ADVERTISEMENT

ನೀರು ಇದೆ: ಸಮಸ್ಯೆಯೂ ಜಾಸ್ತಿ ಇದೆ!

ಎಚ್.ಎಸ್.ಸಚ್ಚಿತ್
Published 11 ಜನವರಿ 2012, 9:00 IST
Last Updated 11 ಜನವರಿ 2012, 9:00 IST

ಹುಣಸೂರು: ಗೋವಿಂದನಹಳ್ಳಿ ಪಂಚಾಯಿತಿಗೆ ಸೇರಿದ ಅಜಾದ್‌ನಗರ ಗ್ರಾಮ ಸಮಸ್ಯೆಗಳ ಸರಪಳಿಯಲ್ಲಿ ಸಿಲುಕಿದ್ದರೂ ಪರಿಹಾರ ಸಿಕ್ಕಿಲ್ಲ. ಸಮಸ್ಯೆಯಲ್ಲಿಯೇ   ಗ್ರಾಮಸ್ಥರು ದಿನದೂಡಬೇಕಾಗಿದೆ.

ಹುಣಸೂರು ಪಟ್ಟಣದಿಂದ 3 ಕಿ.ಮಿ. ದೂರದಲ್ಲಿರುವ ಈ ಗ್ರಾಮ ಗೋವಿಂದನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ಪಂಚಾಯಿತಿಗೆ ಬರುವ ಅನುದಾನದಲ್ಲಿ ಅಲ್ಪ- ಸ್ವಲ್ಪ ಕಾಮಗಾರಿ ನಡೆಸಿದ್ದರೂ ರಸ್ತೆ ಒತ್ತುವರಿ ತೆರವು ಕಾಣದೇ ಎಲ್ಲವೂ ಗಲ್ಲಿ ರಸ್ತೆಗಳಾಗಿ ಪರಿಣಮಿಸಿವೆ.

ರಾಷ್ಟ್ರೀಯ ಉದ್ಯಾನವನ ನಾಗರಹೊಳೆ ಸಂಪರ್ಕಿಸುವ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಈ ಗ್ರಾಮ, ಮುಖ್ಯ ರಸ್ತೆಯಿಂದ ಗ್ರಾಮದೊಳಕ್ಕೆ ಸಂಪರ್ಕಿಸುವ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದರೂ ಪಂಚಾಯಿತಿ ತೆರವಿನ ಕದ ತೆರೆದಿಲ್ಲ.

ಆಜಾದ್‌ನಗರದಲ್ಲಿ 1800 ಜನ ಸಂಖ್ಯೆ ಇದೆ. ಬಹುತೇಕ ಮುಸ್ಲಿಂ ಸಮಾಜಕ್ಕೆ ಸೇರಿದವರು. ಇತರರು 50-60 ಕುಟುಂಬಗಳು ಇವೆ. ಹಿಂದು ಮುಸ್ಲಿಂ      ಸಮಾಜದ ನಾಗರಿಕರಲ್ಲಿ ಭಾವನಾತ್ಮಕ ಸಂಬಂಧಗಳು ಬೆಸೆದಿವೆ. ಗ್ರಾಮದಲ್ಲಿ ಈವರೆಗೆ ಯಾವುದೇ ಧಾರ್ಮಿಕ   ಕಲಹಗಳಿಲ್ಲದೇ ಒಬ್ಬರನ್ನೊಬ್ಬರು ಅರಿತು  ಜೀವನ ನಡೆಸಿರುವುದು ಗಮನಾರ್ಹ.

