ADVERTISEMENT

ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 11:55 IST
Last Updated 28 ಜನವರಿ 2012, 11:55 IST

ಮೈಸೂರು: ಮೈಸೂರು ವಿವಿ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಶಿವಬಸವಯ್ಯನವರು ದಲಿತ ಎಂಬ ಕಾರಣಕ್ಕೆ ವಿವಿಯು ಅವರನ್ನು ತ್ರಿಶಂಕು ಸ್ಥಿತಿಯಲ್ಲಿ ಇಟ್ಟಿದೆ. ಆದ್ದರಿಂದ ಅವರನ್ನು ಕೂಡಲೇ ಮರು ನೇಮಕ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು ಮೈಸೂರು ವಿವಿ ಕ್ರಾಫರ್ಡ್ ಹಾಲ್ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ವಿವಿಯ ಹಿರಿಯ ಅಧಿಕಾರಿಗಳು ದಲಿತ ವಿದ್ಯಾರ್ಥಿಗಳಿಗೆ ಕಿರಕುಳ ನೀಡುತ್ತಿದ್ದಾರೆ. ಶೋಷಿತ ವಿದ್ಯಾರ್ಥಿಗಳು ತಮಗಾದ ಅನ್ಯಾಯದ ಬಗ್ಗೆ ದನಿ ಎತ್ತಿದರೆ ಪೊಲೀಸರ ಮೂಲಕ ವಿದ್ಯಾರ್ಥಿಗಳಿಗೆ ಭಯ ಉಂಟು ಮಾಡಿ ಬೆದರಿಸಿದ್ದಾರೆ. ಆ ಮೂಲಕ ಶೈಕ್ಷಣಿಕ ವಾತಾವರಣದಲ್ಲಿ ಭಯೋತ್ಪಾದನೆ ಹುಟ್ಟು ಹಾಕುತ್ತಿದ್ದಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮನ್ವಯ ವೇದಿಕೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರಾದ ಮಲ್ಲೇಶ್ ಚುಂಚನಹಳ್ಳಿ, ಸೋಮಯ್ಯ ಮಲೆಯೂರು, ಹರಿಹರ ಆನಂದಸ್ವಾಮಿ, ಗಂಗಾಧರ ಹೈವೇ, ದೊಡ್ಡರಾಜು, ನಂಜುಂಡರಾಜು, ಶ್ರೀನಿವಾಸ್ ಬಂಬೂಬಜಾರ್, ಕೆ.ಪಿ. ಮಹಾಲಿಂಗು ಕಲ್ಕುಂದ, ದೊಡ್ಡಸಿದ್ದು ಹಾದನೂರ, ಪುಟ್ಟಮಾದು ಕೋಟೆ, ಮಹದೇವಯ್ಯ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.