ADVERTISEMENT

ದೋಷ; ಹಲವೆಡೆ ಮತಯಂತ್ರ ಬದಲು

ಗಮನಸೆಳೆದ ಮಾದರಿ ಹಾಗೂ ಪಿಂಕ್‌ ಮತಗಟ್ಟೆ

​ಪ್ರಜಾವಾಣಿ ವಾರ್ತೆ
Published 13 ಮೇ 2018, 7:25 IST
Last Updated 13 ಮೇ 2018, 7:25 IST

ನಂಜನಗೂಡು: ಕ್ಷೇತ್ರದಾದ್ಯಂತ ಹಲವೆಡೆ ಮತಯಂತ್ರ ದಲ್ಲಿ ದೋಷ ಕಂಡು ಬಂದಿದ್ದರಿಂದ ಬದಲಾಯಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಯಿತು. ಬೆಳಿಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಬಂದು ತಮ್ಮ ಹಕ್ಕು ಚಲಾಯಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಳಲೆ ಕೇಶವಮೂರ್ತಿ ತಮ್ಮ ಸ್ವಗ್ರಾಮ ಕಳಲೆಯಲ್ಲಿ ಬೆಳಿಗ್ಗೆ ಮತ ಚಲಾಯಿಸಿದರೆ, ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್ ಬೆಳಿಗ್ಗೆ ಬೆಂಗಳೂರಿನಲ್ಲಿ ಮತ ಚಲಾಯಿಸಿ ನಂತರ ನಂಜನಗೂಡಿಗೆ ಬಂದರು. ಜೆಡಿಎಸ್ ಅಭ್ಯರ್ಥಿ ದಯಾನಂದಮೂರ್ತಿ ವರುಣಾ ವಿಧಾನಸಭಾ ಕ್ಷೇತ್ರದ ಹೆಜ್ಜಿಗೆ ಗ್ರಾಮದಲ್ಲಿ ಮತ ಚಲಾಯಿಸಿ ನಂತರ ಗ್ರಾಮೀಣ ಪ್ರದೇಶದಲ್ಲಿ ಸುತ್ತಾಡಿದರು.

ಬೆಳಿಗ್ಗೆ ಚುರುಕಿನಿಂದ ಆರಂಭ ಗೊಂಡ ಮತದಾನ ಮಧ್ಯಾಹ್ನ 12ರ ಸಮಯಕ್ಕೆ ಶೇ 40, ಮಧ್ಯಾಹ್ನ 3 ಗಂಟೆ ವೇಳೆಗೆ ಶೇ 52 ತಲುಪಿತ್ತು. ನಂತರ ಸ್ವಲ್ಪ ಮಂದಗತಿಯಲ್ಲಿ ಸಾಗಿ, ಸಂಜೆ 4ರ ನಂತರ ಮತ್ತೆ ಬಿರುಸು ಪಡೆದುಕೊಂಡಿತು.

ADVERTISEMENT

ಹತ್ತು ಕಡೆ ಮತಯಂತ್ರ ಬದಲು: ತಾಲ್ಲೂಕಿನ ವಳಗೆರೆ, ದೇವೀರಮ್ಮನಹಳ್ಳಿ, ಮೂಡಲಹುಂಡಿ, ಹಗಿನವಾಳು, ಕಸುವಿನಹಳ್ಳಿ, ಕೂಡ್ಲಾಪುರ, ದೊಡ್ಡಕವಲಂದೆ, ಹರತಲೆ, ಲಕ್ಷಣಾಪುರ ಹಾಗೂ ತರಗನಹಳ್ಳಿ ಸೇರಿದಂತೆ 10 ಮತಕೇಂದ್ರಗಳಲ್ಲಿ ವಿ.ವಿ.ಪ್ಯಾಟ್ ಕೈಕೊಟ್ಟಿದ್ದರಿಂದ ತಕ್ಷಣ ಯಂತ್ರಗಳನ್ನು ಬದಲಾಯಿಸಿ ಮತ್ತೆ ಮತದಾನ ಮುಂದುವರಿಸಲಾಯಿತು. ಪ್ರಮುಖ ಪಕ್ಷದ ಅಭ್ಯರ್ಥಿಗಳು ಮತ ಕೇಂದ್ರಗಳಿಗೆ ತೆರಳಿ ಮತದಾರರನ್ನು ಭೇಟಿಯಾಗುವ ಮೂಲಕ ಕೊನೆ ಕ್ಷಣದಲ್ಲಿ ಮತಗಳಿಸುವ ಪ್ರಯತ್ನ ನಡೆಸಿದರು.

