ADVERTISEMENT

ನಾಲೆಗೆ ಎಸೆದು ಹಸುಳೆ ಕೊಲೆ: ತಾಯಿ ಬಂಧನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 9:44 IST
Last Updated 25 ಜೂನ್ 2013, 9:44 IST
ಹಸುಗೂಸನ್ನು ನಾಲೆಗೆ ಬಿಸಾಡಿ ಕೊಲೆ ಮಾಡಿದ ಸುಮಯಾ ಖಾನಂಳ ಸಹೋದರ ಇಮ್ರಾನ್‌ನನ್ನು ಮೈಸೂರಿನ ಎಸಿಪಿ (ಎನ್.ಆರ್. ವಿಭಾಗ) ಕಚೇರಿಗೆ ಪೊಲೀಸರು ಸೋಮವಾರ ಕರೆತಂದರು.
ಹಸುಗೂಸನ್ನು ನಾಲೆಗೆ ಬಿಸಾಡಿ ಕೊಲೆ ಮಾಡಿದ ಸುಮಯಾ ಖಾನಂಳ ಸಹೋದರ ಇಮ್ರಾನ್‌ನನ್ನು ಮೈಸೂರಿನ ಎಸಿಪಿ (ಎನ್.ಆರ್. ವಿಭಾಗ) ಕಚೇರಿಗೆ ಪೊಲೀಸರು ಸೋಮವಾರ ಕರೆತಂದರು.   

ಮೈಸೂರು: ಹುಟ್ಟಿದಾಗಿನಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ 20 ದಿನದ ಹೆಣ್ಣುಮಗುವಿನ ಆಸ್ಪತ್ರೆ ವೆಚ್ಚ ಭರಿಸಲು ಸಾಧ್ಯವಾಗದ ತಾಯಿ, ನಾಲೆಗೆ ಮಗುವನ್ನು ಬಿಸಾಡಿ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಮಗುವನ್ನು ಕೊಂದ ತಾಯಿ ಮತ್ತು ಈಕೆಯ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.

ಶಾಂತಿನಗರ ನಿವಾಸಿ ಫೈರೋಜ್ ಪತ್ನಿ ಸುಮಯಾ ಬಾನು ಮತ್ತು ಸಹೋದರ ಇಮ್ರಾನ್ ಬಂಧಿತರು. ಜೋಯಾಖಾನಂ ಕೊಲೆಯಾದ ಮಗು.
ನ್ಯುಮೊನಿಯಾ ಕಾಯಿಲೆಯಿಂದ ಜೋಯಾ ಖಾನಂ ಬಳಲುತ್ತಿದ್ದಳು. ನಗರದ ಮಿಷನ್ ಆಸ್ಪತ್ರೆ ಮತ್ತು ಚಿತ್ರಾ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಮಗು ಗುಣಮುಖವಾಗಿರಲಿಲ್ಲ. ಈಚೆಗೆ ಮಿಷನ್ ಆಸ್ಪತ್ರೆಗೆ ದಾಖಲು ಮಾಡಲಾಗಿ ಆಸ್ಪತ್ರೆ ವೆಚ್ಚ ಹೆಚ್ಚಾಗಿತ್ತು. ಅಲ್ಲದೇ ಪತಿ ಫೈರೋಜ್ ಮೇಲೆ ಕಳವು ಪ್ರಕರಣಗಳಿದ್ದು,   ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದರು. ಕಳ್ಳನ ಮಗಳೆಂದು ತನ್ನ ಮಗುವನ್ನು ಜನರು ಗುರುತಿಸುವುದಾಗಿ ಸುಮಯಾ ನೊಂದಿದ್ದರು. ಹಾಗಾಗಿ ಕೊಲೆ ಮಾಡಲು ನಿರ್ಧರಿಸಿದ್ದರು.

ಜೂನ್ 20ರಂದು ಮಗುವಿನೊಂದಿಗೆ ಅಶೋಕ ರಸ್ತೆಗೆ ಬಂದ ಸುಮಯಾ ಚಿನ್ನದ ಸರವನ್ನು ಅಡವಿಟ್ಟು ರೂ 40 ಸಾವಿರ ಹಣ ಪಡೆದರು. ಅಂಗಡಿಯಿಂದ ಹೊರಬಂದು ವೃತ್ತಿಯಲ್ಲಿ ಆಟೋ ಚಾಲಕನಾದ ಸಹೋದರ ಇಮ್ರಾನ್‌ನನ್ನು ಕರೆಸಿಕೊಂಡರು. ಆಟೋ ಹತ್ತಿ ಮಗುವಿನೊಂದಿಗೆ ತೆರಳಿದರು. ಎಲ್ಲಿಗೆ ಹೋಗುತ್ತಿರುವುದಾಗಿ ಇಮ್ರಾನ್‌ಗೆ ತಿಳಿಸಲಿಲ್ಲ. ಬೆಂಗಳೂರು ರಸ್ತೆಯ ಮಿರ್ಜಾ ನಾಲೆ ಬಳಿ ಇಳಿದ ಸುಮಯಾ ನಾಲೆಗೆ ಮಗುವನ್ನು ಬಿಸಾಡಿ ಬಂದರು.

ಅಪಹರಣ ನಾಟಕ: ಜುವೆಲ್ಲರಿ ಅಂಗಡಿಯಿಂದ ಹೊರಬಂದ ಕೂಡಲೇ ಮುಸುಕುಧಾರಿ ವ್ಯಕ್ತಿಗಳು ವ್ಯಾನ್‌ನಲ್ಲಿ ನನ್ನನ್ನು ಮತ್ತು ಮಗುವನ್ನು ಅಪಹರಿಸಿದರು. ಮಾರ್ಗಮಧ್ಯೆ ನನ್ನನ್ನು ವ್ಯಾನ್‌ನಿಂದ ಇಳಿಸಿ ಮಗುವನ್ನು ನಾಲೆಗೆ ಬಿಸಾಡಿ ಪರಾರಿಯಾಗಿದ್ದರು ಎಂದು ಪ್ರಕರಣವನ್ನು ಮುಚ್ಚಿ ಹಾಕುವ ಸಲುವಾಗಿ ಸುಮಯಾ ಜೂನ್ 21ರಂದು ಪೊಲೀಸರಿಗೆ ಸುಳ್ಳು ದೂರು ನೀಡಿ ನಾಟಕವಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸುಮಯಾ ಖಾನಂ ಮತ್ತು ಇಮ್ರಾನ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.