ADVERTISEMENT

ನಿರ್ಗತಿಕರಿಗೆ ಅಕ್ಷಯ ಪಾತ್ರೆ ಕೊಟ್ಟ ಕೃಷ್ಣ!

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 8:55 IST
Last Updated 6 ಜುಲೈ 2012, 8:55 IST

ಮೈಸೂರು: `ನಿರ್ಗತಿಕರಿಗೆ ಅನ್ನ ನೀಡುವುದೇ ಪಾಪವಾಗುವುದಾದರೆ ನನಗೆ ಈ ಜನಿವಾರವೂ (ಯಜ್ಞೋಪವೀತ) ಬೇಡ, ನಿಮ್ಮ ಜಾತಿಯೂ ಬೇಡ ಎಂದು ಜನಿವಾರವನ್ನು ಬೆಂಕಿಗೆ ಹಾಕಿಬಿಟ್ಟೆ~-

ಅಂದು ಕುಲಬಾಂಧವರಿಂದ ಅವಹೇಳನಕ್ಕೆ ಒಳಗಾದರೂ ಮಾನವಧರ್ಮವೇ ದೊಡ್ಡದು ಎಂದು ಛಲ ಬಿಡದೇ ಸೇವಾ ಕಾಯಕ ಮುಂದುವರೆಸಿದ ಮಧುರೈನ ನಾರಾಯಣ ಕೃಷ್ಣನ್ ಅವರನ್ನು ಇವತ್ತು ದೇಶ, ವಿದೇಶಗಳ ಜನರೂ ಹಾಡಿ ಹೊಗಳುತ್ತಿದ್ದಾರೆ.

ಮಧುರೈನ ಬೀದಿಗಳಲ್ಲಿ ಅನಾಥರಾಗಿ ಅಲೆಯುವ ನೂರಾರು ವಯೋವೃದ್ಧರು ಮತ್ತು ಮಾನಸಿಕ ಅಸ್ವಸ್ಥರಿಗೆ ಕೃಷ್ಣನ್ `ಅಕ್ಷಯ~ ಪಾತ್ರೆಯೇ ಆಗಿದ್ದಾರೆ. ಸಿಎನ್‌ಎನ್ ವಾಹಿನಿಯು ವಿಶ್ವದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಸೇವಾ ಕ್ಷೇತ್ರ ಟಾಪ್ 10 ಹೀರೋ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಇವರು.

ತಮಿಳುನಾಡಿನ ದೇವಾಲಯಗಳ ನಗರಿ ಮಧುರೈನ ಅಕ್ಷಯ~ಸ್ ಹೆಲ್ಪಿಂಗ್ ಇನ್ ಟ್ರಸ್ಟ್ ಸಂಸ್ಥಾಪಕ ಕೃಷ್ಣನ್ ಗುರುವಾರ ಮೈಸೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದದಲ್ಲಿ ತಮ್ಮ ಸೇವಾ ಕಾರ್ಯ ಬಿಡಿಸಿಟ್ಟರು.

`ನಾನು ಬಿಎಸ್ಸಿ ಹೋಟೆಲ್ ಮ್ಯಾನೇಜ್‌ಮೆಂಟ್ ಪದವೀಧರ. 19-20ನೇ ವಯಸ್ಸಿನಲ್ಲಿಯೇ ಪಂಚತಾರಾ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಶ್ರೀಮಂತ ಜನರ ಬದುಕು, ಆಹಾರ, ವಿಹಾರವನ್ನು ಹತ್ತಿರದಿಂದ ಕಂಡಿದ್ದೆ.