ಆಜಾದ್‌ನಗರ ಗ್ರಾಮದೊಳಗೆ ಪ್ರವೇಶಿಸುತ್ತಿದ್ದಂತೆ ಪ್ರತಿಯೊಂದು ಮನೆ ಮುಂಭಾಗದಲ್ಲಿ 3-4 ಅಡಿ ಆಳದ ಗುಂಡಿ ತೋಡಿದ್ದಾರೆ. ಇದೇನಿದು ಗುಂಡಿ ಎಂದು ಪ್ರಶ್ನಿಸುತ್ತಿದ್ದಂತೆ ಮಹಿಳೆಯರು ಗ್ರಾಮ ಪಂಚಾಯಿತಿ ಶಪಿಸಲು ಆರಂಭಿಸುತ್ತಾರೆ. ನೀರಿನ ಸಮಸ್ಯೆ ಇಲ್ಲ ಸ್ವಾಮಿ, ಆದರೆ ಗುಂಡಿಯಿಂದ ನೀರು ದಿನವೂ ಎತ್ತಿ ಮನೆಯೊಳಗೆ ಸೇರಿಸಬೇಕಾಗಿದೆ. ಆನಾರೋಗ್ಯವಿರುವವರು  ನೀರು           ಹಿಡಿಯುವುದು ತುಂಬ ಕಷ್ಟಕರ ಎನ್ನುತ್ತಾರೆ 60 ವರ್ಷದ ಬತುಲ್.

ಗೋವಿಂದನಹಳ್ಳಿ ಗ್ರಾಮ ಪಂಚಾಯಿತಿಯ 5 ಸದಸ್ಯರು ಅಜಾದ್‌ನಗರದಲ್ಲೇ ವಾಸಿಸುತ್ತಿದ್ದಾರೆ. ಕುಡಿಯುವ ನೀರು ಸರಬರಾಜು ವ್ಯವಸ್ಥೆ ಸುವ್ಯಸ್ಥಿತಗೊಳಿಸುವಂತೆ ಬೇಡಿಕೆ ಇಟ್ಟಿದ್ದರೂ ಒಬ್ಬರೂ ಮನವಿಗೆ ಸ್ಪಂದಿಸಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಚರಂಡಿ: ಗ್ರಾಮದೊಳಗೆ ಶುಚಿತ್ವದ ಕೊರತೆ ಕಾಡುತ್ತಿದೆ. ವ್ಯವಸ್ಥಿತ ಚರಂಡಿಗಳಿಲ್ಲದೆ ಮನೆಯ ಬಳಸಿದ ನೀರು ಮತ್ತು ಮಳೆ ನೀರು ಎಲ್ಲವೂ ರಸ್ತೆಯಲ್ಲೇ ಹರಿದು ಹೋಗಬೇಕಾಗಿದೆ. ಗ್ರಾಮದೊಳಗೆ ದುರ್ವಾಸನೆ ರಾಚುತ್ತಿದ್ದರೂ ಜನಪ್ರತಿನಿಧಿಗಳು ತಲೆ ಕೆಡಿಸಿಕೊಂಡಿಲ್ಲ ಎನ್ನುತ್ತಾರೆ ನಜೀರ್.

ಗ್ರಾಮದೊಳಗೆ ಕುಡಿಯಲು ಯೋಗ್ಯವಲ್ಲದ ಕೊಳವೆ ಬಾವಿ ಮುಚ್ಚಬೇಕಿದೆ. ಈ ಬಗ್ಗೆ ಪಂಚಾಯಿತಿ ಗಮನ ನೀಡದೇ ಈಗಲೂ ಗ್ರಾಮದಲ್ಲಿ ಬಳಸುತ್ತಿದ್ದಾರೆ. ಅನಾಹುತ ಆಗುವ ಮುಂಚಿತವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕ್ರಮ ನಿರ್ವಹಿಸಬೇಕಾಗಿದೆ. ಅಜಾದ್‌ನಗರ ಹೆಸರಿಗಷ್ಟೇ ಸೀಮಿತಗೊಂಡಿದ್ದು, ಸಮಸ್ಯೆಗಳಿಂದ ಎಂದು  `ಆಜಾದ್~ ಆಗುವುದೇ ಎಂಬ ಅನುಮಾನ ದಿನಂಪ್ರತಿ ಕಾಡುತ್ತಿದೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.