ADVERTISEMENT

ಚಾಮುಂಡಿಬೆಟ್ಟದಲ್ಲಿ ಭಕ್ತಿಯ ಮಹಾಪೂರ!

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 11:10 IST
Last Updated 3 ಆಗಸ್ಟ್ 2013, 11:10 IST

ಮೈಸೂರು: ಆಷಾಢ ಮಾಸದ ಕೊನೆಯ ಶುಕ್ರವಾರ ಚಾಮುಂಡಿ ಬೆಟ್ಟದ ಮೇಲೆ ಮಳೆ ನೀರು ಸುರಿಯ ಲಿಲ್ಲ. ಆದರೆ, ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರ ಭಕ್ತಿ ಮಹಾಪೂರವಾಗಿ ಹರಿಯಿತು!

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಬೆಂಗಳೂರು, ತುಮಕೂರು ಜಿಲ್ಲೆಗಳು, ತಮಿಳುನಾಡು ಮತ್ತು ಕೇರಳದ ಭಕ್ತರು ಆಗಮಿಸಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಚಾಮುಂಡೇಶ್ವರಿ ದೇವಿಯ ಗರ್ಭಗುಡಿಯನ್ನು ಮೊಸಂಬಿ ಹಣ್ಣುಗಳಿಗೆ ಪೋಣಿಸಲಾದ ವರ್ಣರಂಜಿತ ಹೂವುಗಳ ಮಾಲೆಯಿಂದ ಸಿಂಗರಿಸಲಾಗಿತ್ತು. ಸಿಂಹಾರೂಢ ಶ್ರೀದೇವಿಯ ಮೂರ್ತಿಯೂ ಪುಷ್ಪ ಸಿಂಗಾರದಿಂದ ಭಕ್ತರ ಮನತುಂಬಿತು.

ಆಷಾಢ ಮಾಸದ ಮೊದಲ ಶುಕ್ರವಾರ 300 ದಾಳಿಂಬೆ ಹಣ್ಣುಗಳು, ಎರಡನೇ ಶುಕ್ರವಾರ 300 ಕೆಜಿ ದ್ರಾಕ್ಷಿ ಮತ್ತು ಮೂರನೇ ಶುಕ್ರವಾರದಂದು 2,000 ಕೆಜಿ ಹೂವುಗಳಿಂದ ಕಲಾವಿದ ವೆಂಕಟೇಶ್ ಅಲಂಕಾರ ಮಾಡಿದ್ದರು.

ಗುರುವಾರ ಮಧ್ಯರಾತ್ರಿಯಿಂದಲೇ ದೇವಾಲಯ ದತ್ತ ಧಾವಿಸಿದ್ದ ಭಕ್ತರು ಚಳಿಯನ್ನೂ ಲೆಕ್ಕಿಸದೇ ಕಿಲೋಮೀಟರ್ ಉದ್ದದ ಸರತಿ ಸಾಲಿನಲ್ಲಿ ನಿಂತಿದ್ದರು. ಶುಕ್ರವಾರ ಬೆಳಗಿನ ಜಾವವೇ ನಾಡಿನ ಅಧಿದೇವತೆಗೆ ವಿವಿಧ ಪೂಜಾಕೈಂಕರ್ಯಗಳನ್ನು ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಅವರ ಮಾರ್ಗದರ್ಶನದಲ್ಲಿ ಅರ್ಚಕ ಸಮೂಹವು ನೆರವೇರಿಸಿತು. ನಂತರ ಬೆಳಿಗ್ಗೆ 5.30ಕ್ಕೆ ಜನರಿಗೆ ದರ್ಶನ ಕಲ್ಪಿಸಲಾಯಿತು.

ಕಳೆದ ಕೆಲವು ದಿನಗಳಿಂದ ಸುರಿದ ಮಳೆರಾಯ ಇವತ್ತು ಮಾತ್ರ ಸ್ತಬ್ಧವಾಗಿದ್ದ. ಸೂರ್ಯನ ಬಿಸಿಲು ಚೆಲ್ಲಿದ್ದರಿಂದ ಜನರ ಸಂಖ್ಯೆಯೂ ಹೆಚ್ಚಾಯಿತು. ದೇವಸ್ಥಾನದ ಆಡಳಿತ ಮತ್ತು ಪೊಲೀಸ್ ಮೂಲಗಳ ಪ್ರಕಾರ ಮುಸ್ಸಂಜೆಯ ವೇಳೆಗೆ ಸುಮಾರು ಒಂದೂವರೆ ಲಕ್ಷ ಜನರು ದೇವಿಯ ದರ್ಶನ ಭಾಗ್ಯ ಪಡೆದರು.

ಕಳೆದ ವರ್ಷಧ ಆಷಾಢ ಮಾಸದ ಒಟ್ಟು ನಾಲ್ಕು ಶುಕ್ರವಾರಗಳಲ್ಲಿ ಏಳು ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದರು. ಈ ಬಾರಿ ಇನ್ನೂ ಹೆಚ್ಚಿನ ಸಂಖ್ಯೆಯನ್ನು ಮೀರಬಹುದು ಎಂಬ ನಿರೀಕ್ಷೆಯನ್ನು ದೇವಾಲಯದ ಮೂಲಗಳು ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.