ADVERTISEMENT

ಪಿಡಿಓ ಕರ್ತವ್ಯ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 11:20 IST
Last Updated 26 ಸೆಪ್ಟೆಂಬರ್ 2011, 11:20 IST

ಪಿರಿಯಾಪಟ್ಟಣ: ತಾಲ್ಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಅವರು ಪಂಚಾಯಿತಿ ಅಭಿವೃದ್ಧಿ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೇಣುಕ ಆರೋಪಿಸಿದ್ದಾರೆ.

ಈ ಕುರಿತು ಗ್ರಾಮ ಪಂಚಾಯಿತಿಯ ಹತ್ತು ಸದಸ್ಯರೊಂದಿಗೆ ಜಂಟಿ ಹೇಳಿಕೆ ನೀಡಿರುವ ಅವರು ಪಿಡಿಓ ಆಶಾ ಅವರು ಸ್ಥಳೀಯ ರಾಜಕೀಯ ಹಿತಾಸಕ್ತಿಗೆ ಬಲಿಯಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಅಥವಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರಿದ್ದಾರೆ.

ಪಕ್ಕದ ಚೆನ್ನಕಲ್ಲು ಕಾವಲು ಗ್ರಾಮ ಪಂಚಾಯಿತಿ ಪಿಡಿಓ ಆಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಅವರ ಪತಿಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯ ಸಮಸ್ಯೆಗಳ ಅರಿವಿಲ್ಲದೆ ಕಚೇರಿಯಲ್ಲಿ ಸದಾ ಲಭ್ಯವಿರುವುದಿಲ್ಲ ಎಂದು ಆರೋಪಿಸಿದ್ದಾರೆ.

ಸರ್ಕಾರಿ ಆಶ್ರಯ ಯೋಜನೆಯ ಮನೆಗಳು ಮತ್ತು ನಿವೇಶನಗಳನ್ನು ನಿಯಮ ಬಾಹಿರವಾಗಿ ಮಾರಾಟ ಮಾಡಲು ದೃಢೀಕರಣ ಪತ್ರ ನೀಡಿದ್ದಾರೆ ಎಂದು ದೂರಿದ್ದಾರೆ. ಗ್ರಾಮ ಪಂಚಾಯಿತಿಯ ಸಭಾ ನಿರ್ಣಯವನ್ನು ಜಾರಿಗೆ ತರದೆ ಮತ್ತು ಸಂಬಂಧಪಟ್ಟ ಇಲಾಖೆಗೆ ಕಳುಹಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕೂಡಲೆ ಪಿಡಿಓ ಅವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅಧಿಕಾರಿಗಳು ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ವಹಿಸಿದಲ್ಲಿ ತಾಲ್ಲೂಕು ಪಂಚಾಯಿತಿ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.