ತಿ.ನರಸೀಪುರ: ತಾಲ್ಲೂಕಿನ ಜಗಜೀವನ ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆ, ಚರಂಡಿ, ವಿದ್ಯುತ್ ಹಾಗೂ ಶೌಚಾಲಯ ಸಮಸ್ಯೆ ಸೇರಿದಂತೆ ಹಲವು ಸೌಕರ್ಯಗಳ ಕೊರತೆ ಇದೆ.
ಬನ್ನೂರು ಮುಖ್ಯ ರಸ್ತೆಯಲ್ಲಿರುವ ಈ ಗ್ರಾಮ ಸೋಸಲೆ ಹೋಬಳಿಯ ಸೋಮನಾಥಪುರ ಗ್ರಾಮ ಪಂಚಾಯಿತಿಗೆ ಸೇರಿದೆ. ಪರಿಶಿಷ್ಟ ಸಮುದಾಯ ಜನರೇ ಹೆಚ್ಚಾಗಿ ವಾಸಿಸುವ ಇಲ್ಲಿನ ಜನರು ಕೂಲಿಯಿಂದ ಜೀವನ ನಡೆಸುತ್ತಾರೆ.
120ಕ್ಕೂ ಅಧಿಕ ಮನೆಗಳಿದೆ. ಆದರೆ ಕುಡಿಯುವ ನೀರು ಮಾತ್ರ ಒಂದೆರೆಡು ಬೀದಿಗಳಿಗೆ ಪೂರೈಕೆಯಾದರೆ, ಉಳಿದ ಬೀದಿಗಳ ಜನರಿಗೆ ನೀರು ಸಿಗುವುದಿಲ್ಲ. ಗ್ರಾಮದಲ್ಲಿ ಬೋರ್‌ವೆಲ್ ಇದ್ದರೂ ಕೆಟ್ಟಿದೆ. ಮೂರು ಕಿರು ನೀರು ಸರಬರಾಜು ತೊಂಬೆಗಳಿದ್ದರೂ ನೀರು ಬರುತ್ತಿಲ್ಲ.
ಒಂದೆರೆಡು ರಸ್ತೆಗಳಲ್ಲಿ ಚರಂಡಿ ಸೌಲಭ್ಯವಿದೆ. ಬಹುತೇಕ ರಸ್ತೆಗಳಿಗೆ ಸಮರ್ಪಕವಾಗಿ ಚರಂಡಿ ಸೌಲಭ್ಯವಿಲ್ಲ. ಸರಿಯಾದ ಚರಂಡಿ ಇಲ್ಲದೇ ರಸ್ತೆ ಮಧ್ಯದಲ್ಲಿಯೇ ಕೊಳಚೆ ನೀರು ಹಾದು ಹೋಗುತ್ತದೆ. ಯುಗಾದಿ ಹಬ್ಬದಲ್ಲಿ ಚರಂಡಿಯಲ್ಲಿನ ಕಸವನ್ನು ಎತ್ತಿ ರಸ್ತೆ ಬದಿಗೆ ಹಾಕಲಾಗಿದೆ. ಆದರೆ ಅದನ್ನು ಸ್ವಚ್ಛಗೊಳಿಸುವ ಕಾರ್ಯ ಈವರೆಗೂ ಆಗಿಲ್ಲ. ಶೌಚಾಲಯ ಸಮಸ್ಯೆ ಕೂಡ ಇದೆ.
ಗ್ರಾಮದ ಮನೆಗಳಿಗೆ ವಿದ್ಯುತ್ ಸಂಪರ್ಕ ಇದ್ದರೂ ನಿರಂತರವಾಗಿ ಪೂರೈಕೆಯಾಗುತ್ತಿಲ್ಲ. ಸಿಂಗಲ್ ಫೇಸ್ ವಿದ್ಯುತ್ ಪೂರೈಕೆಯಾಗುತ್ತದೆ. ಅನೇಕ ವೇಳೆ ರಾತ್ರಿ ವಿದ್ಯುತ್ ಇರುವುದಿಲ್ಲ. ವಿದ್ಯುತ್ ಇಲ್ಲದಿದ್ದರೆ ನೀರಿಗೂ ಸಮಸ್ಯೆ. ಈಗ ಪರೀಕ್ಷೆ ಸಮಯವಾದ್ದರಿಂದ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ ಎಂಬುದು ದೂರು.
ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಗ್ರಾಮದ ಮೇಲ್ಭಾಗದಲ್ಲಿ ಒಂದು ಟ್ಯಾಂಕ್ ನಿರ್ಮಾಣವಾಗಬೇಕು.
ನೀರಿನ ತೊಂಬೆಗಳಲ್ಲಿ ನೀರು ಪೂರೈಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿಗಳ ಅಭಿವೃದ್ಧಿ ಮಾಡಬೇಕು. ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಅನೈರ್ಮಲ್ಯ ವಾತಾವರಣ ಹೋಗಲಾಡಿಸಲು ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎನ್ನುವುದು ಇಲ್ಲಿನ ಜನರ ಆಗ್ರಹ.
ಬಹುತೇಕ ಕೂಲಿಯಿಂದಲೇ ಜೀವನ ನಡೆಸುವ ನಮಗೆ ಸರ್ಕಾರದ ಸವಲತ್ತುಗಳು ದೊರಕಬೇಕಿದೆ. ಬಹುತೇಕರು ಬಡವರು, ಅವಿದ್ಯಾವಂತರು ಆಗಿರುವುದರಿಂದ ಸರ್ಕಾರದ ಸವಲತ್ತುಗಳ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲ ಎನ್ನುತ್ತಾರೆ ಗ್ರಾಮದ ಮುಖಂಡರು.
ತಿ.ನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಈ ಗ್ರಾಮದಲ್ಲಿನ ಜನರಿಗೆ ಸವಲತ್ತು ದೊರಕಿಸಲು ಕ್ಷೇತ್ರದ ಶಾಸಕರು, ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಇತ್ತ ಗಮನಹರಿಸಿ, ಗ್ರಾಮಕ್ಕೆ ಮೂಲ ಸೌಕರ್ಯ ನೀಡಬೇಕು ಎಂಬುದು ಇಲ್ಲಿನ ಜನರ ಆಶಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.