ಐಶ್ವರ್ಯವಂತನಾಗುವ ಮತ್ತು ವಿದೇಶದಲ್ಲಿ ಕೆಲಸ ಮಾಡುವ ಕನಸು ನನ್ನಲ್ಲಿಯೂ ಇತ್ತು. ಅಮೆರಿಕಕ್ಕೆ ಹೋಗುವ ಅವಕಾಶವು ಸಿಗುವುದರಲಿತ್ತು. ಅದೊಂದು ದಿನ ನನ್ನ ಕಾರಿನಲ್ಲಿ ಮನೆಗೆ ಹೋಗುತ್ತಿದ್ದೆ. ದಾರಿ ಪಕ್ಕದ ಕಸದ ತಿಪ್ಪೆಯತ್ತ ನನ್ನ ಗಮನ ಹೋಯಿತು. ಕಾರು ನಿಲ್ಲಿಸಿ ನೋಡಿದೆ. ಒಬ್ಬ ವೃದ್ಧ ಕಸದಲ್ಲಿ ಸೇರಿ ಹೋಗಿದ್ದ ಆಹಾರವನ್ನು ಹೆಕ್ಕಿ ತಿನ್ನುತ್ತಿದ್ದ. ನನಗೆ ಕರುಳು ಕಿವುಚಿ ಹೋಯಿತು. ಕೂಡಲೇ ಇಡ್ಲಿ ತಂದು ಆತನಿಗೆ ಕೊಟ್ಟೆ. ಕೆಲವೇ ಸೆಕೆಂಡುಗಳಲ್ಲಿ ಗಬಗಬನೆ ತಿಂದುಬಿಟ್ಟ. ತಿನ್ನುತ್ತಲೇ ನೀರು ತುಂಬಿದ ಕಣ್ಣುಗಳಿಂದ ನನ್ನನ್ನು ಧನ್ಯತಾ ಭಾವದಿಂದ ನೋಡಿದ ಆತ ಮನ ಕಲಕಿದ.

ಮುಂದೆ ನನ್ನ ದಿನಚರಿ ಏರುಪೇರಾಗಿ ಹೋಯಿತು. ನಾನೇಕೆ ಎಲ್ಲ ಬಿಟ್ಟು ವಿದೇಶಕ್ಕೆ ಹೋಗಬೇಕು. ನನ್ನ ಸುತ್ತಮುತ್ತಲು ಇಷ್ಟೊಂದು ನಿರ್ಗತಿಕರು ಇರುವಾಗ ನಾನು ಐಷಾರಾಮಿ ಜೀವನ ನಡೆಸುವುದು ನ್ಯಾಯವೇ? ಎಂಬ ಪ್ರಶ್ನೆಗಳು ತಲೆ ಕೆಡಿಸಿಬಿಟ್ಟವು. ಮೂರ‌್ನಾಲ್ಕು ದಿನ ನಿದ್ದೆಗೆಟ್ಟು ವಿಚಾರ ಮಾಡಿದೆ. ನಂತರ ಇಂತಹ ವೃದ್ಧರು, ನಿರ್ಗತಿಕರಿಗೆ ಆಸರೆ ಯಾಗುವ ನಿರ್ಧಾರದೊಂದಿಗೆ ಕೆಲಸ ಬಿಟ್ಟೆ, ವಿದೇಶಕ್ಕೆ ಹೋಗುವ ಅವಕಾಶವನ್ನೂ ಬಿಟ್ಟೆ. ನನ್ನ ಬಳಿ ಇದ್ದ ಹಣದಿಂದಲೇ ಮಧುರೈನ ನಿರ್ಗತಿಕ ಮಾನಸಿಕ ಅಸ್ವಸ್ಥ ರಿಗೆ ಊಟ ಹಾಕುವ ಕೆಲಸ ಆರಂಭಿಸಿದೆ. ಅವರಿಗೆ ಚಿಕಿತ್ಸೆ ಕೊಡಿಸುವ ಕಾರ್ಯ ಆರಂಭವಾಯಿತು.

