ADVERTISEMENT

ಗಿರಿಜನರ ನೀಲ ಮತ್ತೆ ಶಾಲೆಯತ್ತ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2012, 10:40 IST
Last Updated 25 ಏಪ್ರಿಲ್ 2012, 10:40 IST

ಮೈಸೂರು: `ಎಚ್.ಡಿ.ಕೋಟೆ ತಾಲ್ಲೂಕು ಹುಣಸೇಕುಪ್ಪೆ ಹಾಡಿಯ ಭೀಮಸೇನನ ಪುತ್ರಿ ನೀಲಾವತಿಯನ್ನು 2012-13 ನೇ ಸಾಲಿಗೆ ಅಂತರಸಂತೆಯ ಪ್ರೌಢಶಾಲೆಗೆ ದಾಖಲು ಮಾಡಲು ಕ್ರಮ ಕೈಗೊಳ್ಳಲಾಗಿದೆ~ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎನ್.ಆರ್.ವಿಜಯ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು `2012 ಮಾರ್ಚ್ 13 ರಂದು ಪ್ರಜಾವಾಣಿಯಲ್ಲಿ ಪ್ರಕಟವಾದ ಕುಟುಂಬ ನಿರ್ವಹಣೆಗೆ ಶಾಲೆ ಬಿಟ್ಟ ಬಾಲೆ ವಿಶೇಷ ವರದಿಯನ್ನು ಆಧರಿಸಿ ಎಚ್.ಡಿ.ಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿ ನೀಲಾವತಿ ನಿವಾಸಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದರು. ನೀಲಾವತಿ 2009-10 ರಲ್ಲಿ ಸತ್ತಿಗೆಹುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡಿ ಉತ್ತೀರ್ಣಳಾಗಿದ್ದಾಳೆ.

ನಂತರ ಈಕೆಯ ಮನೆಯ ಅಸಹಾಯಕ ಪರಿಸ್ಥಿತಿಯಿಂದಾಗಿ ಕೊಡಗು ಜಿಲ್ಲೆಗೆ ಗುಳೆ ಹೋಗಿದ್ದು, ನಂತರ ಊರಿಗೆ ಹಿಂತಿರುಗಿ ಬಂದಿದ್ದಳು. ಆಗ ಶಾಲೆಗೆ ಸೇರಲು ಸಿದ್ಧಳಿದ್ದು, ಆದರೆ ಪರೀಕ್ಷಾ ಸಮಯವಾಗಿರುವುದರಿಂದ ಈಕೆಯನ್ನು 2012-13 ನೇ ಸಾಲಿಗೆ 8 ನೇ ತರಗತಿಗೆ ಸೇರಿಸಲು ಹಾಗೂ ಅಂತರಸಂತೆಯಲ್ಲಿರುವ ಗಿರಿಜನ ವಸತಿ ನಿಲಯಕ್ಕೆ ಸೇರಿಸಲು ಚರ್ಚಿಸಿ ಕ್ರಮವಹಿಸಲಾಗಿದೆ~ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.