ADVERTISEMENT

`ಪ್ರತಿ ತಿಂಗಳು ಪಿಂಚಣಿ ಅದಾಲತ್ ನಡೆಸಿ'

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 8:32 IST
Last Updated 24 ಜೂನ್ 2013, 8:32 IST

ಮೈಸೂರು: `ಅಧಿಕಾರಿಗಳು ಪ್ರತಿ ತಿಂಗಳು ಕಡ್ಡಾಯವಾಗಿ ಪಿಂಚಣಿ ಅದಲಾತ್ ಮಾಡಿ ಸಮಸ್ಯೆಗಳನ್ನು ಪರಿಹರಿಸಬೇಕು. ಕೆಳಮಟ್ಟದ ಅಧಿಕಾರಿಗಳು ಕೆಲಸ ಮಾಡುವಂತೆ ಹಿರಿಯ ಅಧಿಕಾರಿಗಳು ಪ್ರೇರೇಪಿಸಬೇಕು' ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಶ್ರೀನಿವಾಸ ಪ್ರಸಾದ್ ಕರೆ ನೀಡಿದರು.

ಕಂದಾಯ ಇಲಾಖೆ ವತಿಯಿಂದ ನಂಜನಗೂಡು ತಾಲ್ಲೂಕು ದೊಡ್ಡಕೌಲಂದೆ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ `ಪಿಂಚಣಿ ಅದಾಲತ್' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. `ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಆದರೆ, ಸರ್ಕಾರದ ಸವಲತ್ತುಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಕೆಳಮಟ್ಟದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಗ್ರಾಮೀಣ ಜನರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವುದು ಅಧಿಕಾರಿಗಳ ಜವಾಬ್ದಾರಿ.

ರಾಷ್ಟ್ರೀಯ ಭದ್ರತಾ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ತಲುಪಿಸಬೇಕು ಎಂಬ ಗುರಿ ಹೊಂದಲಾಗಿದೆ. ಹಾಗಾಗಿ, ಇನ್ನು ಮುಂದೆ ಪ್ರತಿ ತಿಂಗಳು 1 ರಿಂದ 15 ನೇ ತಾರೀಕಿನೊಳಗೆ ಹೋಬಳಿಮಟ್ಟದಲ್ಲಿ ಪಿಂಚಣಿ ಅದಾಲತ್‌ಗಳನ್ನು ಮಾಡುವ ಮೂಲಕ 5-6 ತಿಂಗಳ ಒಳಗೆ ಪಿಂಚಣಿ ಸಮಸ್ಯೆಗಳನ್ನು ಪರಿಹರಿಸಬೇಕು' ಎಂದು ಹೇಳಿದರು.

ಮಧ್ಯವರ್ತಿಗಳ ಹಾವಳಿ ತಪ್ಪಿಸಿ: `ಪಿಂಚಣಿ ದೊರಕದ ಗ್ರಾಮೀಣ ಭಾಗದ ದುರ್ಬಲ ವರ್ಗದ ಜನರು ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಮೇಲಿನ ಅಧಿಕಾರಿಗಳು ಕೆಳಹಂತದ ಅಧಿಕಾರಿಗಳಿಗೆ ಸರಿಯಾದ ಮಾರ್ಗದರ್ಶನ ನೀಡುವ ಜೊತೆಗೆ ಗ್ರಾಮೀಣ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಿದರೆ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬಹುದು' ಎಂದು ತಿಳಿಸಿದರು.

ಅವಿವಾಹಿತ, ವಿಚ್ಛೇಧಿತ ಮಹಿಳೆಯರಿಗೆ ಪಿಂಚಣಿ: `ರಾಷ್ಟ್ರೀಯ ಭದ್ರತಾ ಯೋಜನೆಯಡಿ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ವೇತನವನ್ನು ನೀಡಲಾಗುತ್ತಿದೆ. ಇನ್ನು ಮುಂದೆ 40 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳೆಯರು ಮತ್ತು ವಿಚ್ಛೇಧಿತ ಮಹಿಳೆಯರಿಗೂ ಪಿಂಚಣಿ ನೀಡಲು ಚಿಂತನೆ ನಡೆಸಲಾಗಿದೆ. ಬಜೆಟ್‌ನಲ್ಲಿ ಇದಕ್ಕೆ ಬೇಕಾದ ಹಣವನ್ನು ಮೀಸಲಿಡಲಾಗುವುದು' ಎಂದು ಹೇಳಿದರು.

`ರಾಜ್ಯದಲ್ಲಿ ಜಾರಿ ತರಲಾದ ಜನಪರ ಕಾರ್ಯಕ್ರಮಗಳು ಬೇರಾವ ದೇಶದಲ್ಲೂ ಇಲ್ಲ. ಆದರೂ, ಸರ್ಕಾರದ ಸೌಲಭ್ಯಗಳು ಜನರಿಗೆ ಮುಟ್ಟುತ್ತಿಲ್ಲ. ರೈತರ ಬದುಕು ಹಸನಾಗಿಲ್ಲ. ಓಟು ಕೊಟ್ಟವರಿಗೆ ಸರ್ಕಾರದ ಸವಲತ್ತುಗಳನ್ನು ನೀಡುವುದು ನಮ್ಮ ಜವಾಬ್ದಾರಿ. ಜನರು ಸಹ ಸರ್ಕಾರದ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು' ಎಂದು ಕರೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT