ADVERTISEMENT

ತಮಿಳುನಾಡಿಗೆ ನೀರು ಹರಿಸಿಲ್ಲ: ನಿಗಮ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 9:08 IST
Last Updated 21 ಡಿಸೆಂಬರ್ 2013, 9:08 IST

ಮೈಸೂರು: ಕಬಿನಿ ಜಲಾಶಯದಿಂದ ‘ಸುಭಾಷ್‌ ಪವರ್ ಕಾರ್ಪೋರೇಷನ್‌’ ವಿದ್ಯುತ್‌ ಉತ್ಪಾದನಾ ಘಟಕಕ್ಕೆ ನೀರು ಹರಿಸುವ ನೆಪದಲ್ಲಿ ತಮಿಳುನಾಡಿಗೆ ನವೆಂಬರ್‌ ತಿಂಗಳಲ್ಲಿ ನೀರು ಹರಿಸಲಾಗಿದೆ ಎಂಬ ಆರೋಪವನ್ನು  ಕಾವೇರಿ ನೀರಾವರಿ ನಿಗಮ ಅಲ್ಲಗಳೆದಿದೆ.

ಕೇವಲ ವಿದ್ಯುತ್‌ ಉತ್ಪಾದನೆಗಾಗಿ ಜಲಾಶಯದಿಂದ ನೀರನ್ನು ಹರಿಸಿಲ್ಲ. ಜಲಾಶಯದ ಕೆಳಗಡೆ ನಿರ್ಮಾಣಗೊಂಡಿರುವ ಹುಲ್ಲಹಳ್ಳಿ ಅಣೆಕಟ್ಟೆಯ ಹುಲ್ಲಹಳ್ಳಿ– ರಾಂಪುರ ನಾಲೆಗಳಿಗೆ ಖಾರೀಫ್‌ ಬೆಳೆಗಾಗಿ ನವೆಂಬರ್‌ನಲ್ಲಿ ನಿತ್ಯ 700 ಕ್ಯೂಸೆಕ್ ನೀರನ್ನು ವಿದ್ಯುತ್‌ ಘಟಕದ ಮೂಲಕ ನದಿಗೆ ಹರಿಸಲಾಗಿತ್ತೇ ಹೊರತು ತಮಿಳುನಾಡಿಗೆ ಅಲ್ಲ. ಕೃಷಿ ಚಟುವಟಿಕೆಗಳು ಮುಗಿದಿರುವ ಕಾರಣ ಕಳೆದ ನ. 24ರಿಂದ ನಾಲೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ನಿಗಮದ ನೀರಾವರಿ (ದಕ್ಷಿಣ) ವಲಯದ ಮುಖ್ಯ ಎಂಜಿನಿಯರ್‌ ಬಿ. ಶಿವಶಂಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಲಾಶಯದಲ್ಲಿ ಅ. 31ರಂದು 2,280.84 ಅಡಿ ನೀರು ಇತ್ತು. ನ. 30ರಲ್ಲಿ ನೀರಿನಮಟ್ಟ 2,274.74 ಅಡಿ ಇತ್ತು. ಈ ಒಂದು ತಿಂಗಳಲ್ಲಿ 6.37 ಅಡಿ ನೀರು ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ಒಳಹರಿವಿನಿಂದ 1.40 ಟಿಎಂಸಿ ನೀರು ಜಲಾಶಯಕ್ಕೆ ಬಂದಿದೆ. ಒಟ್ಟಾರೆ 4.96 ಟಿಎಂಸಿ ನೀರನ್ನು ಕಬಿನಿ ಎಡದಂಡೆ, ಬಲದಂಡೆ, ಹುಲ್ಲಹಳ್ಳಿ– ರಾಂಪುರ ನಾಲೆಗಳಿಗೆ ಹರಿಸಲಾಗಿದೆ ಎಂದು ಅವರು ವಿವರ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.