ಆದರೆ ಇದಕ್ಕಾಗಿ ನಾನು ನನ್ನ ಕುಟುಂಬ, ಕುಲಬಾಂಧವರು ಮತ್ತು ಸ್ನೇಹಿತರ ಬಳಗದಿಂದ ತೀವ್ರ ಪ್ರತಿರೋಧ ಎದುರಿಸಿದೆ. ನಾನು ಕೆಲಸ ಬಿಟ್ಟಿದ್ದನ್ನು ತಿಳಿದ ತಂದೆ-ತಾಯಿ ನನ್ನನ್ನು ಮನೋವೈದ್ಯರ ಬಳಿ ಚಿಕಿತ್ಸೆಗೆ ಕರೆದೊಯ್ದರು, ನಾನು ಮಾಡುತ್ತಿರುವ ಕೆಲಸವನ್ನು ಸ್ವತಃ ಬಂದು ನೋಡಿದ ತಾಯಿ, ಬೆನ್ನು ತಟ್ಟಿ ಬೆಂಬಲ ಸೂಚಿಸಿದರು. ಅಕ್ಕಪಕ್ಕದ ಮನೆಯ ವರು, ಸಂಬಂಧಿಕರು ಮತ್ತು ಸ್ನೇಹಿತರು ನನ್ನೊಂದಿಗೆ ಮಾತನಾಡುತ್ತಿರಲಿಲ್ಲ. ಈ ನಿರ್ಗತಿಕರ ತಲೆಗೂದಲು ಕತ್ತರಿಸಲು ಕ್ಷೌರಿಕರು ಬರಲು ಒಪ್ಪಲಿಲ್ಲ. ಆಗ ನಾನೇ ಹೇರ್ ಕಟಿಂಗ್ ಮಾಡಿಕೊಂಡೆ.

ಕೆಲವು ಕಾಲದ ನಂತರ  ಸಹೃದಯಿ ನಾಗರಿಕರು ದಾನ ನೀಡತೊಡಗಿದರು. ಕಲಾವಿದರು ಧರ್ಮಾರ್ಥ ಪ್ರದರ್ಶನಗಳನ್ನು ನೀಡಿ ಸಂಗ್ರಹಿಸುವ ಹಣವನ್ನು ನಮಗೆ ಕೊಡುತ್ತಾರೆ. ಇದೀಗ ನಾವು ಆರು ಜನ ಸೇರಿ ಅಕ್ಷಯ ಚಾರಿಟೇಬಲ್ ಟ್ರಸ್ಟ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದೇವೆ. ಪ್ರತಿದಿನ 486 ನಿರ್ಗತಿಕರಿಗೆ ಊಟ ನೀಡುತ್ತಿದ್ದೇವೆ.

ಪುನಶ್ಚೇತನ ಕೇಂದ್ರ ಮತ್ತು ಆಸ್ಪತ್ರೆಯನ್ನು ನಿರ್ಮಿಸಲು ಆರಂಭಿಸಿದ್ದೇವೆ. ಒಟ್ಟು ಎಂಟು ಬ್ಲಾಕ್‌ಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಗೆ ಈ ಕಟ್ಟಡ ನಿರ್ಮಿಸಲಾಗುವುದು. ದಾನಿಗಳು ನೀಡುವ ಸಹಾಯಧನದೊಂದಿಗೆ ಮುಂದಿನ ಐದು ವರ್ಷಗಳಲ್ಲಿ ಸಂಪೂರ್ಣ ಯೋಜನೆ ಸಿದ್ಧಗೊಳ್ಳಲಿದೆ.

ಮಧುರೈಗೆ ಉತ್ತರ ಭಾರತದಿಂದ ಬರುವ ಬಹುತೇಕರು ತಮ್ಮ ಕುಟುಂಬಗಳ ವಯೋವೃದ್ಧ ಸದಸ್ಯರನ್ನು, ಮಾನಸಿಕ ಅಸ್ವಸ್ಥರನ್ನು ತೀರಾ ಅಮಾನವೀಯ ರೀತಿಯಲ್ಲಿ ಬಿಟ್ಟುಹೋಗುತ್ತಾರೆ.  ಮಧುರೈ ಜಿಲ್ಲೆ ಯನ್ನು ನಿರ್ಗತಿಕರಹಿತ ಪ್ರದೇಶವಾಗಿ ಮಾಡು ವುದು ನಮ್ಮ ಗುರಿ. ಬಹುಶಃ ನಾನು ವಿದೇಶಕ್ಕೆ ಹೋಗಿದ್ದರೆ ಬಹಳಷ್ಟು ಹಣ ಗಳಿಸುತ್ತಿದ್ದೆ. ಆದರೆ ಇವತ್ತು ಪಡೆಯುತ್ತಿರುವ ಆತ್ಮಾನಂದ, ಸಾರ್ಥಕ ಭಾವ ಸಿಗುತ್ತಿರಲಿಲ್ಲ. ನನ್ನ ಜೀವ ಇರುವವರೆಗೂ ಈ ಕೆಲಸ ಮುಂದುವರೆಸುತ್ತೇನೆ~ ಎಂದು ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.