ADVERTISEMENT

ದೇಶದಲ್ಲಿ ದಲಿತರಿಗೆ ರಕ್ಷಣೆಯಿಲ್ಲ

ಕಾಂಗ್ರೆಸ್‌, ಬಿಜೆಪಿ ವಿರುದ್ಧ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 12:53 IST
Last Updated 26 ಏಪ್ರಿಲ್ 2018, 12:53 IST
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರು ಜನರತ್ತ ಕೈಬೀಸಿದರು. ಎಚ್‌.ಡಿ.ದೇವೇಗೌಡ ಇದ್ದಾರೆ
ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರು ಜನರತ್ತ ಕೈಬೀಸಿದರು. ಎಚ್‌.ಡಿ.ದೇವೇಗೌಡ ಇದ್ದಾರೆ   

ಮೈಸೂರು: ದಲಿತರ ಏಳಿಗೆಗೆ ಯಾವುದೇ ಕೆಲಸ ಮಾಡದ ಕಾಂಗ್ರೆಸ್‌ ಪಕ್ಷ ಅಂಬೇಡ್ಕರ್‌ ಹೆಸರಿನಲ್ಲಿ ದಲಿತರ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಟೀಕಿಸಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ನಡೆದ ‘ಕುಮಾರ ಪರ್ವ’ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಲವು ವರ್ಷ ದೇಶದಲ್ಲಿ ಆಡಳಿತ ನಡೆಸಿರುವ ಕಾಂಗ್ರೆಸ್‌ ಪಕ್ಷ ದಲಿತರ ಮತ್ತು ಆದಿವಾಸಿಗಳ ಏಳಿಗೆಗೆ ದುಡಿದಿಲ್ಲ. ಆದರೆ, ಚುನಾವಣೆ ಸಮಯದಲ್ಲಿ ಆ ಪಕ್ಷಕ್ಕೆ ದಲಿತರ ನೆನಪಾಗುತ್ತದೆ ಎಂದು ದೂರಿದರು.

ADVERTISEMENT

ಬಿಜೆಪಿ ಸರ್ಕಾರದಲ್ಲಿ ದಲಿತರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಗುಜರಾತ್‌, ಉತ್ತರ ಪ್ರದೇಶ ಮತ್ತು ದೇಶದ ಇತರ ಭಾಗಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ ಎಂದು ಹೇಳಿದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮಾತನಾಡಿ, ‘ಮೈಸೂರು ಮತ್ತು ಚಾಮರಾಜನಗರದಲ್ಲಿ 9 ರಿಂದ 10 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿ. ಜೆಡಿಎಸ್‌ ಮತ್ತು ಬಿಎಸ್‌ಪಿ ಕಾರ್ಯಕರ್ತರು ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕು’ ಎಂದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ‘ನಾನು 20 ತಿಂಗಳ ಆಡಳಿತದ ಅವಧಿಯಲ್ಲಿ ಮೈಸೂರಿಗೆ ನೀಡಿದ್ದಷ್ಟು ಕೊಡುಗೆಯನ್ನು ಸಿದ್ದರಾಮಯ್ಯ ಐದು ವರ್ಷಗಳಲ್ಲಿ ಕೊಟ್ಟಿಲ್ಲ’ ಎಂದು ಹೇಳಿದರು.

ದೇವೇಗೌಡ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಲು ಆಗಿಲ್ಲ ಎಂದು ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಮಾತನಾಡುತ್ತಾ ಹೇಳಿದ್ದಾರೆ. ಅಂದು ದೇವೇಗೌಡ ಅವರ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದವರು ಈ ಪುಣ್ಯಾತ್ಮ ಸಿದ್ದರಾಮಯ್ಯ. ಅವರಿಗೆ ಆ ವಿಷಯ ಮರೆತೇ ಹೋಗಿದೆ ಎಂದು ಲೇವಡಿ ಮಾಡಿದರು.

ಕರ್ನಾಟಕದಲ್ಲಿ ಜೆಡಿಎಸ್‌ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವುದು ಕಷ್ಟ. ಆದ್ದರಿಂದ ಬಿಜೆಪಿ ಜತೆ ಕೈಜೋಡಿಸಲಿದೆ ಎಂದು ದೆಹಲಿಯಲ್ಲಿ ಕೆಲವು ಮುಖಂಡರು ಮಾಯಾವತಿ ಅವರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ, ಅಂತಹ ಕೀಳುಮಟ್ಟದ ರಾಜಕಾರಣಕ್ಕೆ ಸೊಪ್ಪುಹಾಕದ ಅವರು ನಮ್ಮ ಮೇಲೆ ವಿಶ್ವಾಸವಿಟ್ಟು ಬೆಂಬಲ ನೀಡಿದ್ದಾರೆ ಎಂದರು.

