ADVERTISEMENT

ಪ್ರಜಾವಾಣಿ ಡೆಕ್ಕನ್ ಹೆರಲ್ಡ್ ಚಿತ್ರಕಲಾ ಸ್ಪರ್ಧೆ: ವರ್ಣಚಿತ್ರ ಪ್ರತಿಭೆ ಅನಾವರಣ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 7:25 IST
Last Updated 22 ಅಕ್ಟೋಬರ್ 2012, 7:25 IST

ಮೈಸೂರು: ಸೃಜಶೀಲತೆ, ಕಲ್ಪನೆ, ವರ್ಣ ಸಂಯೋಜನೆಯ ಕಸುವನ್ನು ಚಿಣ್ಣರು  ಪ್ರದರ್ಶಿಸಿದರು. ಪ್ರಾಣಿಗಳು, ನಗರ ಜೀವನ, ಮಾಹಿತಿತಂತ್ರಜ್ಞಾನ, ಪ್ರಕೃತಿ ಸೊಬಗು ಇತ್ಯಾದಿ ಸುಂದರ ಚಿತ್ರಗಳನ್ನು ಮೂಡಿಸಿ ಮಕ್ಕಳು ಜಾಣ್ಮೆ ಮೆರೆದರು.

ದಸರಾ ಪ್ರಯುಕ್ತ ಶಾಲಾ ಮಕ್ಕಳಿಗಾಗಿ `ಪ್ರಜಾವಾಣಿ~ `ಡೆಕ್ಕನ್ ಹೆರಲ್ಡ್~ ವತಿಯಿಂದ ಯಾದವಗಿರಿಯ ರಾಮಕೃಷ್ಣ ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣ ಸಂಸ್ಥೆಯಲ್ಲಿ (ರಿಮ್ಸೆ) ಭಾನುವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಆಕೃತಿಗಳನ್ನು ರಚಿಸಿ ಸಂಭ್ರಮಿಸಿದ ಬಗೆ ಇದು. 4 ರಿಂದ 7 ನೇ ತರಗತಿ ಮತ್ತು 8ರಿಂದ10 ನೇ ತರಗತಿ ಎರಡು ವಿಭಾಗದಲ್ಲಿ ಸ್ಪರ್ಧೆ ಆಯೋಜಿಸ ಲಾಗಿತ್ತು. ಸ್ಪರ್ಧೆಯಲ್ಲಿ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳ ಚಿಂತನಾಲಹರಿ, ಮೇಧಾಶಕ್ತಿ, ಸಾಂಸ್ಕೃತಿಕ ಪ್ರೌಢಿಮೆ ಯನ್ನು ಚಿತ್ರಗಳು ಬಿಂಬಿಸುತ್ತಿದ್ದವು. ಮಕ್ಕಳು ಉತ್ಸಾಹದಿಂದಲೇ ಸ್ಪರ್ಧೆ ಯಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿ ಲೋಕದ ವಿಸ್ಮಯ ಪ್ರಪಂಚದ ಅರಿವಿನ ಚಿತ್ರಜಗತ್ತು ಅಲ್ಲಿ ಅನಾವರಣ ಗೊಂಡಿತ್ತು. ರೇಖೆಗಳ ಅಂಗಳದಲ್ಲಿ ವರ್ಣ ಮಾಂತ್ರಿಕತೆ ಮೆರೆದು ಚೆಲುವಿನ ಚಿತ್ತಾರಗಳನ್ನು ಸೃಷ್ಟಿಸಿದ್ದರು. ಭಿತ್ತಿಗಳಲ್ಲಿ ವಿಭಿನ್ನ ಸಂದೇಶಗಳನ್ನು (ಪರಿಸರ ನಾಶದ ಅಪಾಯ, ಪ್ರಾಣಿಸಂಕುಲ ರಕ್ಷಣೆ, ತಂತ್ರಜ್ಞಾನದ ಅವಲಂಬನೆ...) ಮೂಡಿಸಿದ್ದರು.

ಒಟ್ಟಿನಲ್ಲಿ ಈ ಚಿತ್ರಸ್ಪರ್ಧೆ ಮಕ್ಕಳ ಭಾವನೆಗಳ ಅಭಿವ್ಯಕ್ತಿಗೆ ವೇದಿಕೆಯನ್ನು ಒದಗಿಸಿತು. ಇನ್ನು ರಿಮ್ಸೆಯ ಬಿ.ಎಡ್ ವಿದ್ಯಾಲಯದ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧಾಳುಗಳ ಹುಮ್ಮಸ್ಸಿಗೆ ಸಾಥ್ ನೀಡಿದರು. ರಾಮಕೃಷ್ಣ ಆಶ್ರಮದ ಸ್ವಾಮಿ ಮಹೇಶಾತ್ಮಾನಂದಜೀ ಅವರು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ಏಕಾಗ್ರತೆ ವೃದ್ಧಿ
ಚಿತ್ರಕಲಾ ಸ್ಪರ್ಧೆಗಳಲ್ಲಿ ಪಾಲ್ಗೊ ಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಕ್ರಿಯಾಶೀಲತೆ, ಸೃಜನ ಶೀಲತೆ ವೃದ್ಧಿಸುತ್ತದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಅನಾವರಣ ಗೊಳ್ಳುತ್ತವೆ. ಕ್ರೀಡೆ, ಸಂಗೀತ, ಚಿತ್ರಕಲೆ ಇತ್ಯಾದಿ ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಆಸಕ್ತಿಯನ್ನು ಹೆಚ್ಚಿಸುತ್ತವೆ.
- ಸ್ವಾಮಿ ಮಹೇಶಾತ್ಮಾನಂದಜಿ,  ರಾಮಕೃಷ್ಣ ಆಧ್ಯಾತ್ಮಿಕ -ನೈತಿಕ ಶಿಕ್ಷಣ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.