ADVERTISEMENT

ದೇಶ ರಕ್ಷಿಸುವ ಸಮರ್ಥರು ಪ್ರಧಾನಿಯಾಗಲಿ

ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2014, 9:33 IST
Last Updated 19 ಮಾರ್ಚ್ 2014, 9:33 IST

ಕುಶಾಲನಗರ: ದೇಶದ ಮೂರು ಕಡೆಗಳಿಂದ ನಾಡಿನ ಮೇಲೆ ಆಕ್ರಮಣ, ಸೈನಿಕರ ಹತ್ಯೆ ನಡೆಯುತ್ತಿದ್ದರೂ ಗೊಂಬೆಯಂತೆ ವರ್ತಿಸುತ್ತಿರುವ ಪ್ರಧಾನಿ ಬದಲು ದೇಶದ ನಾಡಿ ಮಿಡಿತ ತಿಳಿದು ಕೆಲಸ ಮಾಡುವ ಪ್ರಧಾನಿ ಬೇಕಾಗಿದೆ. ಹೀಗಾಗಿ ಮೋದಿ ಅವರನ್ನು ಪ್ರಧಾನಿಯಾಗಿಸಬೇಕಾದ ಅಗತ್ಯವಿದೆ ಎಂದು ಮೈಸೂರು ಕೊಡಗು ಬಿಜೆಪಿ ಲೋಕಸಭಾ ಅಭ್ಯರ್ಥಿ ಪ್ರತಾಪ ಸಿಂಹ ಹೇಳಿದರು.

ಕುಶಾಲನಗರದ ಎಪಿಸಿಎಂಎಸ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಸೈನಿಕರನ್ನು ಶಿರಚ್ಛೇದನ ಮಾಡಿದರೂ ತುಟಿ ಬಿಚ್ಚದ ನಾಯಕರು ನಮಗೆ ಬೇಕೆ ಎಂದು ಪ್ರಶ್ನಿಸಿದರು. ಕೊಡಗಿನ ಜನರು ವೀರರು. ದೇಶದ ಸೈನ್ಯಕ್ಕೆ ಅಪಾರ ಕೊಡುಗೆ ನೀಡಿರುವ ಕೊಡಗಿನ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದಕ್ಕೆ ಸಾಕಷ್ಟು ಸಂತಸ ತಂದಿದೆ ಎಂದರು.

ಕೊಡಗಿನ ಜನತೆಯಲ್ಲಿ ಪ್ರಜ್ಞಾ­ವಂತಿಕೆ ಮತ್ತು ದೇಶಭಕ್ತಿ ಇದೆ. ಹೀಗಾಗಿ ಜನರು ದೇಶದ ಹಿತಾಸಕ್ತಿಗಾಗಿ ಮೋದಿಯನ್ನು ಪ್ರಧಾನಿಯನ್ನಾಗಿಸಲು ಬೆಂಬಲಿಸುವರೆಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಮೋದಿ­ಅವರ ಚಿಂತನೆ ಗುಜರಾತಿಗಷ್ಟೆ ಸೀಮಿತವಾಗುವ ಬದಲು ಅದನ್ನು ರಾಷ್ಟ್ರದ ಅಭಿವೃದ್ಧಿಗೆ ಹರಿಬಿಡ­ಬೇಕಾಗಿದೆ. ಇದಕ್ಕಾಗಿ ಬಿಜೆಪಿ ಕಾರ್ಯಕರ್ತರು ನಮ್ಮ ಅಭ್ಯರ್ಥಿ ಗೆಲ್ಲುವರೆಂಬ ಅತಿಯಾದ ಆತ್ಮ ವಿಶ್ವಾಸದಿಂದ ಇರುವ ಬದಲು ಮೋದಿ ಅಲೆಯನ್ನು ಮತವಾಗಿ ಪರಿವರ್ತಿಸು­ವಂತೆ ಕಿವಿಮಾತು ಹೇಳಿದರು.

ವೇದಿಕೆಯಲ್ಲಿ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ವಿಧಾನ ಪರಿಷತ್‌ ಸದಸ್ಯ ಎಸ್‌.ಜಿ. ಮೇದಪ್ಪ, ಜಿಲ್ಲಾಧ್ಯಕ್ಷ ಸುಜಾ­ಕುಶಾಲಪ್ಪ, ಪತ್ರಿಕಾ ವಕ್ತಾರ ಅಡ್ಡಂಡ ಸಿ. ಕಾರ್ಯಪ್ಪ, ಸುನಿಲ್ ಸುಬ್ರಹ್ಮಣಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಿ.ಕೆ. ತಿಮ್ಮಪ್ಪ ನಗರಾಧ್ಯಕ್ಷ ವಿಜಯ್‌ ಕುಮಾರ್ ಇದ್ದರು.

ಬಳಿಕ ಪಟ್ಟಣದ ಬೈಚನಹಳ್ಳಿ ಮಾರಿಯಮ್ಮ ದೇವಾಲಯದ ಬಳಿಯಿಂದ ನಡೆದ ರೋಡ್‌ಷೋನಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ಪ, ಎಸ್‌.ಎನ್. ರಾಜಾರಾವ್, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರು ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು. ಬಳಿಕ ಪಟ್ಟಣದ ಕಾರು ನಿಲ್ದಾಣದಲ್ಲಿ ಬಹಿರಂಗ ಸಭೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.