ಕಾರ್ಯಕ್ರಮ ಸಮಾಧಾನ ತಂದಿಲ್ಲ: ‘ನಿರೀಕ್ಷಿಸಿದಷ್ಟು ಜನ ಸೇರದ ಕಾರಣ ಈ ಕಾರ್ಯಕ್ರಮ ನನಗೆ ಸಮಾಧಾನ ತಂದಿಲ್ಲ. ಇಲ್ಲಿನ ನಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯ ಕಡೆ ಗಮನ ಕೇಂದ್ರೀಕರಿಸಿದ್ದರು. ಆದ್ದರಿಂದ ಕಾರ್ಯಕ್ರಮ ಸಂಘಟಿಸುವಲ್ಲಿ ಸ್ವಲ್ಪ ನಿರ್ಲಕ್ಷ್ಯ ತೋರಿದ್ದಾರೆ. ನನ್ನ ನಿರೀಕ್ಷೆಗೆ ತಕ್ಕಂತೆ ಆಗದ ಕಾರಣ ಸ್ವಲ್ಪ ನಿರಾಸೆಯಾಗಿದೆ’ ಎಂದು ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್‌ ಅಲಿ, ಮುಖಂಡರಾದ ಅಶೋಕ್‌ ಸಿದ್ಧಾರ್ಥ್‌, ಸತೀಶ್‌ ಚಂದ್ರ ಪಾಲ್ಗೊಂಡಿದ್ದರು.

ಕಾದುಕುಳಿತ ಅಪ್ಪ–ಮಗ

ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಮಾಯಾವತಿ ಅವರಿಗಾಗಿ ವೇದಿಕೆಯಲ್ಲಿ ಸುಮಾರು 20 ನಿಮಿಷ ಕಾದು ಕುಳಿತರು. ಸಮಾವೇಶ ಎರಡೂವರೆ ಗಂಟೆ ತಡವಾಗಿ ಆರಂಭವಾಯಿತು. ಮೊದಲು ದೇವೇಗೌಡ ಅವರು ವೇದಿಕೆಗೆ ಬಂದರು. ಐದು ನಿಮಿಷ ಕಳೆದು ಕುಮಾರಸ್ವಾಮಿ ಬಂದರು. ಇಬ್ಬರು ಕೆಲಹೊತ್ತು ಕಾದು ಕುಳಿತರೂ ಮಾಯಾವತಿ ಬರಲಿಲ್ಲ. ಇದರಿಂದ ದೇವೇಗೌಡ ಅವರು ಭಾಷಣ ಆರಂಭಿಸಿದರು. ಅವರು ಭಾಷಣ ಮುಗಿಸಿ ಕೆಲಸಮಯ ಕಳೆದ ಬಳಿಕ ಮಾಯಾವತಿ ಬಂದರು.

‘ನಿಷ್ಠಾವಂತ ಕಾರ್ಯಕರ್ತರಿದ್ದಾರೆ’

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದಾಗ ಮರಿಸ್ವಾಮಿ ಎಂಬ ದಲಿತ ವ್ಯಕ್ತಿಯನ್ನು ಕಾಂಗ್ರೆಸ್‌ಗೆ ಕರೆದಿದ್ದಾರೆ. ಆತ ನೇರವಾಗಿ ‘ನಾನು ನಿಮ್ಮ ಪಕ್ಷಕ್ಕೆ ಬರುವ ಪ್ರಶ್ನೆಯೇ ಇಲ್ಲ. ನಿಮ್ಮ ವಿರುದ್ಧವಾಗಿ ನಿರ್ಣಯ ಮಾಡಿದ್ದೇವೆ. ಜಾಗ ಖಾಲಿ ಮಾಡಿ’ ಎಂದು ಉತ್ತರ ಕೊಟ್ಟಿದ್ದಾನೆ ಎಂದು ಕುಮಾರಸ್ವಾಮಿ ಭಾಷಣದ ವೇಳೆ ಹೇಳಿದರು.

ಜೆಡಿಎಸ್‌ ಮತ್ತು ಬಿಎಸ್‌ಪಿಯಲ್ಲಿ ಅಂತಹ ನಿಷ್ಠಾವಂತ ಕಾರ್ಯಕರ್ತರು ಇರುವ ಕಾರಣ ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.