ADVERTISEMENT

ನಿವೇಶನಗಳಿವೆ, ಫಲಾನುಭವಿಗಳು ಎಲ್ಲಿ?

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 7:10 IST
Last Updated 18 ಫೆಬ್ರುವರಿ 2011, 7:10 IST

ಸಾಲಿಗ್ರಾಮ: ಬಡಜನತೆಗೆ ಸೂರು ನೀಡಲು ಗ್ರಾಮ ಪಂಚಾಯಿತಿ ಭೂಮಿ ಖರೀದಿಸಿ 10 ವರ್ಷಗಳು ಕಳೆದರೂ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಸೌಲಭ್ಯ ಸಿಕ್ಕಿಲ್ಲ. ಒಂದೇ ಮನೆಯಲ್ಲಿ ಹಲವು ಕುಟುಂಬಗಳು ವಾಸ ಮಾಡುತ್ತಿವೆ. ಅಧಿಕಾರ ನಡೆಸಿದ ಯಾವುದೇ ಚುನಾಯಿತ ಪ್ರತಿನಿಧಿಗಳು ಇತ್ತ ತಿರುಗಿಯೂ ನೋಡಿಲ್ಲ. ಕೆ.ಆರ್.ನಗರ ತಾಲ್ಲೂಕಿನ ಮಾವತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡೇನಹಳ್ಳಿ ಗ್ರಾಮದ ಜನತೆಗೆ  ‘ಆಶ್ರಯ ಯೋಜನೆ’ ಅಡಿ ಸರ್ಕಾರ ಸೂರಿಲ್ಲದ ಬಡ ಜನತೆಗೆ ಸೂರು ನೀಡಲು ಮುಂದಾದರೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಸರ್ಕಾರದ ಸವಲತ್ತು ಅರ್ಹ ಬಡಜನತೆಯ ಕೈ ಸೇರದೆ ಮರೀಚಿಕೆಯಾಗಿದೆ.

ಗೌಡೇನಹಳ್ಳಿ ಗ್ರಾಮದಲ್ಲಿ ಸುಮಾರು 400ಕ್ಕೂ ಕುಟುಂಬಗಳಿದ್ದು, ಒಂದು ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಒಂದೇ ಮನೆಯಲ್ಲಿ ಹಲವು ಕುಟುಂಬಗಳು ವಾಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವ 60 ಕುಟುಂಬಗಳನ್ನು ಗುರುತಿಸಿ ಸೂರು ಒದಗಿಸಬೇಕು ಎಂದು ತೀರ್ಮಾನಿಸಲಾಯಿತು. ಅದರಂತೆ ಗ್ರಾಮದ ಪಕ್ಕದಲ್ಲೇ ಅಂದು ಒಂದು ಎಕರೆ ಜಮೀನಿಗೆ ರೂ.40 ಸಾವಿರದಂತೆ ಮೂರು ಎಕರೆ ಜಮೀನು ಖರೀದಿ ಮಾಡಿ ಬಡಾವಣೆಯನ್ನು ಸಿದ್ಧಪಡಿಸಿ ಅದರಲ್ಲಿ ಉದ್ಯಾನ ಅಲ್ಲದೆ ದೇವಾಲಯವನ್ನು ನಿರ್ಮಿಸಲು ನಿವೇಶನವನ್ನು ಬಿಟ್ಟು ಉಳಿದ 60 ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಬೇಕು ಎಂದು ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

ಆದರೆ, ಅಲ್ಲಿಂದ ಇಲ್ಲಿಯ ತನಕ ಅಧಿಕಾರ ನಡೆಸಿದ ಯಾವುದೇ ಚುನಾಯಿತ ಪ್ರತಿನಿಧಿಗಳು ಗೌಡೇನಹಳ್ಳಿಯ ಸೂರಿಲ್ಲದ ಬಡಜನತೆಯ ಕೂಗಿಗೆ ಸ್ಪಂದಿಸಲ್ಲೇ ಇಲ್ಲ. ಇತ್ತೀಚೆಗೆ ಮಾವತ್ತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಚಿದಂಬರ್ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಹಲವು ಸಾರಿ ಗ್ರಾಮಸಭೆ ಕರೆದರೂ ಫಲಾನುಭವಿಗಳನ್ನು ಆಯ್ಕೆ ಮಾಡಲು ಮಾತ್ರ ಸಾಧ್ಯವಾಗಿಲ್ಲ.

ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಸೂರಿಲ್ಲದ ಬಡ ಜನತೆಗೆ ಸೂರು ನೀಡಲು ನಿವೇಶನದ ಸಮಸ್ಯೆಯೇ ದೊಡ್ಡದಾಗಿ ಇರುವಾಗ, ನಿವೇಶನವಿದ್ದು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಹತ್ತು ವರ್ಷಗಳು ಕಳೆದಿರುವುದು ಮಾತ್ರ ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕಾಟ ಮಾಡಿದಂತೆ ಆಗುತ್ತಿದೆ. ಶಾಸಕ ಸಾ.ರಾ.ಮಹೇಶ್ ಇತ್ತ ಗಮನಹರಿಸಿ ತಮಗೆ ಸೂರು ಸಿಗುವಂತೆ ಮಾಡುವರೇ ಎಂದು ನಿವೇಶನಾಕ್ಷಾಂಕಿಗಳು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.