ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿ ಮಾನವ ಹಾಗೂ ಪ್ರಾಣಿ ಸಂಘರ್ಷಕ್ಕೆ ಅಂತ್ಯ ಹಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ತಾಲ್ಲೂಕಿನ ಹಲವು ಕಾಡಂಚಿನ ಗ್ರಾಮಗಳಿಗೆ ಜರ್ಮನ್ ಅಧ್ಯಯನ ತಂಡ ಗುರುವಾರ ಭೇಟಿ ನೀಡಿ ಮಾಹಿತಿ ಕಲೆಹಾಕಿತು. ವೀರನಹೊಸಹಳ್ಳಿ ವಲಯದಂಚಿನ ಗ್ರಾಮಗಳ ರೈತರೊಂದಿಗೆ ಸಂವಾದ ನಡೆಸಿ ಮಾಹಿತಿ ಪಡೆಯಿತು.
‘ಇಂಡೋ– ಜರ್ಮನ್ ಆಶ್ರಯದಲ್ಲಿ ಸಮಸ್ಯೆಗೆ ಹೊಸ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧ್ಯಯನ ನಡೆಸಲಾಗುತ್ತಿದೆ. ಅಧ್ಯಯನದ ಬಳಿಕ ವರದಿ ಸಿದ್ಧಪಡಿಸಿ ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ನೀಡಲಾಗುವುದು’ ಎಂದು ಜರ್ಮನ್ ದೇಶದ ಅರಣ್ಯ ಸಂರಕ್ಷಣಾಧಿಕಾರಿ ಸ್ಟೀಫನ್ ಬರ್ಗ್ ತಿಳಿಸಿದರು.
‘ಪುಣೆ ಮೂಲದ ಸ್ವಯಂ ಸೇವಾ ಸಂಸ್ಥೆದೊಂದಿಗೆ ಭಾರತ ಮತ್ತು ಜರ್ಮನ್ ದೇಶಗಳು ಅಧ್ಯಯನ ನಡೆಸುತ್ತಿದ್ದು, ಆ.24ರಂದು ಪೂರ್ಣಗೊಳ್ಳಲಿದೆ. ಸ್ಥಳೀಯರ ಮಾಹಿತಿ ಆಧರಿಸಿ ಹೊಸ ಯೋಜನೆ ಸಿದ್ಧಪಡಿಸ ಲಾಗುವುದು’ ಎಂದರು.
ರಾಜ್ಯದ ‘ಹುಲಿ ಯೋಜನೆ’ಯ ಕ್ಷೇತ್ರ ನಿರ್ದೇಶಕ ರಂಗರಾಜ್ ಮಾತನಾಡಿ, ‘ಜರ್ಮನ್ ಅಧಿಕಾರಿಗಳು ನಾಗರಹೊಳೆ ಸುತ್ತಮುತ್ತಲಿನ ಗ್ರಾಮ ಹಾಗೂ ಬಂಡೀಪುರ, ಓಂಕಾರ, ಯಡಿಯಾಳ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಮೈಸೂರು ಭಾಗದಲ್ಲಿ ಎಲ್ಲಿ ಹೆಚ್ಚಿನ ಮಟ್ಟದಲ್ಲಿ ಮಾನವ ಹಾಗೂ ಪ್ರಾಣಿ ನಡುವೆ ಸಂಘರ್ಷ ಇದೆಯೋ ಅಂಥಹ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸ ಲಾಗುತ್ತದೆ. ವರದಿ ಸಿದ್ಧಪಡಿಸಿ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ನೀಡಲಿದ್ದಾರೆ’ ಎಂದು ಹೇಳಿದರು.
‘ಅರಣ್ಯದಂಚಿನ ಪ್ರದೇಶಗಳ ಜನರ ಆರ್ಥಿಕ ಸ್ಥಿತಿ–ಗತಿ, ಬೇಸಾಯ ಮಾದರಿ, ಹೈನುಗಾರಿಕೆ ಕುರಿತು ವಿವರಣೆ ಪಡೆಯಲಾಗುತ್ತಿದೆ. ಕಾಡುಪ್ರಾಣಿಗಳಿಂದ ಉಂಟಾಗುವ ಬೆಳೆ ನಷ್ಟಕ್ಕೆ ಸರ್ಕಾರ ನೀಡುತ್ತಿರುವ ಪರಿಹಾರ ತೃಪ್ತಿ ಇದೆಯೋ ಅಥವಾ ಇಲ್ಲವೋ ಎಂಬ ವಿಚಾರವಾ ಗಿಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.