೆ ಇಂತಿಷ್ಟು ಅನುದಾನ ಮೀಸಲಿಡಲಾಗಿದೆ, ಕೇಂದ್ರ ಸರ್ಕಾರ ಕಾಡಿನಿಂದ ಹೊರ ಬರುವ ಗಿರಿಜನರಿಗೆ ವಿಶೇಷ ಪ್ಯಾಕೇಜ್.... ಹೀಗೆಲ್ಲಾ ಹತ್ತು ಹಲವು ಭರವಸೆಗಳ ಮಹಾಪೂರದಲ್ಲೇ ಕನಸಿನ ಅರಮನೆ ನಿರ್ಮಿಸಿ ಪ್ರಪಂಚ ಜ್ಞಾನವಿಲ್ಲದ ಗಿರಿಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎನ್ನಲು ತಾಲ್ಲೂಕಿನ ಹನಗೋಡು ಹೋಬಳಿ ಕೆರೆ ಹಾಡಿ ಜೀವಂತ ಉದಾಹರಣೆ.

 ಕೆರೆ ಹಾಡಿ, ಹನಗೋಡು ಹೋಬಳಿ ದೊಡ್ಡಹೆಜ್ಜೂರು ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಈ ಹಾಡಿಗೆ ಯಾವುದೇ ಸರ್ಕಾರಿ ಸವಲತ್ತು ತಲಪದೆ ಇಲ್ಲಿ ವಾಸಿಸುತ್ತಿರುವ ಗಿರಿಜನರು ಕಾಡಿನಲ್ಲಿದ್ದಾರೋ...

ಹಾಡಿಯಲ್ಲಿದ್ದಾರೋ.... ಎಂಬ ಅನುಮಾನ ಹುಟ್ಟುತ್ತದೆ. ಹಾಡಿಯಲ್ಲಿ ಒಟ್ಟು 40 ಕುಟುಂಬಗಳು ವಾಸಿಸುತ್ತಿದ್ದು, ಇವರಲ್ಲಿ 20-25 ಕುಟುಂಬಗಳು ಜೋಪಡಿಯಲ್ಲಿ  ವಾಸ ಮಾಡುತ್ತಿವೆ. 

ಹಾಡಿಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ 10-15 ವರ್ಷದಿಂದ ನಿರಂತರವಾಗಿ ಅನೇಕ ಯೋಜನೆ ಅನುಷ್ಠಾನಕ್ಕೆ ತಂದರೂ ಫಲಾನುಭವಿಗಳಿಗೆ ಇದು ತಲುಪಿಲ್ಲ. ಅನುದಾನದ ಬೊಕ್ಕಸ ಬರಿದಾದರೂ ಫಲಾನುಭವಿಗಳ ಜೀವನದ ಸ್ಥಿತಿಗತಿ ಸುಧಾರಿಸಲಿಲ್ಲ.

 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಗಿರಿಜನರ ಸಮಗ್ರ ಅಭಿವೃದ್ಧಿ ಮತ್ತು ಶಾಶ್ವತ ಮೂಲ ಸೌಕರ್ಯ ಒದಗಿಸುವ ದೃಷ್ಟಿಯಿಂದ ಮೈಸೂರು ಜಿಲ್ಲೆಯ “ಹಾಡಿಗಳ ಅಭಿವೃದ್ಧಿ ಮತ್ತು ಗಿರಿಜನರಿಗೆ ಸೂರು “ ಯೋಜನೆಗೆ ಕೇಂದ್ರ ಸರ್ಕಾರ 25 ಕೋಟಿ ಮೀಸಲಿಟ್ಟು, ಯೋಜನೆಗೆ ಹಣ ಬಿಡುಗಡೆ ಮಾಡಿ 2 ವರ್ಷ ಕಳೆದಿದೆ. ಸಿ.ಸಿ.ಡಿ. (ಕರ್ನ್ಸ್‌ವೇಷನ್ ಕಮ್ ಡೆವಲಪ್‌ಮೆಂಟ್ ಪ್ಲಾನ್) ಯೋಜನೆ  ಕಲ್ಪಿಸುವ ಮುಖ್ಯ ಉದ್ದೇಶದಿಂದ ಈ ಯೋಜನೆ ರಚಿಸಿ ಅನುಷ್ಠಾನಗೊಳಿಸಿದ್ದಾರೆ. ಜಿಲ್ಲಾಡಳಿತ ಮತ್ತು ಕ್ಷೇತ್ರದ ಜನಪ್ರತಿನಿಧಿಗಳ ನಿರಾಸಕ್ತಿಯಿಂದ ಯೋಜನೆ ಫಲಾನುಭವಿಗೆ ತಲಪದೆ ಕಡತ ದೂಳು ಹಿಡಿದಿದೆ.

