ADVERTISEMENT

ಜಿಲ್ಲೆಯಲ್ಲಿ ನ.20ರಿಂದ ಜಾತಿ ಗಣತಿ: ವಸ್ತ್ರದ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 9:10 IST
Last Updated 18 ಅಕ್ಟೋಬರ್ 2011, 9:10 IST

ಮೈಸೂರು: ಬರುವ ನ.20 ರಿಂದ ಜಿಲ್ಲೆಯಲ್ಲಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎಸ್. ವಸ್ತ್ರದ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಗಣತಿ ನಡೆಸಲಾಗುವುದು. ಗಣತಿ ನ.20 ರಿಂದ ಪ್ರಾರಂಭವಾಗಿ ಡಿಸೆಂಬರ್ 30ಕ್ಕೆ ಕೊನೆಗೊಳ್ಳಲಿದೆ. ಇಂತಹ ಗಣತಿಯನ್ನು ನಮ್ಮ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಗಣತಿದಾರರು ಗಣತಿ ಕಾರ್ಯಕ್ಕೆ ಮನೆಮನೆಗಳಿಗೆ ಭೇಟಿ ನೀಡಿದಾಗ ಪ್ರಶ್ನಾವಳಿಯನ್ನು ತುಂಬಿಸಲು ಆತುರ ಪಡಬೇಡಿ. ಸೂಕ್ತ ನಮೂನೆಗಳನ್ನು ತಿಳಿಸಿ, ನಿಮ್ಮ ಭೇಟಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ಪರಿಚಯ ಮಾಡಿಕೊಳ್ಳಿ.

ಗಣತಿ ಮಾಡುವ ಮುನ್ನ ದಯವಿಟ್ಟು ನಿಮ್ಮ ಗುರುತಿನ ಚೀಟಿಯನ್ನು ಹೇಳಿಕೆದಾರರಿಗೆ ತೋರಿಸಿ. ನಿಮ್ಮ ಸ್ನೇಹಮಯ ವ್ಯಕ್ತಿತ್ವ, ಸೌಜನ್ಯ ಮತ್ತು ಗೌರವದ ಮಾತುಗಳು ಹೇಳಿಕೆದಾರರಿಗೆ ಮುದ ನೀಡಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ತಾವಾಗಿಯೇ ಕರಾರುವಕ್ಕಾಗಿ ಉತ್ತರ ನೀಡುವ ಸ್ಪೂರ್ತಿಯನ್ನು ನೀಡುತ್ತದೆ. ಇದರಿಂದ ನಿಮ್ಮ ಕೆಲಸದಲ್ಲಿ ಸುಲಭವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಸಮೀಕ್ಷೆ ನಡೆಸುವಾಗ ಗಣತಿ ಬ್ಲಾಕ್‌ನ ಅಧಿಕೃತ ಭಾಗವಾಗಿರುವ ಯಾವುದೇ ಮನೆಯನ್ನು ಬಿಡಬಾರದು. ಇಡೀ ಕುಟುಂಬವೇ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದಲ್ಲಿ ಗಣತಿ ಬ್ಲಾಕ್‌ನಲ್ಲಿ ಗಣತಿ ಮಾಡುವಾಗ ಪದೇಪದೇ ಭೇಟಿ ನೀಡಿ ಹೆಚ್ಚು ಬಾರಿ ಭೇಟಿ ನೀಡಿದಾಗಲೂ ಯಾವುದೇ ಒಂದು ಕುಟುಂಬದ ಮಾಹಿತಿಯನ್ನು ಪಡೆಯಲಾಗದಿದ್ದಲ್ಲಿ ಮೇಲ್ವಿ ಚಾರಕರು ಆ ಕುಟುಂಬದ ಮುಖ್ಯಸ್ಥರ ಹೆಸರನ್ನು ಮತ್ತು ಅವರ ಅಲಭ್ಯತೆ ಬಗ್ಗೆ ಗಣತಿ ಬ್ಲಾಕ್‌ನ ಅಕ್ಕಪಕ್ಕದವರಿಂದ ಸಂಗ್ರಹಿಸಲಾದ ಮಾಹಿತಿಯ ಆಧಾರದ ಮೇಲೆ ನಿಗದಿತ ನಮೂನೆಯಲ್ಲಿ ದಾಖಲಿಸಬೇಕು ಎಂದು ತಿಳಿಸಿದರು.
ಜನಗಣತಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಮುನಿರತ್ನಂ ಗಣತಿ ಕಾರ್ಯ ಕುರಿತು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.