ADVERTISEMENT

ಜಾರಿಗೆ ಬಾರದ ಜಿಲ್ಲಾಧಿಕಾರಿ ಆದೇಶ

​ಪ್ರಜಾವಾಣಿ ವಾರ್ತೆ
Published 10 ಜೂನ್ 2011, 9:35 IST
Last Updated 10 ಜೂನ್ 2011, 9:35 IST

ನಂಜನಗೂಡು: ಶಾಲೆ-ಕಾಲೇಜುಗಳು ಆರಂಭವಾಗಿದ್ದು, ವಿದ್ಯಾರ್ಥಿಗಳ ಆದಾಯ ಪತ್ರ ಹಾಗೂ ರೈತರ ಪಹಣಿ ಪತ್ರಕ್ಕೆ ಸದ್ಯ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ನೆಮ್ಮದಿ ಕೇಂದ್ರಗಳು ಹೆಚ್ಚಿನ ಸಿಬ್ಬಂದಿ, ಗಣಕ ಯಂತ್ರ, ಇತ್ಯಾದಿ ಸಲಕರಣೆ ಅಳವಡಿಸಿ ಕೊಳ್ಳುವಂತೆ ಜಿಲ್ಲಾಧಿಕಾರಿ ಇತ್ತೀಚೆಗೆ ಆದೇಶ ಹೊರಡಿಸಿದ್ದರು. ಆದರೆ, ಪಟ್ಟಣದ ನೆಮ್ಮದಿ ಕೇಂದ್ರದಲ್ಲಿ ಇದಾವುದು ಜಾರಿೆ ಬಂದಿಲ್ಲ.

ಎಲ್ಲ ನೆಮ್ಮದಿ ಕೇಂದ್ರಗಳಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಎರಡು ಗಣಕ ಯಂತ್ರಗಳ ಜೊತೆಗೆ ಹೆಚ್ಚುವರಿ ಯಂತ್ರ, ಸಿಬ್ಬಂದಿ, ವಿದ್ಯುತ್ ಇಲ್ಲದ ವೇಳೆ ಪರ್ಯಾಯ ವ್ಯವಸ್ಥೆ ಜೊತೆಗೆ ನಿತ್ಯ ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆ ತನಕ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹರ್ಷಗುಪ್ತ ಆದೇಶ ಹೊರಡಿಸಿದ್ದರು. ಹೆಚ್ಚುವರಿ ಗಣಕಯಂತ್ರ ಅಳವಡಿಸುವ ಮಾತಿರಲಿ, ಪಟ್ಟಣದ  ನೆಮ್ಮದಿ ಕೇಂದ್ರದಲ್ಲಿ ಇರುವ 2 ಗಣಕ ಯಂತ್ರಗಳ ಪೈಕಿ ಪ್ರಸುತ್ತ ಕಾರ್ಯ ನಿರ್ವಹಿಸುತ್ತಿರುವುದು ಒಂದೇ ಯಂತ್ರ. ಕಾರಣ ಅಗತ್ಯ   ಸಿಬ್ಬಂದಿ ಇಲ್ಲದಿರುವುದು. ಕೇಂದ್ರದಲ್ಲಿ ಕೇವಲ ಇಬ್ಬರು ವ್ಯಕ್ತಿ  ಕೆಲಸ ಮಾಡುತ್ತಿದ್ದಾರೆ. ಒಬ್ಬರು ಗಣಕಯಂತ್ರ ಕಾರ್ಯಾಚರಣೆ ಮಾಡಿದರೆ, ಇನ್ನೊಬ್ಬರು ಅವರಿಗೆ ಸಹಾಯಕ ರಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು, ರೈತರು ಆದಾಯ ಪತ್ರ ಮತ್ತು ಪಹಣಿ ಪತ್ರ ಪಡೆಯುವ ನೋಂದಣಿಗೆ ಗಂಟೆಗಟ್ಟಳೆ  ಕಾಯ ಬೇಕಾದ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

ನೆಮ್ಮದಿ ಕೇಂದ್ರಗಳ ನಿರ್ವಹಣೆಯು ಹೊರ ಗುತ್ತಿಗೆ ಆಧಾರದಲ್ಲಿ ಖಾಸಗಿ ಸಂಸ್ಥೆ ನಡೆಸುತ್ತಿದೆ. ಹಾಗಾಗಿ ಏಜೆನ್ಸಿಯ ಮುಖ್ಯಸ್ಥರಿಗಾಗಲಿ  ಅಥವಾ ಸಿಬ್ಬಂದಿಗಾಗಲೀ ಎಳ್ಳಷ್ಟು ಭಯವಿಲ್ಲ  ಎಂಬುದು ಸಾರ್ವಜನಿಕರ ಆರೋಪ ವಾಗಿದೆ. ಜಿಲ್ಲೆಯ ಬಹುಪಾಲು ನೆಮ್ಮದಿ ಕೇಂದ್ರಗಳಲ್ಲಿ ಇದೇ ಪರಿಸ್ಥಿತಿ ಇದೆ ಎನ್ನಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ, ಸಕಾಲದಲ್ಲಿ ಜನರಿಗೆ ಬೇಕಾದ ದೃಢೀಕರಣ ಪತ್ರ ದೊರಕುವಂತೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.