ಫಲಾನುಭವಿ ಪಟ್ಟಿ: ಸಿ.ಸಿ.ಡಿ ಯೋಜನೆಯಲ್ಲಿ ಸೂರಿಲ್ಲದ ಗಿರಿಜನರ ಫಲಾನುಭವಿಗಳ ಹೆಸರಿನ ಪಟ್ಟಿ ಸಿದ್ದಪಡಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ 6 ತಿಂಗಳು ಕಳೆದಿದ್ದರೂ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುವಲ್ಲಿ ಆಡಳಿತ ಯಂತ್ರ ಮತ್ತು ಜನಪ್ರತಿನಿಧಿಗಳು ಆದ್ಯತೆ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.

ಭಾರತೀಯ ಗಿರಿಜನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಂ.ಬಿ. ಪ್ರಭು ಮಾತನಾಡಿ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಿ.ಸಿ.ಡಿ, ಯೋಜನೆ ಸಭೆ ನಡೆಸಿ ಯೋಜನೆಯ ಆಗು ಹೋಗುಗಳ ಬಗ್ಗೆ ಚರ್ಚೆ ನಡೆಯಬೇಕಿತ್ತು.

ಜಿಲ್ಲಾಧಿಕಾರಿ ಹರ್ಷಗುಪ್ತ ಬಂದ ನಂತರದಲ್ಲಿ ಕೇವಲ 2 ಸಭೆ ಮಾತ್ರ ನಡೆಸಿದ್ದಾರೆ. ಒಂದು ವರ್ಷದ ಹಿಂದೆ ನಡೆಸಿದ ಸಿ.ಸಿ.ಡಿ ಸಭೆಯಲ್ಲಿ, ಜಿಲ್ಲಾಧಿಕಾರಿಗಳು ಯೋಜನೆಯ ಫಲಾನುಭವಿಗಳ ಪಟ್ಟಿ 15 ದಿನದೊಳಗೆ ನೀಡಬೇಕು ಎಂದು ಸೂಚಿಸಿದ್ದರು. 6 ತಿಂಗಳಾದರೂ ಸಭೆ ಕರೆದು ಫಲಾನುಭಗಳ ಪಟ್ಟಿ ಅಂತಿಮಗೊಳಿಸುವ ಪ್ರಯತ್ನ ಮಾಡದೆ ಕೆರೆ ಹಾಡಿ ಗಿರಿಜನರಂತೆ ಅನೇಕ ಹಾಡಿಯ ನಾಗರೀಕರು ಸೂರಿಲ್ಲದೆ ಅತಂತ್ರರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಗಿರಿಜನರ ಬದುಕು ಹಸನಾಗಿಸಲು ಯೋಜನೆಗಳು ಹರಿದು ಬಂದರೂ ಇಂದಿಗೂ ಮೂರಾಬಟ್ಟೆಯಾಗಿ, ಈ ಜನರ ಹೆಸರಿನಲ್ಲಿ ಮುಂದುವರೆದ ನಾಗರೀಕರು ಗರಿ ಗರಿ ಬಟ್ಟೆ ತೊಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.