ಮೈಸೂರು: ಮಧ್ಯಾಹ್ನವಿಡೀ ಸುಡುವ ಬಿಸಿಲು, ಮುಸ್ಸಂಜೆಯಲ್ಲಿ ಮಿಂಚು, ಗುಡುಗುಗಳೊಂದಿಗೆ ಮಳೆ ಸುರಿಯುತ್ತಿರುವ ಮೈಸೂರಿನಲ್ಲಿ ಈಗ ರಾಷ್ಟ್ರೀಯ ಜೂನಿಯರ್ ಮಹಿಳಾ ಹಾಕಿ ಟೂರ್ನಿಯ ಸಂಭ್ರಮ.
ಹಾಕಿ ಕರ್ನಾಟಕದ ಆಶ್ರಯದಲ್ಲಿ ಬುಧವಾರದಿಂದ ಆರಂಭವಾಗಲಿರುವ ರಾಷ್ಟ್ರೀಯ ಜೂನಿಯರ್ ಬಿ ಮತ್ತು ಎ ಡಿವಿಷನ್ ಹಾಕಿ ಟೂರ್ನಿಗೆ ಚಾಮುಂಡಿ ವಿಹಾರದ ಆಸ್ಟ್ರೋ ಟರ್ಫ್ ಅಂಗಳ ಸಿದ್ಧವಾಗಿದೆ. ಕಳೆದ ದಸರಾದಲ್ಲಿ ಉದ್ಘಾಟನೆಯಾದ ಈ ಟರ್ಫ್‌ನಲ್ಲಿ ರಾಷ್ಟ್ರಮಟ್ಟದ ಆಹ್ವಾನಿತ ಮಹಿಳಾ ಹಾಕಿ ಟೂರ್ನಿಯ ನಂತರ ನಡೆಯುತ್ತಿರುವ ಮಹತ್ವದ ಟೂರ್ನಿ ಇದಾಗಲಿದೆ. ಬುಧವಾರ (ಮಾರ್ಚ್ 5) ಆರಂಭವಾಗಲಿರುವ ಬಿ ಡಿವಿಷನ್ ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿವೆ. ಲೀಗ್ ಹಂತದಲ್ಲಿ ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. 13ರಂದು ಫೈನಲ್ ನಡೆಯಲಿದೆ. ಮಾರ್ಚ್ 15ರಿಂದ 23ರವರೆಗೆ ನಡೆಯುವ ಎ ಡಿವಿಷನ್‌ನಲ್ಲಿ ಕರ್ನಾಟಕವೂ ಸೇರಿದಂತೆ 16 ತಂಡಗಳು ಭಾಗವಹಿಸಲಿವೆ. ಕಳೆದ ಬಾರಿಯ ಚಾಂಪಿಯನ್ ತಂಡ ಹರಿಯಾಣ ಈ ಬಾರಿಯೂ ಪ್ರಾಬಲ್ಯ ಮುಂದುವರಿಸುವ ತವಕದಲ್ಲಿದೆ.
‘ಕರ್ನಾಟಕ ತಂಡದ ಆಯ್ಕೆಗಾಗಿ ಇಲ್ಲಿಯೇ ಶಿಬಿರ ನಡೆಯುತ್ತಿದೆ. ಮಾರ್ಚ್ 7 ಅಥವಾ 8ರಂದು ಅಂತಿಮ ತಂಡವನ್ನು ಆಯ್ಕೆ ಮಾಡಲಾಗುವುದು. ರಾಜ್ಯದ ಎಲ್ಲ ಪ್ರತಿಭಾನ್ವಿತ ಆಟಗಾರ್ತಿಯರಿಗೂ ಅವಕಾಶ ಸಿಗುತ್ತದೆ. ಮೈಸೂರು ಮತ್ತು ಮಡಿಕೇರಿ ವಸತಿ ನಿಲಯಗಳಿಂದಲೂ ಆಟಗಾರ್ತಿಯರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ’ ಎಂದು ಹಾಕಿ ಕರ್ನಾಟಕದ ಕಾರ್ಯದರ್ಶಿ, ಒಲಿಂಪಿಯನ್ ಎ.ಬಿ. ಸುಬ್ಬಯ್ಯ ತಿಳಿಸಿದ್ದಾರೆ. ಎ ಮತ್ತು ಬಿ ಡಿವಿಷನ್ ಟೂರ್ನಿಯಲ್ಲಿ ಒಟ್ಟು 700ಕ್ಕೂ ಹೆಚ್ಚು ಆಟಗಾರ್ತಿಯರು ಭಾಗವಹಿಸಲಿದ್ದಾರೆ.
ಪರೀಕ್ಷೆ ಗುಮ್ಮ: ರಾಜಧಾನಿ ಬೆಂಗಳೂರಿನಿಂದ ಹೊರಗೆ ಮಹತ್ವದ ಹಾಕಿ ಟೂರ್ನಿಯೊಂದು ನಡೆಯುತ್ತಿರುವುದು ಇಲ್ಲಿಯ ಕ್ರೀಡಾಪ್ರೇಮಿಗಳಲ್ಲಿ ಉತ್ಸಾಹ ಮೂಡಿಸಿದೆ. ಆದರೆ, ಕೆಲವರಿಂದ ಅಸಮಾಧಾನವೂ ವ್ಯಕ್ತವಾಗಿದೆ. ಏಕೆಂದರೆ ಇದೇ ತಿಂಗಳು ಪಿಯು ದ್ವಿತೀಯ ವರ್ಷ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ.
ಜೂನಿಯರ್ ಟೂರ್ನಿಯಲ್ಲಿ ಭಾಗವಹಿಸಲು 19 ವರ್ಷದೊಳಗಿನ ವಯಸ್ಸಿನವರು ಅರ್ಹರು. ಆದರೆ, ಇವರಲ್ಲಿ ಬಹುತೇಕರು ಈಗ ಪರೀಕ್ಷಾ ತಯಾರಿಯಲ್ಲಿ ತೊಡಗಿದ್ದಾರೆ. ‘ಪಿಯುಸಿ ಪ್ರಥಮ ಮತ್ತು ಪದವಿ ಪ್ರಥಮ ವರ್ಷದಲ್ಲಿ ಓದುತ್ತಿರುವ 19 ವರ್ಷದೊಳಗಿನ ಆಟಗಾರ್ತಿಯರು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಮೈಸೂರು ಡಿವೈಎಸ್‌ಎಸ್ ವಸತಿ ನಿಲಯದಿಂದ ಐವರು ಮತ್ತು ಮಡಿಕೇರಿ ವಸತಿ ನಿಲಯದಿಂದ 4–5 ಆಟಗಾರ್ತಿಯರು ಪರೀಕ್ಷೆಯಿಂದಾಗಿ ಆಟದಿಂದ ಹಿಂದೆ ಸರಿದಿದ್ದಾರೆ. ಹಾಕಿ ಇಂಡಿಯಾ ವೇಳಾಪಟ್ಟಿ ಸಿದ್ಧಪಡಿಸಿದ ಪ್ರಕಾರ ಟೂರ್ನಿಯು ನಡೆಯುತ್ತಿದೆ. ಆದರೂ ಇಂತಹದೊಂದು ಮಹತ್ವದ ಟೂರ್ನಿ ಮೈಸೂರಿನಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ’ ಎಂದು ಡಿವೈಎಸ್‌ಎಸ್ ಕೋಚ್ ವಿಜಯಕೃಷ್ಣ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.