ADVERTISEMENT

ತಾರಕ ಜಲಾಶಯಕ್ಕೆ ಶಾಸಕರಿಂದ ಬಾಗಿನ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2013, 6:01 IST
Last Updated 6 ಆಗಸ್ಟ್ 2013, 6:01 IST

ಸರಗೂರು:  `ಈ ಬಾರಿ ವರುಣನ ಕೃಪೆಯಿಂದ ತಾಲ್ಲೂಕಿನ ಕಬಿನಿ, ನುಗು ಮತ್ತು ತಾರಕ ಜಲಾಶಯಗಳು ತುಂಬಿವೆ. ರಾಜ್ಯದಲ್ಲಿ ಮೊದಲು ಈ ಅಣೆಕಟ್ಟುಗಳ ಪ್ರತಿವರ್ಷ ಮೊದಲು ತುಂಬುತ್ತದೆ. ಈ ಬಾರಿ ಅವಧಿಗೂ ಮೊದಲು ಜಲಾಶಯಗಳು ಭರ್ತಿಯಗಿವೆ ಎಂದು ಶಾಸಕ ಎಸ್.ಚಿಕ್ಕಮಾದು ಹೇಳಿದರು. 

ತಾರಕ ಜಲಾಶಯಕ್ಕೆ ಸೋಮವಾರ ಶಾಸಕ ಚಿಕ್ಕಮಾದು ಬಾಗಿನ ಅರ್ಪಿಸಿದರು. ಬಳಿಕ ಮಾತನಾಡಿದ ಅವರು, ಈ ಸಲ ಕಬಿನಿಯಿಂದ ತಮಿಳುನಾಡಿಗೆ ನೀರು ಹರಿದಿದೆ. ತಾಲ್ಲೂಕಿನಲ್ಲಿ ಸತತವಾಗಿ ಬಿದ್ದ ಮಳೆಯಿಂದ ಸಾವಿರಾರು ಎಕರೆ ಹತ್ತಿ ಮತ್ತು ಹೊಗೆಸೊಪ್ಪು, ಹಲಸಂದೆ, ಕಡ್ಲೆಕಾಯಿ ಬೆಳೆಗೆ ಹಾನಿಯಾಗಿದೆ. ತಾಲ್ಲೂಕಿನ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದೆ.

ಅಧಿವೇಶನದಲ್ಲಿ ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತೇನೆ. ರಸ್ತೆ ದುರಸ್ತಿ ಮತ್ತು ಬೆಳೆ ಪರಿಹಾರಕ್ಕೆ ರೂ 100 ಕೋಟಿ ಅನುದಾನ ನೀಡುವಂತೆ ಕೇಳಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಮುಖ್ಯಮಂತ್ರಿ ಅವರಿಗೂ ಈ ವಿಚಾರದ ಬಗ್ಗೆ ತಿಳಿಸಿದ್ದೇನೆ. ಜಿಲ್ಲಾಧಿಕಾರಿಗಳು ತಾಲ್ಲೂಕಿಗೆ ಭೇಟಿ ನೀಡಿ ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ತಾರಕ ಮತ್ತು ನುಗು ಬಾರದ ರೈತರು ಕಳೆದ ಎರಡು ವರ್ಷಗಳಿಂದ ತತ್ತರಿಸಿದ್ದರು. ಎಲ್ಲಾ ಜಲಾಶಯಗಳ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸ ಲಾಗುವುದು. ಆಗಸ್ಟ್ 1 ರಿಂದ ತಾರಕ ಎಡೆದಂಡೆ ನಾಲೆ ಮೂಲಕ ಹೆಬ್ಬಾಳ ಜಲಾಶಯ ತುಂಬಿಸಲಾಗುತ್ತಿದೆ. ಭಾರಿ ಮಳೆಯಿಂದ ತಾಲ್ಲೂಕಿನ ಹಲವು ಕಡೆ ಮನೆಗಳು ಮತ್ತು ಗೋಡೆಗಳು ಕುಸಿದು ಬಿದ್ದಿವೆ. ಗ್ರಾಮಲೆಕ್ಕಿಗರು ಮನೆಗಳಿಗೆ ಭೇಟಿ ನೀಡಿ ವರದಿಯನ್ನು ನೀಡುವಂತೆ ತಹಶೀಲ್ದಾರ್ ಅವರಿಗೆ ತಿಳಿಸಿದ್ದೇನೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೆಂಕಟಸ್ವಾಮಿ, ಪಿ.ರವಿ, ಎಂ.ಸಿ. ದೊಡ್ಡನಾಯಕ, ಚಾ. ನಂಜುಂಡ ಮೂರ್ತಿ, ನರಸಿಂಹೇಗೌಡ, ಬಾಸ್ಕರ್, ರಾಮು, ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಟೇಶ್, ಹೋ.ಕೆ. ಮಹೇಂದ್ರ, ಉಡನಾಗರಾಜು, ಚಂದ್ರು, ಶಿವರಾಜು, ಅನಿಲ್, ಪುಟ್ಟಬಸವ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.