ADVERTISEMENT

ಫಲ ಪೂರ್ಣಿಮೆ: ಭಕ್ತರ ಮಹಾಪೂರ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 8:33 IST
Last Updated 24 ಜೂನ್ 2013, 8:33 IST

ನಂಜನಗೂಡು: `ದಕ್ಷಿಣಕಾಶಿ' ಎಂದೇ ಪ್ರಖ್ಯಾತಿ ಹೊಂದಿರುವ ಇಲ್ಲಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ `ಫಲ ಪೂರ್ಣಿಮೆ'  ದಿನವಾದ ಭಾನುವಾರ ಭಕ್ತರ ಮಹಾಪೂರವೇ ಹರಿದು ಬಂತು. ವಿಶೇಷ ದರ್ಶನದ ಟಿಕೆಟ್ ಮಾರಾಟದಿಂದಲೇ ಸುಮಾರು 6.10 ಲಕ್ಷ ರೂಪಾಯಿ ಒಂದು ದಿನದಲ್ಲಿ ಸಂಗ್ರಹವಾಗಿದೆ.

ದೇವಾಲಯದ ಮುಖ್ಯದ್ವಾರವನ್ನು ಬೆಳಿಗ್ಗೆ 5 ಗಂಟೆಗೆ ತೆರೆಯಲಾಯಿತು. ಸ್ಥಳೀಯರು ಮತ್ತು ಇತರೆಡೆಯಿಂದ ಬಂದಿದ್ದ ಭಕ್ತರು ಸರದಿ ಸಾಲಿನಲ್ಲಿ ದೇವರ ದರ್ಶನ ಪಡೆಯಲು ಮುಗಿಬಿದ್ದರು. ನಾಡಿನ ವಿವಿಧೆಡೆಯಿಂದ ಬೆಳಿಗ್ಗೆಯಿಂದ ಸಂಜೆವರೆಗೂ ಭಕ್ತರು ಆಗಮಿಸುತ್ತಲೇ ಇದ್ದರು. ಶ್ರೀಕಂಠೇಶ್ವರನ ದರ್ಶನ ಪಡೆಯಲು ಎಲ್ಲ ದಿನಗಳಿಗಿಂತ ತಿಂಗಳ ಹುಣ್ಣಿಮ ದಿನ ಅಧಿಕ ಸಂಖ್ಯೆಯಲ್ಲಿ ಆಗಮಿಸುವುದು ಇಲ್ಲಿನ ವಿಶೇಷವಾಗಿದೆ. ಆದರೆ, ಈ ಭಾನುವಾರ ಫಲ ಪೂರ್ಣಿಮಾ, ಭೂಮಿ- ಕಾರ ಹುಣ್ಣಿಮೆ ಎಂಬ ವಿಶೇಷ ಸೇರಿಕೊಂಡಿದೆ. ಹಾಗಾಗಿ ಸುಮಾರು 40 ಸಾವಿರ ಭಕ್ತರು ಆಗಮಿಸಿದ್ದರು ಎಂದು ಅಂದಾಜಿಸಲಾಗಿದೆ. 

ರೂ. 6.10 ಲಕ್ಷ ಸಂಗ್ರಹ:  ದೇವರ ನೇರ ದರ್ಶನಕ್ಕೆ 100 ರೂಪಾಯಿ ಮುಖ ಬೆಲೆಯ ಟಿಕೆಟ್ ಮಾರಾಟದಿಂದ ರೂ 4.76 ಲಕ್ಷ,  30 ರೂಪಾಯಿ ಟಿಕೆಟ್ ಮಾರಾಟದಿಂದ ರೂ 1.34 ಲಕ್ಷ, ಅಲ್ಲದೆ ಸೀರೆ, ಪಂಚೆ, ವಸ್ತ್ರಗಳ ಹರಾಜಿನಿಂದ 30 ಸಾವಿರ ರೂಪಾಯಿ ಆದಾಯ ಬಂದಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ವಿ. ಡಾವಣಗೇರಿ `ಪ್ರಜಾವಾಣಿ'ಗೆ ತಿಳಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಂದೋಬಸ್ತ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.