ಗಮನ ಸೆಳೆದ ಮಾದರಿ ಮತಕೇಂದ್ರ: ತಾಲ್ಲೂಕಿನ ಕುಂಬರಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 165ನ್ನು ಮಾದರಿ ಮತದಾನ ಕೇಂದ್ರ ಎಂದು ಘೋಷಿಸಿ ಮತದಾನ ಕೇಂದ್ರದಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಮತಚಲಾಯಿಸಲು ಆಗಮಿಸುವ ಮತದಾರರಿಗೆ ಗುಲಾಬಿ ಹೂಗಳನ್ನು ನೀಡಿ ಸ್ವಾಗತಿಸಿದ ಮತ ಕೇಂದ್ರದ ಅಧಿಕಾರಿಗಳು ಮತ ಚಲಾಯಿಸಿದವರಿಗೆ ಧನ್ಯವಾದವನ್ನು ಹೇಳುವ ಶುಭಾಶಯ ಕರಪತ್ರವನ್ನೂ ನೀಡುವ ಮೂಲಕ ಗಮನ ಸೆಳೆದರು.

ಉಳಿದಂತೆ ನಂಜನಗೂಡು ನಗರಸಭೆ ಆವರಣದಲ್ಲಿ ತೆರೆಯಲಾಗಿದ್ದ ಮತಗಟ್ಟೆ ಸಂಖ್ಯೆ 38ರಲ್ಲಿ ಮತಯಂ ತ್ರದ ದೋಷದಿಂದಾಗಿ ಬೆಳಿಗ್ಗೆ 1ಗಂಟೆ ತಡವಾಗಿ ಮತದಾನ ಆರಂಭ ಗೊಂಡಿತು. ನಗರದ ಚಾಮಲಾಪುರದ ಹುಂಡಿಯಲ್ಲಿ ತೆರೆಯಲಾಗಿದ್ದ ಪಿಂಕ್ ಮತಗಟ್ಟೆಯಲ್ಲಿ ಸಿಬ್ಬಂದಿ ಗುಲಾಬಿ ವಸ್ತ್ರಧಾರಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಗಮನ ಸೆಳೆದರು.

ವರುಣಾದಲ್ಲೂ ಶಾಂತಿಯುತ ಮತದಾನ: ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ಜರುಗಿತು. ಬೆಳಿಗ್ಗೆ ಮತದಾನ ಆರಂಭವಾಗುತ್ತಿದ್ದಂತೆ ಕ್ಷೇತ್ರ ವ್ಯಾಪ್ತಿಯ ಗೆಜ್ಜಗನಹಳ್ಳಿಯಲ್ಲಿ ವಿವಿ ಪ್ಯಾಟ್ ಯಂತ್ರದಲ್ಲಿ ದೋಷ ಕಂಡು ಬಂದ ಹಿನ್ನಲೆಯಲ್ಲಿ ತಕ್ಷಣ ಸ್ಥಳಕ್ಕಾಗಮಿಸಿದ ಬಿಇಎಲ್ ಎಂಜಿನಿಯರ್‌ಗಳು ಯಂತ್ರವನ್ನು ಬದಲಾಯಿಸುವ ಮೂಲಕ ಮತದಾನ ಸುಗಮವಾಗಿ ನಡೆಯುವಂತೆ ನೋಡಿಕೊಂಡರು. ಸಂಜೆ ಮತದಾನ ಮುಗಿದ ನಂತರ ಬಿಗಿ ಭದ್ರತೆಯೊಂದಿಗೆ ನಗರದ ದೇವೀ ರಮ್ಮನಹಳ್ಳಿಯಲ್ಲಿರುವ ಜೆಎಸ್‍ಎಸ್ ಪದವಿ ಕಾಲೇಜು ಆವರಣದ ಮಸ್ಟರಿಂಗ್ ಕೇಂದ್ರಕ್ಕೆ ಮತಯಂತ್ರಗಳನ್ನು ತಂದು ಅನಂತರ ಸುರಕ್ಷಿತವಾಗಿ ಮೈಸೂರಿಗೆ ಕೊಂಡೊಯ್ಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.